ಕೋರಮಂಡಲ್ ಕಾರ್ಖಾನೆ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ
KannadaprabhaNewsNetwork | Published : Oct 19 2023, 12:46 AM IST
ಕೋರಮಂಡಲ್ ಕಾರ್ಖಾನೆ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ
ಸಾರಾಂಶ
ಕೋರಮಂಡಲ್ ಕಾರ್ಖಾನೆ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ
- ಕೆಲವರಿಂದ ಕಾರ್ಖಾನೆ ಮತ್ತು ವೈಯಕ್ತಿಕವಾಗಿ ನನ್ನ ವಿರುದ್ಧ ಅಪಪ್ರಚಾರ - ವಿ.ಜೆ.ರವಿರೆಡ್ಡಿ ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ ಕೋರ ಮಂಡಲ್ ಸಕ್ಕರೆ ಕಾರ್ಖಾನೆ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದರೂ ಕೆಲವರು ಕಾರ್ಖಾನೆ ಹಾಗೂ ವೈಯಕ್ತಿಕವಾಗಿ ನನ್ನ ವಿರುದ್ಧ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಮಾಕವಳ್ಳಿ ಕಾರ್ಖಾನೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಉಪಾಧ್ಯಕ್ಷನಾಗಿ ಕಬ್ಬು ಪೂರೈಸುವ ಅನ್ನದಾತ ರೈತರ ಪರ ಸಮನ್ವಯ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು. ರೈತರು ಉಳಿದರೆ ಕಾರ್ಖಾನೆ ಉಳಿಯುತ್ತದೆ. ಕಾರ್ಖಾನೆ ಉಳಿದರೆ ರೈತರ ಬದುಕು ಹಸನಾಗುತ್ತದೆ. ಕಾರ್ಖಾನೆಯ ಎಥೆನಾಲ್ ಘಟಕ ಸ್ಥಾಪನೆಗೆ ಕೆಲವು ಪರಿಸರ ಹೋರಾಗಾರರು ತಕರಾರು ಮಾಡುತ್ತಿದ್ದರೂ ನಾನು ವೈಯಕ್ತಿಕವಾಗಿ ಯಾವುದೇ ಪರಿಸರ ಹೋರಾಟಗಾರರನ್ನು ಕಿಡಿಗೇಡಿಗಳೆಂದು ಟೀಕಿಸಿ ಲಘುವಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ರೈತರು ಸೇರಿದಂತೆ ಯಾರನ್ನೇ ಆಗಲಿ ಅಪಮಾನ ಮಾಡುವ ಅಥವಾ ಹೀಯಾಳಿಸುವ ಸಂಸ್ಕೃತಿ ನಮ್ಮದಲ್ಲ. ಆದರೂ ಕೆಲವರು ನಾನು ರೈತ ಹೋರಾಟಗಾರರನ್ನು ಕಿಡಿಗೇಡಿಗಳೆಂದು ಟೀಕಿಸಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಕಿಡಿಗೇಡಿ ಎನ್ನುವ ಪದವೇ ಗೊತ್ತಿಲ್ಲ ಎಂದರು. ಚಳವಳಿಗಳು ಸಮಾಜದಲ್ಲಿ ಜೀವಂತಿಕೆಯ ಸಂಕೇತಗಳು. ನಾನು ಯಾವಾಗಲೂ ಗೌರವಿಸುತ್ತೇನೆ. ಚಳವಳಿಗಾರರು ಕಾರ್ಖಾನೆಯ ಆವರಣದಲ್ಲಿ ಯಾವಾಗ ಬೇಕಾದರೂ ಬಂದು ಇಲ್ಲಿನ ಪರಿಸರ ಮಾಲಿನ್ಯದ ಬಗ್ಗೆ ಸತ್ಯದರ್ಶನ ಮಾಡಲಿ. ಅವರನ್ನು ಕಾರ್ಖಾನೆ ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು. ಕೆಲವರು ಹಳೆಯ ಕಾಲದ ಚಿತ್ರಗಳನ್ನು ಹಾಕಿ ಕಾರ್ಖಾನೆಯ ಬಗ್ಗೆ ಅಪಪ್ರಚಾರ ಮಾಡುವುದರಿಂದ ಕಾರ್ಖಾನೆಯ ಆಡಳಿತ ಮಂಡಳಿಗೆ ಮಾನಸಿಕವಾಗಿ ನೋವಾಗುತ್ತದೆ ಎಂದರು. ತಾಲೂಕಿನ 13 ಸಾವಿರ ರೈತರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಕಾರ್ಖಾನೆ ತನ್ನ ಮಲೀನ ನೀರನ್ನು ಕೆಳಭಾಗದ ಹೇಮಾವತಿ ನದಿಗೆ ಬಿಡುತ್ತಿದೆ ಮತ್ತು ಕಾರ್ಖಾನೆಯ ಹಾರು ಬೂದಿಯಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಕೆಲವರು ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ನಿರಾಧಾರವಾಗಿದೆ ಎಂದರು. ಕಾರ್ಖಾನೆ ತನ್ನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ತನ್ನ ಆವರಣದಲಿಯೇ ಮರಗಿಡಗಳನ್ನು ನೆಟ್ಟು ಹಸಿರು ವಲಯವನ್ನು ಸ್ಥಾಪಿಸಿದೆ. ತ್ಯಾಜ್ಯ ನೀರನ್ನು 11 ಹಂತದಲ್ಲಿ ಶುದ್ಧೀಕರಿಸಿ ಬಳಕೆ ಮಾಡುತ್ತಿದೆ. ಇದಕ್ಕೆ ಕೋಟ್ಯಂತರ ರು. ವೆಚ್ಚದ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿದೆ. ಶುದ್ಧೀಕರಿಸಿದ ನೀರಿನ ಕೊಳದಲ್ಲಿ ಕಪ್ಪೆ, ಮೀನು ಮುಂತಾದ ಜಲಚರಗಳು ವಾಸಿಸುತ್ತಿವೆ. ಇದನ್ನು ಅಪಪ್ರಚಾರ ಮಾಡುತ್ತಿರುವ ಯಾರೂ ಬೇಕಾದರೂ ಬಂದು ಪರಿಶೀಲಿಸಬಹುದು ಹೇಳಿದರು. ಕಾರ್ಖಾನೆ ಆವರಣದಲ್ಲಿರುವ ವಸತಿ ಗೃಹಗಳಲ್ಲಿ 25 ವರ್ಷಗಳಿಂದ ಕಾರ್ಮಿಕರು ವಾಸಿಸುತ್ತಿದ್ದಾರೆ. ಕಾರ್ಮಿಕರಿಗೆ ಇದುವರೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಕಾರ್ಖಾನೆ ರೈತರ ಹಿತದೃಷ್ಟಿಯಿಂದ ಪರಿಸರ ನಿಯಮ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದರು. ಕಾರ್ಖಾನೆಯಲ್ಲಿ 250 ಕೋಟಿ ರು. ವೆಚ್ಚದಲ್ಲಿ ಎಥೆನಾಲ್ ಉತ್ಪನ್ನ ಘಟಕ ಆರಂಭಕ್ಕೆ ಯೋಜಿಸಿದೆ. ಇದರಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರಲ್ಲ. ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದ ಕೆಲವರು ಅಪಪ್ರಚಾರ ಮಾಡಿ ರೈತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು. ತಾಲೂಕಿನ ರೈತರ ಬದುಕನ್ನು ನಾಶಪಡಿಸಿ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರವೂ ಅನುಮತಿಸುವುದಿಲ್ಲ. ಜೊತೆಗೆ ನಮಗೂ ರೈತರ ಬದುಕಿನ ಬಗ್ಗೆ ಕಾಳಜಿ ಇದೆ. ತಾಲೂಕಿನ ಜನತೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಕಾರ್ಖಾನೆಯ ಮೇಲೆ ಭರವಸೆಯಿಟ್ಟು ಎಥೆನಾಲ್ ಘಟಕ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು. 18ಕೆಎಂಎನ್ ಡಿ16 ಮಾಕವಳ್ಳಿ ಕೊರಮಂಡಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಮಾತನಾಡಿದರು.