ಸಾರಾಂಶ
ಕೇಸರಿ ತ್ಯಾಗ, ಬಿಳಿ ಶಾಂತಿ ಮತ್ತು ಹಸಿರು ಬಣ್ಣ ಪ್ರಗತಿಯ ಸಂಕೇತ. ಈ ಮೂರೂ ಬಣ್ಣಗಳಿಂದ ನಮ್ಮ ರಾಷ್ಟ್ರಧ್ವಜ ನಿರ್ಮಾಣಗೊಂಡಿದೆ.
ಸಂವಿಧಾನ ಜಾಗೃತಿ ಜಾಥಾ, ಮಡಿವಾಳ ಮಾಚಿದೇವರ ಜಯಂತಿ ಮಹೋತ್ಸವ
ಕನ್ನಡಪ್ರಭ ವಾರ್ತೆ ಹಾನಗಲ್ಲಕೇಸರಿ ತ್ಯಾಗ, ಬಿಳಿ ಶಾಂತಿ ಮತ್ತು ಹಸಿರು ಬಣ್ಣ ಪ್ರಗತಿಯ ಸಂಕೇತ. ಈ ಮೂರೂ ಬಣ್ಣಗಳಿಂದ ನಮ್ಮ ರಾಷ್ಟ್ರಧ್ವಜ ನಿರ್ಮಾಣಗೊಂಡಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸಂವಿಧಾನದ ಮೂಲ ಆಶಯಗಳಿಗೆ ಅನುಗುಣವಾಗಿ ಮುನ್ನಡೆದರೆ ದೇಶ ಬಲಿಷ್ಠವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಹಾಗೂ ಮಡಿವಾಳ ಮಾಚಿದೇವರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಾತಿ, ಧರ್ಮ, ಮಂದಿರ, ಮಸೀದಿಗಳ ಆಧಾರದಲ್ಲಿ ಚುನಾವಣೆಗಳಲ್ಲಿ ಮತ ಕೇಳುವುದು, ರಾಜಕಾರಣ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಮೇಲು, ಕೀಳು ಭಾವನೆಯನ್ನು ಯಾವ ಧರ್ಮಗಳೂ ಕೂಡ ಬೋಧಿಸಿಲ್ಲ. ಭಗವದ್ಗೀತೆ, ಖುರಾನ್ ಮತ್ತು ಬೈಬಲ್‌ನ ಆಶಯಗಳಿಗೆ ಅನುಗುಣವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಮೌಲ್ಯ, ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದೇ ನಾವು ದೇಶಕ್ಕೆ ಸಲ್ಲಿಸುವ ನಿಜವಾದ ಗೌರವ ಎಂದ ಅವರು, ವೈರತ್ವದಿಂದ ಸಾಧಿಸಿದ ಯಶಸ್ಸಿಗೆ ಯಾವುದೇ ಮನ್ನಣೆ ಇಲ್ಲ. ಯುವ ಪೀಳಿಗೆ ಈ ದೇಶದ ಭವಿಷ್ಯ. ವಿದ್ಯಾರ್ಥಿಗಳು ಜಾತಿ ನೋಡಿ ಗೆಳೆತನ ಮಾಡುವುದಿಲ್ಲ. ಆದರೆ ಶಿಕ್ಷಣ ಪೂರೈಸಿ ಹೊರಬರುವ ಯುವ ಪೀಳಿಗೆಯ ತಲೆಯಲ್ಲಿ ಈ ಸಮಾಜ ದ್ವೇಷ ಬಿತ್ತುತ್ತಿದೆ. ಈ ದೇಶಕ್ಕೆ ಸಂವಿಧಾನವೇ ಮೊದಲ ಪವಿತ್ರ ಗ್ರಂಥ ಎಂದು ಭಾವಿಸಿದರೆ ಯಾವ ಸಮಸ್ಯೆಗಳೂ ಉದ್ಭವಿಸುವ ಪ್ರಶ್ನೆಯೇ ಇಲ್ಲ ಎಂದರು.ಉಪನ್ಯಾಸಕ ಬಸವರಾಜ ಸವೂರ ಮಾತನಾಡಿ, ನಾವೆಲ್ಲರೂ ಭಾರತೀಯರು. ಏಕತೆಯಿಂದ ಮುನ್ನಡೆಯಬೇಕಿದೆ. ಪ್ರಪಂಚದಲ್ಲಿ ಶ್ರೇಷ್ಠ ಸಂವಿಧಾನ ಹೊಂದಿರುವ ನಾವೆಲ್ಲರೂ ಭಾಗ್ಯಶಾಲಿಗಳು. ೧೨ನೇ ಶತಮಾನದಲ್ಲಿಯೇ ನಮಗೆಲ್ಲ ಶರಣರು ಪ್ರೀತಿಯಿಂದ ಬಾಳಲು ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಸಂವಿಧಾನವೂ ಸಹ ಅದನ್ನೇ ಹೇಳುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷೆ ನೇತ್ರಾ ಪೋಕಳೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಕೀಲಾಬಾನು ಎಲಿಗಾರ, ಡಿಎಸ್‌ಎಸ್ ಮುಖಂಡ ಶೇಕಪ್ಪ ಹರಿಜನ, ಗ್ರಾಪಂ ಸದಸ್ಯರಾದ ಪ್ರಶಾಂತ್ ಕಾಡಪ್ಪನವರ, ಶಿವಶಂಕರಯ್ಯ ಹಿರೇಮಠ, ವಿಜಯಕುಮಾರ್ ಉರಣಕರ್, ಮಹಬೂಬ್ ಅಲಿ ಹುದ್ದಾರ್, ಖಾಜಾ ಮೊಹಿದ್ದೀನ್ ಹರವಿ, ರೇಷ್ಮಾ ತಳವಾರ, ಜಯಲಕ್ಷ್ಮಿ ಹರಿಜನ, ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.