ಕಾರವಾರ: ಹಾಳಾಗಿದ್ದ135 ಶುದ್ಧ ಕುಡಿವ ನೀರಿನ ಘಟಕ ಕೊನೆಗೂ ದುರಸ್ತಿ

| Published : Jan 10 2024, 01:45 AM IST / Updated: Jan 10 2024, 12:36 PM IST

ಸಾರಾಂಶ

ಕಾರವಾರ ಜಿಲ್ಲೆಯಲ್ಲಿ ಹಾಳಾಗಿದ್ದ 135 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಸೂಚನೆಯಂತೆ ದುರಸ್ತಿ ಮಾಡಲಾಗಿದೆ.

ಕಾರವಾರ: ಜಿಲ್ಲೆಯಲ್ಲಿ ಹಾಳಾಗಿದ್ದ 135  ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಸೂಚನೆಯಂತೆ ದುರಸ್ತಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟೂ ೨೪೧ ನೀರಿನ ಘಟಕ ನಿರ್ಮಾಣವಾಗಿದ್ದು, ೧೩೪ ಘಟಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಜನರಿಗೆ ತೊಂದರೆ ಆಗುವುದನ್ನು ಅರಿತು ದುರಸ್ತಿ ಮಾಡಿಸಲಾಗಿದೆ. 

ಈಗಾಗಲೇ ಬರಗಾಲ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಬೇಸಿಗೆ ವೇಳೆ ೩೦೦ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ತುಟಾಗ್ರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಬೇಸಿಗೆ ಆರಂಭಕ್ಕೂ ಮೊದಲೇ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾಗಿರುವುದು ಜನರಿಗೆ ಅನುಕೂಲವಾಗಲಿದೆ.

೧೨೦-೧೩೦ ಘಟಕಗಳ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಕಂಪನಿಗಳು ಹೊರ ಜಿಲ್ಲೆ, ಹೊರ ರಾಜ್ಯದ್ದಾಗಿರುವುದರಿಂದ ನಿರ್ವಹಣೆ ಮಾಡಿರಲಿಲ್ಲ. ಜಿಪಂನಿಂದ ಹಲವಾರು ಬಾರಿ ಪತ್ರ ಬರೆದರೂ ಸ್ಪಂದನೆ ಸಿಗುತ್ತಿರಲ್ಲ. 

ಹೀಗಾಗಿ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಕಂಪನಿಗಳ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಗುತ್ತಿಗೆದಾರರಿಂದ ದುರಸ್ತಿ ಮಾಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಕಂಪನಿಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಎಷ್ಟೆಷ್ಟು ಘಟಕ: ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ ೧೦೭ ಹಾಗೂ ಕಾರ್ಯನಿರ್ವಹಿಸದೇ ಇದ್ದ ೧೩೪ ಸೇರಿ ೨೧೩ ಘಟಕಗಳಿತ್ತು. ಈಗ ಹಾಳಾಗಿದ್ದ ಯುನಿಟ್ ದುರಸ್ತಿ ಮಾಡಿಸಲಾಗಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. 

ಅಂಕೋಲಾ ೧೮, ಭಟ್ಕಳ ೨೦, ಹಳಿಯಾಳ ೮೭, ಹೊನ್ನಾವರ ೩, ಜೋಯಿಡಾ ೧೨, ಕಾರವಾರ ೧೪, ಕುಮಟಾ ೧೮, ಮುಂಡಗೋಡ ೨೧, ಸಿದ್ದಾಪುರ ೫, ಶಿರಸಿ ೧೧, ಯಲ್ಲಾಪುರ ೪ ಯುನಿಟ್‌ಗಳು ಬಳಕೆಗೆ ಲಭ್ಯವಾದಂತಾಗಿದೆ. ೨೮ ಘಟಕ ಕೋ ಆಪರೇಟಿವ್ ವ್ಯಾಪ್ತಿಯಲ್ಲಿ ಬರುವುದನ್ನು ದುರಸ್ತಿ ಮಾಡಿಸಬೇಕಿದೆ.

ಎಜೆನ್ಸಿಗಳ ಮೂಲಕ ಒಂದು ವರ್ಷದ ವರೆಗೆ ನಿರ್ವಹಣೆ ಮಾಡಿ ಬಳಿಕ ಗ್ರಾಪಂಗೆ ಹಸ್ತಾಂತರಿಸಲಾಗುತ್ತದೆ. ಇದಕ್ಕಾಗಿ ಸರ್ಕಾರದಿಂದ ಪ್ರತಿ ತಿಂಗಳು ₹ ೩೦೦೦ ನಿರ್ವಹಣೆಗೆ ಬರುತ್ತದೆ. ಸ್ವಲ್ಪ ಹೆಚ್ಚಿನ ಅನುದಾನ ನಿರ್ವಹಣೆಗೆ ಬೇಕಾದರೆ ಗ್ರಾಪಂ ಅನುದಾನವನ್ನೇ ಬಳಕೆ ಮಾಡಿಕೊಳ್ಳಬಹುದಾಗಿದೆ.

ಪ್ರತಿ ವರ್ಷವೂ ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆ, ಮಲೆನಾಡು, ಅರೆ ಬಯಲುಸೀಮೆಯಲ್ಲಿ ನೀರಿನ ತುಟಾಗ್ರತೆಯಿಂದ ಬೇಸಿಗೆಯಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. 

ಈ ಘಟಕಗಳಿಂದ ಶುದ್ಧ ಕುಡಿಯುವ ನೀರು ಸಿಗುವುದರಿಂದ ಜನರಿಗೆ ಸ್ವಲ್ಪ ಸಹಾಯವಾಗಲಿದೆ. ೧೩೪ ಶುದ್ಧ ಕುಡಿಯುವ ನೀರಿನ ಘಟಕಗಳು ಜಿಲ್ಲೆಯಲ್ಲಿ ಹಾಳಾಗಿತ್ತು. ಸಂಬಂಧಿಸಿದ ಕಂಪನಿಗೆ ಪತ್ರ ಬರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಗುತ್ತಿಗೆದಾರರನ್ನು ಟೆಂಡರ್ ನಿಯಮದಂತೆ ರದ್ದುಗೊಳಿಸಲಾಗಿತ್ತು.

ಕಾರ್ಯನಿರ್ವಹಿಸದೇ ಇರುವ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ನಿರ್ವಹಣೆಗೆ ಬೇಕಾಗುವ ಮೊತ್ತಕ್ಕೆ ಅಂದಾಜು ಪತ್ರಿಕೆ ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಕರೆದು ಘಟಕಗಳನ್ನು ದುರಸ್ತಿಗೊಳಿಸಿದ್ದಾರೆ. ಒಂದು ವರ್ಷ ವಾರ್ಷಿಕ ನಿರ್ವಹಣೆ ಮಾಡಲು ಕಾರ್ಯಾದೇಶ ನೀಡಲಾಗಿದೆ ಎಂದು ಈಶ್ವರಕುಮಾರ ಕಾಂದೂ ಹೇಳಿದ್ದಾರೆ.