ನಮ್ಮ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನ ರಚನೆಯಾದ ದಿನ ನಿಜವಾದ ಸ್ವಾತಂತ್ರ್ಯ್ ದೊರಕಿದ ದಿನವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ನಮ್ಮ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನ ರಚನೆಯಾದ ದಿನ ನಿಜವಾದ ಸ್ವಾತಂತ್ರ‍್ಯ ದೊರಕಿದ ದಿನವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಸ್ಥಳೀಯ ನಗರಸಭೆ ಬಳಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ಅಂಬೇಡ್ಕರ್ ಅವರು ದಲಿತರ ಬಗ್ಗೆ ಮಾತ್ರ ಸಹಾಯ ಮಾಡಿದ್ದಾರೆ ಎಂದು ಕೇಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಸರಿಯಾರ ನ್ಯಾಯ ದೊರಕಲು ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಶಾಸಕನಾಗಿ ಆಯ್ಕೆಯಾಗಲು ಹಕ್ಕು ನೀಡಿರುವುದು ಸಂವಿಧಾನ. 12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ಪರಿಕಲ್ಪನೆಯನ್ನು ಹಾಕಿಕೊಟ್ಟ ದಾರಿಯಲ್ಲಿ ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ ಇನ್ನು ಪೂರ್ಣ ಪ್ರಮಾಣದಲ್ಲಿ ಸಮಸಮಾಜ ನಿರ್ಮಾಣವಾಗಿಲ್ಲ. ಸ್ವಾತಂತ್ರ‍್ಯ ಬಂದು ಏಳು ದಶಕ ಕಳೆದರೂ ಸಮಾನತೆ ಇನ್ನು ಬಂದಿಲ್ಲ ಎನ್ನುವುದು ಶೋಚನೀಯ ಸಂಗತಿ. ನಮ್ಮಂತ ರಾಜಕಾರಣಿಗಳು ಅಂಬೇಡ್ಕರ್ ಅವರನ್ನು ಬಳಕೆ ಮಾಡಿಕೊಂಡು ಮುನ್ನಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂವಿಧಾನ ತರಲಾಯಿತು. ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಅಂಬೇಡ್ಕರ್ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಾಗಿದೆ. ಇದೇ ರೀತಿ ಡಾ.ಬಾಬು ಜಗಜೀವನರಾಂ ದೇಶದ ಜನರ ಹಸಿವು ನೀಗಿಸುವ ಸಲುವಾಗಿ ಹಸಿರು ಕ್ರಾಂತಿಗೆ ಒತ್ತು ನೀಡಿದರು. ಇಂತಹ ಮಹನೀಯರುಗಳ ಆದರ್ಶಗಳನ್ನು ಆಚರಣೆಗೆ ತಂದಾಗ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಕೆಂಚರಡ್ಡಿ, ತಹಸೀಲ್ದಾರ ಆರ್.ಎಚ್.ಭಾಗವಾನ, ತಾಪಂ ಇಒ ಡಾ.ವೆಂಕಟೇಶ ಸಣ್ಣಬಿದರಿ, ನಗರಸಭೆ ಆಯುಕ್ತ ಎಫ್.ಐ.ಇಂಗಳಗಿ, ಬಿಇಒ ಶಾಮಸುಂದರ ಅಡಿಗ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಅತಿಥಿಗಳಾಗಿ ಆಗಮಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಸುಣಕಲ್ಲಬಿದರಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಮೋಹನ ಬೆಣಗೇರಿ ಹಾಗೂ ಡಾ. ಬಾಬು ಜಗಜೀವನರಾಂ ಕುರಿತು ನಗರದ ಆರ್‌ಟಿಇಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಮಾಲತೇಶ ಪೂಜಾರ ಉಪನ್ಯಾಸ ನೀಡಿದರು. ನಗರಸಭೆ ಮಾಜಿ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಜಿಲ್ಲಾ ಚಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ತಾಲೂಕು ಮಾದರ ಸಂಘದ ಅಧ್ಯಕ್ಷ ಮೈಲಪ್ಪ ಗೋಣಿಬಸಮ್ಮನವರ, ನೀಲಕಂಠಪ್ಪ ಕುಸಗೂರ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಚಂದ್ರಪ್ಪ ಬೇಡರ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ರಮೇಶ ಕೊರವರ, ಹೆಚ್.ಡಿ.ಹೊನ್ನಕ್ಕಳವರ, ಮಾಲತೇಶ ಬ್ಯಾಡಗಿ, ಎಂ.ಡಿ.ಮೆಣಸಿನಹಾಳ, ಗಣೇಶ ಗೋಣಿಬಸಮ್ಮನವರ ಮತ್ತಿತರರಿದ್ದರು. ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ಇಲ್ಲಿನ ಹರಳಯ್ಯ ನಗರದ ಬಳಿಯಿಂದ ಹೊರಟ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಭಾವಚಿತ್ರಗಳ ಮೆರವಣಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.