ಉಣಬಡಿಸುವ, ಹಾರೈಸುವ, ಅಂತಃಕರಣವನ್ನು ಮೊಗೆದು ಕೊಡುವ ಗುಣ ತಾಯಿಯದ್ದು. ನೆಲವೆಂದರೆ ತಾಯಿ.

ಬಳ್ಳಾರಿ: ಅಸಹಾಯಕರಿಗೆ ಭರವಸೆ, ನೋವುಂಡವರಿಗೆ ನಗೆ, ನೊಂದವರ ಕಣ್ಣೀರು ಒರೆಸುವ ಸಾಂತ್ವನ ಇದೆಲ್ಲವೂ ಜಾನಪದ ಸಂಸ್ಕೃತಿಯಲ್ಲಿ ಜೀವಂತವಾಗಿದೆ ಎಂದು ಕೋಲಾರದ ಹಿರಿಯ ಸಾಹಿತಿ ಸ.ರಘುನಾಥ ತಿಳಿಸಿದರು.ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಿದ್ದ ಜಾನಪದದ ಮೂಲಕ ಆಧುನಿಕ ವ್ಯಕ್ತಿತ್ವ ವಿಕಸನ ಸಾಧ್ಯವೇ? ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಉಣಬಡಿಸುವ, ಹಾರೈಸುವ, ಅಂತಃಕರಣವನ್ನು ಮೊಗೆದು ಕೊಡುವ ಗುಣ ತಾಯಿಯದ್ದು. ನೆಲವೆಂದರೆ ತಾಯಿ.ಆ ತಾಯಿಯೇ ಜಾನಪದವಾಗಿದ್ದು ಬೆಳೆದ ಪೈರು ತಲೆದೂಗುವ, ತಲೆಯೆತ್ತಿ ನಿಲ್ಲುವ, ಬಾಗಿ ನಮಿಸುವ ಗುಣ ಸ್ವಾಭಿಮಾನ ಮತ್ತು ವಿನಯವನ್ನು ದರ್ಶಿಸುತ್ತದೆ. ಜಾನಪದ ಸಾಹಿತ್ಯ ಅಪರೂಪದ ಮೌಲ್ಯಗಳನ್ನು ದಾಟಿಸುವುದರೊಂದಿಗೆ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ, ಜಾನಪದ ಸಾಹಿತ್ಯಕ್ಕೆ ಮನಸ್ಸನ್ನು ತೀವ್ರವಾಗಿ ಮೀಟುವ, ಸಂವೇದನೆಯನ್ನು ಜಾಗೃತಗೊಳಿಸುವ, ಸುತ್ತಲಿನ ಜನರೊಂದಿಗೆ ಪ್ರೀತಿ,ಸ್ನೇಹ ಸಂಬಂಧದ ಪರಿಮಿತದಲ್ಲಿ ಬದುಕುವ, ಹೊಸ ಅನುಭೂತಿಯನ್ನು ನೀಡುವ ಶಕ್ತಿ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಜಿ.ಪ್ರಹ್ಲಾದ ಚೌದ್ರಿ, ಆಧುನಿಕ ಜೀವನದ ಒತ್ತಡದಲ್ಲಿ ನಮ್ಮನ್ನು ಮನುಷ್ಯರನ್ನಾಗಿಸುವ. ಮಾನವೀಯತೆಯ ಕಡೆ ಕರೆದುಕೊಂಡು ಹೋಗುವ ಜಾನಪದ ಸಾಹಿತ್ಯವನ್ನು ಉಳಿಸುವ, ಬೆಳೆಸುವ ಕೆಲಸ ನಮ್ಮೆಲ್ಲರದಾಗಿದೆ ಎಂದರು.

ವೇದಿಕೆಯ ಮೇಲೆ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ್ ರೆಡ್ಡಿ ಚಾಗನೂರು, ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ ಇದ್ದರು.

ಲೇಖಕರಾದ ವೀರೇಂದ್ರ ರಾವಿಹಾಳ, ಚಿಂತಕರಾದ ದಾದಾ ಕಲಂದರ್, ರಂಗಕರ್ಮಿ ಅಬ್ದುಲ್ಲಾ, ಡಾ. ಸಿದ್ದೇಶ್ವರಿ, ಪ್ರಾಧ್ಯಾಪಕರಾದ ಡಾ. ಹುಚ್ಚುಸಾಬ್, ಪ್ರವೀಣ್ ಕುಮಾರ್, ಅತಿಥಿ ಉಪನ್ಯಾಸಕರಾದ ಗೋವಿಂದಪ್ಪ, ಮೇಘರಾಜ್, ರಾಜಶೇಖರ್, ಪ್ರಭಾವತಿ ಪಾಟೀಲ್, ಚಂದ್ರಶೇಖರ್, ಮಂಜುನಾಥ್, ಮಹಾಂತೇಶ್, ಹನಮೇಶ್ ಉಪಸ್ಥಿತರಿದ್ದರು.