ನಿವೇಶನ ಹಂಚಿಕೆಗೆ ತೊಡಕಾಗಿದ್ದ ನ್ಯಾಯಾಲಯದ ಸಮಸ್ಯೆ ಇತ್ಯರ್ಥ: ಪಿ.ಎಂ.ನರೇಂದ್ರಸ್ವಾಮಿ

| Published : Oct 10 2024, 02:17 AM IST

ನಿವೇಶನ ಹಂಚಿಕೆಗೆ ತೊಡಕಾಗಿದ್ದ ನ್ಯಾಯಾಲಯದ ಸಮಸ್ಯೆ ಇತ್ಯರ್ಥ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

20 ಮೀ. ರಸ್ತೆಯಲ್ಲಿ ನೀರು, ವಿದ್ಯುತ್ ಹಾಗೂ ಚರಂಡಿ ನೀಡಲು ಸಾಧ್ಯವಿಲ್ಲ. ಈ ಹಿಂದೆ ಮಾಡಲಾಗಿರುವ ನೀಲಿನಕ್ಷೆ ಅವೈಜ್ಞಾನಿಕವಾಗಿದೆ. ಹಳೆಯ ನೀಲಿನಕ್ಷೆ ರದ್ದುಗೊಳಿಸಿ 30 ಮೀಟರ್ ಸುಸಜ್ಜಿತ ರಸ್ತೆ ಸೇರಿದಂತೆ ಮೂಲ ಸೌಲಭ್ಯ ಒಳಗೊಂಡಂತೆ ಹೊಸ ನಕ್ಷೆ ತಯಾರಿಸಲು ಆಶ್ರಯ ಸಮಿತಿ ಸಭೆ ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಡವರಿಗೆ ನಿವೇಶನ ಹಂಚಿಕೆಗೆ ತೊಡಕಾಗಿದ್ದ ಪಟ್ಟಣದ ಶಾಂತಿ ಕಾಲೇಜು ಮುಂಭಾಗ 33 ಎಕರೆ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ಸಮಸ್ಯೆ ಇತ್ಯರ್ಥ ಮಾಡಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಲಯ ಪ್ರಕರಣ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ಬಡವರಿಗೆ ಆದಷ್ಟು ಬೇಗ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಆಯ್ಕೆ ಮಾಡಲಾದ ಎಲ್ಲಾ ಫಲಾನುಭವಿಗಳಿಗೆ ಸೂಕ್ತ ದಾಖಲಾತಿ ಪರಿಶೀಲನೆ ನಡೆಸಿ, ನಿವೇಶನ ಹಂಚಿಕೆ ಮಾಡಲಾಗುವುದು. ನಿವೇಶನ ಹಂಚಿಕೆ ಸಂಬಂಧ ಯಾವುದಾದರೂ ದೂರು ಬಂದರೆ ಪರಿಶೀಲಿಸಲಾಗುವುದು ಎಂದರು.

ಹೊಸ ಬಡಾವಣೆ ನೀಲಿನಕ್ಷೆ ತಯಾರಿಕೆ ಹಾಗೂ ನಿವೇಶನವನ್ನು ಅಭಿವೃದ್ಧಿಗೊಳಿಸಲು ಅನುದಾನ ನೀಡುವಂತೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.

ಪಟ್ಟಣದ ಮಾರೇಹಳ್ಳಿಯ ಬೀರೇಶ್ವರ ದೇವಸ್ಥಾನದ ಸಮೀಪ ಬಡವರಿಗೆ ಹಂಚಿಕೆ ಮಾಡಲಾದ ಆಶ್ರಯ ಬಡಾವಣೆಯಲ್ಲಿ 20 ಮೀಟರ್ ರಸ್ತೆ ಒಳಗೊಂಡ ನೀಲಿನಕ್ಷೆಯನ್ನು ತಯಾರಿಸಿ ಕೆಲವೊಂದು ನಿವೇಶನವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ತಿಳಿಸಿದರು.

20 ಮೀ. ರಸ್ತೆಯಲ್ಲಿ ನೀರು, ವಿದ್ಯುತ್ ಹಾಗೂ ಚರಂಡಿ ನೀಡಲು ಸಾಧ್ಯವಿಲ್ಲ. ಈ ಹಿಂದೆ ಮಾಡಲಾಗಿರುವ ನೀಲಿನಕ್ಷೆ ಅವೈಜ್ಞಾನಿಕವಾಗಿದೆ. ಹಳೆಯ ನೀಲಿನಕ್ಷೆ ರದ್ದುಗೊಳಿಸಿ 30 ಮೀಟರ್ ಸುಸಜ್ಜಿತ ರಸ್ತೆ ಸೇರಿದಂತೆ ಮೂಲ ಸೌಲಭ್ಯ ಒಳಗೊಂಡಂತೆ ಹೊಸ ನಕ್ಷೆ ತಯಾರಿಸಲು ಆಶ್ರಯ ಸಮಿತಿ ಸಭೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಪ್ರಭಾರ ತಹಸೀಲ್ದಾರ್ ಕುಮಾರ್ ಇದ್ದರು.