ಸಾರಾಂಶ
ಬೆಂಗಳೂರು : ಕರ್ನಾಟಕ ಏಕೀಕರಣಕ್ಕಾಗಿ ಹೋರಾಟದ ಬೀಜ ಮೊದಲು ಮೊಳೆತಿದ್ದೇ ಉತ್ತರ ಕರ್ನಾಟಕ ಭಾಗದಲ್ಲಿ ಎನ್ನುವುದನ್ನು ನಾವು ಮರೆಯುವಂತಿಲ್ಲ ಎಂದು ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ.
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ವೀರಲೋಕ ಪುಸ್ತಕ ಪ್ರಕಾಶನ’ ಹೊರ ತಂದಿರುವ ಉತ್ತರ ಕರ್ನಾಟಕ ಭಾಗದ ಲೇಖಕರ ಹತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಮೊದಲು ಕರ್ನಾಟಕ ಎಂದರೆ ಮೈಸೂರು ಪ್ರಾಂತ್ಯ ಎನ್ನುವಂತಿತ್ತು. ಆದರೆ, ಉತ್ತರ ಕರ್ನಾಟಕ ಕೂಡ ಕರ್ನಾಟಕದ ಭಾಗವಾಗಿದೆ. ಕನ್ನಡ ಮಾತನಾಡುವವರು ಇಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದಲೇ ಕನ್ನಡ ಏಕೀರಣದ ಮೊದಲ ಕೂಗು ಎದ್ದಿತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣ ರಾಯರಂತಹ ಹೋರಾಟಗಾರರನ್ನು ಮೆರೆಯಲು ಸಾಧ್ಯವಿಲ್ಲ ಎಂದರು.
ತಾವು ನಿರ್ಮಿಸಿದ ಸಿನಿಮಾ, ಧಾರವಾಹಿಗಳನ್ನು ಉತ್ತರ ಕರ್ನಾಟಕ ಭಾಗದವರು ಪ್ರೋತ್ಸಾಹಿಸಿದ್ದಾರೆ. ಈ ಭಾಗದ ಪುಸ್ತಕಗಳು ಅಲ್ಲಿ ಮತ್ತು ಆ ಭಾಗದ ಪುಸ್ತಕಗಳು ಇಲ್ಲಿ ಬಿಡುಗಡೆಯಾಗಬೇಕು. ಇದರಿಂದ ಕನ್ನಡ ಸಾಹಿತ್ಯ ವಿಶೇಷ ಕೊಡುಗೆ ನೀಡುವ ಜೊತೆಗೆ ನಮ್ಮ ತಿಳಿವಳಿಕೆ ವಿಸ್ತಾರವಾಗುತ್ತದೆ ಎಂದು ಬಿ.ಸುರೇಶ್ ಹೇಳಿದರು.
ವೀರಲೋಕ ಪ್ರಕಾಶನದ ಶ್ರೀನಿವಾಸ್ ಮಾತನಾಡಿ, ಯಾರು ಕೂಡ ಪುಸ್ತಕ ಓದದೇ ಪ್ರತಿಕ್ರಿಯಿಸಬಾರದು. ಅವಕಾಶ ಸಿಗದೇ ಹೋದರೆ ಸ್ಟಾರ್ ಆಗುವುದು ಹೇಗೆ? ಸ್ಟಾರ್ ಹಿಂದಷ್ಟೇ ಹೋದರೆ ಉದಯೋನ್ಮುಖರು ಬೆಳಕಿಗೆ ಬರುವುದಾದರು ಹೇಗೆ? ಅದಕ್ಕಾಗಿಯೇ ವೀರ ಲೋಕ ಹೊಸಬರ ಪುಸ್ತಕಗಳನ್ನು ಹೊರತರುತ್ತಿದೆ. ಮುಂದೊಂದು ದಿನ ಬೇಂದ್ರ, ಕುವೆಂಪು, ಮಾಸ್ತಿ ಅವರಂತಹ ಸಾಹಿತಿಗಳು ಸೃಷ್ಟಿಯಾಗಲಿ ಎಂದರು.
‘ಉತ್ತರ ಪರ್ವ’ ಸಂಪುಟಗಳ ಸಂಪಾದಕ ರಾಗಂ ಮಾತನಾಡಿ, ಉತ್ತರ ಕರ್ನಾಟಕದಲ್ಲಿರುವ ಪ್ರತಿಭಾವಂತರಿಗೆ ವೇದಿಕೆ ಸಿಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್ ಸೇರಿದಂತೆ ಹಲವು ಗಡಿಭಾಗದ ಕನ್ನಡ ಸಾಧಕರು ಮುಂಬೈಗೆ ಹೋಗಿ ಸಾಧನೆ ಮಾಡಿ ಅಲ್ಲಿಯವರಾಗಿ ಚರಿತ್ರೆಯ ಪುಟ ಸೇರಿದ್ದಾರೆ. ಅವರೆಲ್ಲರೂ ಮುಂಬೈ ಹೋಗದೆ ಬೆಂಗಳೂರಿಗೆ ಬಂದಿದ್ದರೆ ನಮ್ಮವರಾಗಿರುತ್ತಿದ್ದರು ಎಂದರು. ಕತೆಗಾರ ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಅನಂತ್ ಕುಣಿಗಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಡುಗಡೆಯಾದ ಪುಸ್ತಕಗಳು
ಶೆಕ್ಷಾವಲಿ ಮಣಿಗಾರ್-ಆ ವದನ, ಮುರ್ಜುಜಾ ಬೇಗಂ ಕೊಡಗಲಿ- ಪರಸ್ಪರ ಮತ್ತಿತರ ಕತೆಗಳು, ಡಾ. ಸದಾಶಿವ ದೊಡಮನಿ- ಇರುಳ ಬಾಗಿಲಿಗೆ ಕಣ್ಣ ದೀಪ, ರವೀಂದ್ರ ಮುದ್ದಿ- ವರದಾ ತೀರದ ಕಥೆಗಳು, ಸಿ.ವಿ. ವಿರುಪಾಕ್ಷ- ಖದೀಜಾ, ಶ್ರೀಧರ ಗಸ್ತಿ- ಚಂದ್ರಾ ಲೇಔಟ್, ಪ್ರಕಾಶ ಗಿರಿಮಲ್ಲನವರ -ಜನನಾಯಕ, ಬಿಜೆ ಪಾರ್ವತಿ ವಿ. ಸೋನಾರೆ- ಓಡಿ ಹೋದಾಕಿ, ಕವಿತಾ ಹೆಗಡೆ ಅಭಯಂ - ಇತ್ತ ಹಾಯಲಿ ಚಿತ್ತ ಮತ್ತು ನವ್ಯ ಆರ್ ಕತ್ತಿ- ಮಾಯಗುಹೆ.