ಅಂದುಕೊಂಡಂತೆ ಎಲ್ಲವೂ ನಡೆದರೆ ಕೇವಲ ಮೂರ‍್ನಾಲ್ಕು ತಿಂಗಳಲ್ಲೇ ಸೌರ ವಿದ್ಯುತ್ ರೈತರ ಕೃಷಿ ಭೂಮಿಗೆ ತಲುಪಲಿದೆ. ಇದನ್ನು ತಾಲೂಕಿನ ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ತರಕಾರಿ, ಹೂ, ಹಣ್ಣು- ಹಂಪಲುಗಳನ್ನು ಬೆಳೆದು ಆರ್ಥಿಕವಾಗಿ ಮುಂದೆ ಬರುವಂತೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈತರ ಕೃಷಿ ಭೂಮಿಗೆ ನೀರು, ವಿದ್ಯುತ್ ಪೂರೈಸಿದ್ದೇ ಆದರೆ ರೈತನ ಬದುಕಷ್ಟೇ ಅಲ್ಲ. ರಾಜ್ಯ ಹಾಗೂ ದೇಶದ ಆರ್ಥಿಕ ಸ್ಥಿತಿಗತಿಯೇ ಬದಲಾಗಲಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.ತಾಲೂಕಿನ ಬಾಣಾವರದ ಜೋಯಿಸರ ಕೊಪ್ಪಲು ಗ್ರಾಮದಲ್ಲಿ ಸೌರ ವಿದ್ಯುತ್ ಘಟಕ ಆರಂಭಕ್ಕೆ ಭೂಮಿಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.

ಕ್ಷೇತ್ರದ ಆಯ್ದ ಭಾಗಗಳಲ್ಲಿ ರೈತರಿಂದ ಒಡಂಬಡಿಕೆ ಮಾಡಿಕೊಂಡು ಪಡೆದಿರುವ ಭೂಮಿಯಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಆರಂಭಿಸಲು ೨೫೦ ಕೋಟಿ ರು. ಅನುದಾನ ತಂದಿದ್ದು, ಇದರಿಂದ ೫೦ ಮೆಗಾವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ಕ್ಷೇತ್ರಕ್ಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆದಂತೆ ರೈತರ ಕೃಷಿ ಚಟುವಟಿಕೆಯಲ್ಲೂ ಭಾರೀ ಬದಲಾವಣೆಗಳಾಗುತ್ತಿವೆ. ರೈತರ ಅಪೇಕ್ಷೆಗೆ ಅನುಗುಣವಾಗಿ ನೀರು ಮತ್ತು ವಿದ್ಯುತ್‌ನ್ನು ಒದಗಿಸಿದ್ದೇ ಆದರೆ ಆರ್ಥಿಕವಾಗಿ ರೈತರು ಸದೃಢವಾಗಲಿದ್ದಾರೆ ಎಂದ ಅವರು, ಈ ಸೌರ ವಿದ್ಯುತ್ ಉತ್ಪಾದನೆಯಿಂದ ೫೦ ಮೆಗಾವ್ಯಾಟ್ ವಿದ್ಯುತ್ ದೊರೆಯಲಿದ್ದು, ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೂ ವಿದ್ಯುತ್ ಲಭ್ಯವಾಗಲಿದೆ. ಹೀಗೆ ದೊರೆಯುವ ವಿದ್ಯುತ್‌ನ್ನು ನೇರವಾಗಿ ರೈತರ ಟಿಸಿ, ಪಂಪ್‌ಸೆಟ್‌ಗಳಿಗೆ ರವಾನಿಸುವುದರಿಂದ ಹಗಲಿನ ವೇಳೆಯೂ ಕನಿಷ್ಠ ೭ ಗಂಟೆ ರೈತರಿಗೆ ವಿದ್ಯುತ್ ಲಭ್ಯವಾಗಲಿದೆ. ಇದರಿಂದ ತಾಲೂಕಿನ ರೈತರ ಬದುಕಿನ ಚಿತ್ರಣವೇ ಬದಲಾಗಲಿದೆ ಎಂದರು.

ಅಂದುಕೊಂಡಂತೆ ಎಲ್ಲವೂ ನಡೆದರೆ ಕೇವಲ ಮೂರ‍್ನಾಲ್ಕು ತಿಂಗಳಲ್ಲೇ ಸೌರ ವಿದ್ಯುತ್ ರೈತರ ಕೃಷಿ ಭೂಮಿಗೆ ತಲುಪಲಿದೆ. ಇದನ್ನು ತಾಲೂಕಿನ ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ತರಕಾರಿ, ಹೂ, ಹಣ್ಣು- ಹಂಪಲುಗಳನ್ನು ಬೆಳೆದು ಆರ್ಥಿಕವಾಗಿ ಮುಂದೆ ಬರುವಂತೆ ಕರೆ ನೀಡಿದರು.

ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಶಾಸಕರ ಅವಿರತ ಶ್ರಮ, ಇಂದು ಬಯಲು ಸೀಮೆಯ ರೈತರ ಬದುಕನ್ನು ಹಸನುಗೊಳಿಸುತ್ತಿದೆ. ಇದರ ಪ್ರಯೋಜನವನ್ನು ಕ್ಷೇತ್ರದ ಜನತೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಇಇ ರಾಜು, ಎಇಇಗಳಾದ ಜಯಪ್ಪ, ಮಂಜುನಾಥ್, ರಘು ನಂದನ್, ಕಾಚಿಘಟ್ಟ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೋಮ ಶೇಖರ್, ಸೆಸ್ಕಾಂ ನಾಮಿನಿ ನಿರ್ದೇಶಕ ಮಂಜುನಾಥ್, ಚಿಕ್ಕೇಗೌಡ, ವಿಜಿ ಕುಮಾರ್, ಬಸವರಾಜು, ಮಹೇಶ್,ಮಾಲತೇಶ್ ಮೊದಲಾದವರಿದ್ದರು.