ಅಪಾಯಕಾರಿಯಾದ ಶಿರಸಿ ಹೇರೂರು ರಸ್ತೆ

| Published : May 21 2024, 12:33 AM IST

ಸಾರಾಂಶ

ಲೋಕೋಪಯೋಗಿ ಇಲಾಖೆ ಕನಿಷ್ಠ ನಿರ್ವಹಣೆಯನ್ನಾದರೂ ಮಾಡಬೇಕಿತ್ತು ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ.

ಶಿರಸಿ: ಶಿರಸಿ- ಹೇರೂರು ರಸ್ತೆಯಲ್ಲಿ ಮರ್ಲಮನೆಯಿಂದ ಸರ್ಕುಳಿ ವರೆಗಿನ ಕೇವಲ ೧.೫ ಕಿಮೀ ರಸ್ತೆ ಈಗ ಪ್ರಯಾಣಿಕರಿಗೆ ಭಯ ಮೂಡಿಸುತ್ತಿದೆ. ಕಡಿದಾದ ಇಳಿಜಾರಿನ ರಸ್ತೆ, ಪಕ್ಕದಲ್ಲೇ ಬೃಹತ್ ಕೊರಕಲು ಬೈಕ್, ಕಾರು ಸವಾರರಿಗೆ ಯಮಸ್ವರೂಪಿಯಾಗಿ ಬದಲಾಗಿದೆ.

ಹೌದು, ಶಿರಸಿ ಹೇರೂರು ರಸ್ತೆ ದಿನವಿಡೀ ಸಹಸ್ರಾರು ವಾಹನಗಳು ಓಡಾಡುವ ಮುಖ್ಯ ರಸ್ತೆ. ಶಿರಸಿ ಕುಮಟಾ ಮುಖ್ಯ ರಸ್ತೆಯ ಕೊಳಗಿಬೀಸ್‌ನಿಂದ ಆರಂಭಗೊಳ್ಳುವ ಈ ಮಾರ್ಗ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ ವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಅಭಿವೃದ್ಧಿಗಾಗಿ ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಕಾಳಜಿ ತೋರಿದ್ದರು. ಈ ಮಾರ್ಗದ ಶಿರಸಿ ತಾಲೂಕಿನ ಮರ್ಲಮನೆ ಬಸ್ ನಿಲ್ದಾಣದ ವರೆಗೆ ರಸ್ತೆ ವಿಸ್ತರಣೆ ಮಾಡಿ ಹೊಸದಾಗಿ ಡಾಂಬರೀಕರಣ ಮಾಡಿದ್ದಾರೆ.

ಅತ್ತ ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ತಾಲೂಕಿನ ಗಡಿ ಸರಕುಳಿ ವರೆಗೂ ರಸ್ತೆ ವಿಸ್ತರಣೆ ಮಾಡಿ ಡಾಂಬರೀಕರಣ ಮಾಡಿಸಿದ್ದಾರೆ. ಆದರೆ, ಮರ್ಲಮನೆಯಿಂದ ಸರ್ಕುಳಿ ವರೆಗಿನ ೧.೫ ಕಿಮೀ ಮಾತ್ರ ಅಭಿವೃದ್ಧಿಯಾಗಿಲ್ಲ. ಇಕ್ಕೆಲಗಳಲ್ಲಿ ಗಿಡಗಂಟಿ ಬೆಳೆದು ರಸ್ತೆಯನ್ನು ನುಂಗಿದ್ದರೆ, ಇರುವ ಆರಡಿ ರಸ್ತೆಯೂ ಎರಡೂ ಭಾಗದಲ್ಲಿ ಡಾಂಬರ್ ಕೊಚ್ಚಿಹೋಗಿ ರಸ್ತೆಗೂ ನೆಲಕ್ಕೂ ಒಂದು ಅಡಿ ಅಂತರ ಸೃಷ್ಟಿಸಿದೆ. ಸಣ್ಣ ಹೊಂಡಗಳೇ ಬೃಹದಾಕಾರವಾಗಿವೆ. ಬೈಕ್ ಸವಾರರು ಬಸ್ ಬಂತೆಂದು ಪಕ್ಕಕ್ಕೆ ಸರಿದರೆ ಬೈಕ್ ಸಮೇತ ಚರಂಡಿಗೆ ಬಿದ್ದು ಆಸ್ಪತ್ರೆ ಸೇರಿಕೊಳ್ಳುತ್ತಿದ್ದಾರೆ.

ಹೇರೂರು, ತಟ್ಟಿಕೈ, ಕೊಳಗಿಬೀಸ್ ಗ್ರಾಮಸ್ಥರೆಲ್ಲ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ರಸ್ತೆಯನ್ನು ತಾತ್ಕಾಲಿಕ ರಿಪೇರಿಯನ್ನಾದರೂ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ, ಗ್ರಾಮಸ್ಥರೇ ದಿನಾಂಕ ನಿಗದಿಪಡಿಸಿಕೊಂಡು ತಾವೇ ರಸ್ತೆ ರಿಪೇರಿ ಮಾಡಿಸಿಕೊಂಡು ಬಡ ಬೈಕ್ ಸವಾರರ ರಕ್ಷಣೆಗೆ ನಿರ್ಧರಿಸಿದ್ದಾರೆ.

ಏಕೆ ನಿರ್ಲಕ್ಷ್ಯ?: ಮರ್ಲಮನೆ ಕ್ರಾಸ್‌ನಿಂದ ಸರ್ಕುಳಿವರೆಗಿನ ಈ ೧.೫ ಕಿಮೀ ರಸ್ತೆ ವಿಸ್ತರಿಸಿ ಡಾಂಬರೀಕರಣಕ್ಕೆ ಕಳೆದ ವರ್ಷವೇ ₹೧.೨೫ ಕೋಟಿ ಅನುದಾನ ಮಂಜೂರಾಗಿದೆ. ಈ ಹಣದಲ್ಲಿ ಮರ್ಲಮನೆ ಬಳಿ ಮುರಿದು ಬಿದ್ದಿರುವ ಸಿಡಿ ನಿರ್ಮಾಣವನ್ನೂ ಮಾಡಬೇಕಿದೆ. ಆದರೆ, ಕಳೆದ ವರ್ಷ ನಡೆಸಿದ ರಸ್ತೆ ಕಾಮಗಾರಿಗಳ ಹಣವೇ ಇನ್ನೂ ಗುತ್ತಿಗೆದಾರರಿಗೆ ಸಂದಾಯವಾಗಿಲ್ಲ. ಬ್ಯಾಂಕ್ ಸಾಲದ ಬಡ್ಡಿ ತುಂಬುವುದರಲ್ಲೇ ಸುಸ್ತಾದ ಗುತ್ತಿಗೆದಾರರು ಈ ಕಾಮಗಾರಿ ಕೈಗೆತ್ತಿಕೊಳ್ಳಲು ಬಂಡವಾಳ ಕೊರತೆ ಅನುಭವಿಸಿದ್ದಾರೆ. ಹೀಗಾಗಿ, ಇಷ್ಟರೊಳಗೇ ಈ ೧.೫ ಕಿಮೀ ರಸ್ತೆ ವಿಸ್ತರಣೆ, ಡಾಂಬರೀಕರಣ ಪೂರ್ಣಗೊಳ್ಳಬೇಕಿತ್ತಾದರೂ, ಇನ್ನೂ ಆರಂಭವೇ ಆಗಿಲ್ಲ. ಲೋಕೋಪಯೋಗಿ ಇಲಾಖೆ ಕನಿಷ್ಠ ನಿರ್ವಹಣೆಯನ್ನಾದರೂ ಮಾಡಬೇಕಿತ್ತು ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ.

ರಿಪೇರಿ ಮಾಡ್ತೇವೆ: ಇದುವರೆಗೂ ಮರ್ಲಮನೆಯಿಂದ ಸರ್ಕುಳಿ ವರೆಗೆ ತಾತ್ಕಾಲಿಕ ರಿಪೇರಿ ಮಾಡಬಹುದು ಎಂದು ಕಾದೆವು. ಆದರೆ, ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳಿರುವುದರಿಂದ ವಾಹನ ಸವಾರರ ಸುರಕ್ಷತೆಗೆ ನಾವೇ ರಿಪೇರಿ ಕಾರ್ಯ ನಡೆಸಲು ಉದ್ದೇಶಿಸಿದ್ದೇವೆ ಎಂದು ನೇರ್ಲದ್ದ-ನೆಗ್ಗು ಗ್ರಾಪಂ ಸದಸ್ಯ ಚಂದ್ರಕಾಂತ ಹೆಗಡೆ ತಿಳಿಸಿದರು.ತಾತ್ಕಾಲಿಕ ರಿಪೇರಿ: ಮರ್ಲಮನೆಯಿಂದ ಸರ್ಕುಳಿ ವರೆಗೆ ರಸ್ತೆ ವಿಸ್ತರಣೆ, ಮರು ಡಾಂಬರೀಕರಣಕ್ಕೆ ವರ್ಕ್ ಆರ್ಡರ್ ಸಹ ನೀಡಿದ್ದೇವೆ. ಗುತ್ತಿಗೆದಾರರು ವಿಳಂಬ ಮಾಡಿದ್ದರಿಂದ ಸಂಚಾರ ಸಮಸ್ಯೆ ಆಗಿದೆ. ಶೀಘ್ರದಲ್ಲಿಯೇ ರಸ್ತೆ ಹಾಳಾದಲ್ಲಿ ಡಾಂಬರ್ ಹಾಕಿ ತಾತ್ಕಾಲಿಕ ರಿಪೇರಿ ಮಾಡುತ್ತೇವೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹನುಮಂತ ನಾಯ್ಕ ತಿಳಿಸಿದರು.