ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ದೇಶ ಪ್ರಗತಿಯ ಪಥದತ್ತ ಸಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ದೇಶ ಬದಲಾವಣೆ ಕಂಡಿದ್ದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ರಾಷ್ಟ್ರೀಯ ಸಹ ಸಂಚಾಲಕಿ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ಬುಧವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ನಾರಿ ಶಕ್ತಿ ವಂದನಾ ಅಭಿಯಾನ ಹಾಗೂ ಮಹಿಳಾ ಸಂಪರ್ಕ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಳೆದ 10 ವರ್ಷಗಳಿಂದ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವ ಸೃಷ್ಟಿಯಾಗಿದೆ ಎಂದು ಹೇಳಿದರು.
ದೇಶ ಸ್ವಾತಂತ್ರ್ಯಗೊಂಡು ಈಗಾಗಲೇ 77 ವರ್ಷಗಳು ಕಳೆದಿವೆ. ಅದರಲ್ಲಿ 67 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಜವಾದ ಅಭಿವೃದ್ಧಿಯನ್ನು ನೋಡಿದೆವು. ತದ ನಂತರ ಅಭಿವೃದ್ಧಿ ಮುಂದುವರೆಯಲಿಲ್ಲ. ಈಗ ಮತ್ತೆ ಕಳೆದ 9 ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎಂದರು.ನಮ್ಮ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರಂತೆ ನಮ್ಮ ನಡುವೆ ಇದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ಮತ್ತೆ ದೇಶದ ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಪಣ ತೊಡಬೇಕು ಎಂದು ಆಶಿಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ಕೋಟ್ಯಂತರ ಭಾರತೀಯರ 500 ವರ್ಷಗಳ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡಿದ್ದಾರೆ ಎಂದ ಅವರು, ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುವ ಯೋಜನೆ, ದೇಶದ ಸುರಕ್ಷತೆ, ರೈತರ ಹಿತ, ಯುವಕರಿಗೆ ಉದ್ಯೋಗಾವಕಾಶ ಯೋಜನೆ, ರೈಲುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು, ಜಲಜೀವನ್ ಮಿಷನ್, ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆಗಳ ಉಚಿತ ನಿರ್ಮಾಣ, ಉಜ್ವಲ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಧಾನಿಗಳು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಕಾರ್ಯಗಳನ್ನು ವಿವರಿಸಿದರು.ನಾವೆಲ್ಲರೂ ನಮ್ಮ ಮಕ್ಕಳು, ಕುಟುಂಬಕ್ಕೋಸ್ಕರ ಕೆಲಸ ಮಾಡುತ್ತೇವೆ. ಆದರೆ ಪ್ರಧಾನಿಗಳಿಗೆ ಯಾವುದೇ ಕುಟುಂಬ ಇಲ್ಲ. ಅವರು ಹಗಲಿರುಳು ಸೇವೆ ಮಾಡುತ್ತಿರುವುದು ದೇಶದ ಜನರಿಗೋಸ್ಕರ. ಭಾರತವನ್ನು ವಿಶ್ವದ ಗುರುವಿನ ಸಿಂಹಾಸನದ ಮೇಲೆ ರಾರಾಜಿಸುವಂತೆ ಮಾಡುವ ಕಾಲ ಸಮೀಪಿಸುತ್ತಿದೆ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪುರ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಮಹಿಳಾ ಮಂಡಳ ಅಧ್ಯಕ್ಷ ಶಕುಂತಲಾ ಡೋಣವಾಡೆ, ಬೀರೇಶ್ವರ ಚೇರಮನ್ ಜಯಾನಂದ ಜಾಧವ, ಸಂಜಯ ಪಾಟೀಲ ಉಪಸ್ಥಿತರಿದ್ದರು.