ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಜತೆಗೆ ಆಧುನಿಕ ಶಿಕ್ಷಣ ಎಲ್ಲದಕ್ಕೂ ಒತ್ತು ನೀಡುವ ಮೂಲಕ ದೇಶದ ಅಸ್ಮಿತೆ ಮತ್ತು ಶಕ್ತಿಯನ್ನು ಅನಾವರಣಗೊಳಿಸುವ ಕೆಲಸ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಜತೆಗೆ ಆಧುನಿಕ ಶಿಕ್ಷಣ ಎಲ್ಲದಕ್ಕೂ ಒತ್ತು ನೀಡುವ ಮೂಲಕ ದೇಶದ ಅಸ್ಮಿತೆ ಮತ್ತು ಶಕ್ತಿಯನ್ನು ಅನಾವರಣಗೊಳಿಸುವ ಕೆಲಸ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.ಆಳ್ವಾಸ್ ಫೌಂಡೇಷನ್ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಮಂಗಳೂರು ಘಟಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಏರ್ಪಡಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೀರ್ತಿಶೇಷ ಡಾ। ಎನ್.ವಿನಯ ಹೆಗ್ಡೆ ಅವರಿಗೆ ಅರ್ಪಿಸುವ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಡಾ। ವಿನಯ ಹೆಗ್ಡೆ ಅವರು ಕರಾವಳಿ ಕರ್ನಾಟಕ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ಕೊಡುಗೆ ನೀಡಿದ್ದಾರೆ. ಅವರದೇ ಹಾದಿಯಲ್ಲಿ ಮುನ್ನಡೆಯುತ್ತಿರುವ ಡಾ। ಮೋಹನ ಆಳ್ವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಹು ಆಯಾಮದ ಶಿಕ್ಷಣ ನೀಡುತ್ತಿದ್ದಾರೆ. ಪ್ರತಿ ವಿಭಾಗದಲ್ಲೂ ಸಾಧನೆ ತೋರಿಸುವ ಮೂಲಕ ದೇಶಕ್ಕೆ ಮಾದರಿ ಎನಿಸಿದ್ದಾರೆ ಎಂದರು.ಈ ಸಂದರ್ಭ ಆಳ್ವಾಸ್ ನುಡಿಸಿರಿ ವಿರಾಸತ್ ಮಂಗಳೂರು ಘಟಕದ ಪರವಾಗಿ ಡಾ.ಮೋಹನ ಆಳ್ವರನ್ನು ಹಾರ, ಶಾಲು ಹಾಕಿ, ನಟರಾಜನ ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಾಕ್ಸ್
---------ಪ್ರತಿಯೊಬ್ಬರಲ್ಲಿ ಸೌಂದರ್ಯ
ಪ್ರಜ್ಞೆ ಇರಲಿ: ಮೋಹನ ಆಳ್ವಪ್ರತಿಯೊಬ್ಬರು ಸೌಂದರ್ಯ ಪ್ರಜ್ಞೆ ಹೊಂದಿದ್ದರೆ ಮಾತ್ರ ಕಲೆ, ಕಲಾವಿದ, ಪರಿಸರ, ಸಾಮರಸ್ಯ ಬದುಕನ್ನು ಕಂಡುಕೊಳ್ಳಲು ಸಾಧ್ಯವಿದೆ. ಸೌಂದರ್ಯ ಪ್ರಜ್ಞೆ ಇಲ್ಲದಿದ್ದರೆ ಅಂತಹವರು ದೇಶಕ್ಕೆ ಅಪಾಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚೆಗೆ ಈವೆಂಟ್ ಮೆನೇಜ್‌ಮೆಂಟ್‌ಗಳು ಇಂತಹ ಕಲೆಗಳನ್ನು ಹೊಸಕಿ ಹಾಕುತ್ತಿದ್ದು, ಕಲೆಯ ನೈಜತೆಯನ್ನು ತಪ್ಪುವಂತೆ ಮಾಡಿದ್ದಾರೆ. ಕಲೆಯನ್ನು ಡೊಂಬರಾಟ ರೀತಿ ತೋರಿಸಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂತಹ ಸಾಂಸ್ಕೃತಿಕ ವೈಭವವನ್ನು ನಡೆಸಿ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕೆ ಮುಂದಾಗಿದೆ ಎಂದರು.
----ಬಾಕ್ಸ್---
3 ಗಂಟೆಗಳ ಸಾಂಸ್ಕೃತಿಕ ವೈಭವಆಳ್ವಾಸ್ ಸಾಸ್ಕೃತಿಕ ವೈಭವ ಸುಮಾರು ಮೂರು ಗಂಟೆಗಳ ಕಾಲ ನಡೆದು ಪ್ರೇಕ್ಷಕರನ್ನು ರಂಜಿಸಿತು.
ಆರಂಭದಲ್ಲಿ ಯೋಗದೀಪ, ಬಳಿಕ ಅಷ್ಟಲಕ್ಷ್ಮೀ ಶಾಸ್ತ್ರೀಯ ನೃತ್ಯ, ಶಂಕರಾರ್ಧ ಶರೀರಿಣಿ ಬಡಗುತಿಟ್ಟು ಯಕ್ಷಗಾನ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ-ಹಿರಣ್ಯಾಕ್ಷ ವಧೆ ಹಾಗೂ ಕೊನೆಯಲ್ಲಿ ಬೊಂಬೆ ವಿನೋದಾವಳಿ ನಡೆಯಿತು.