ಒಳ ಮೀಸಲಾತಿ ಜಾರಿಯ ನಿರ್ಧಾರ ಅಂತಿಮ ಘಟ್ಟ ತಲುಪಿದೆ

| Published : Oct 27 2024, 02:24 AM IST / Updated: Oct 27 2024, 02:25 AM IST

ಸಾರಾಂಶ

ಹಿರಿಯೂರು : ನಮ್ಮ ಸರ್ಕಾರ ಮಾದಿಗರ ಪರವಿದೆ. ಒಳ ಮೀಸಲಾತಿ ಜಾರಿಯ ಕಾಲ ತುಂಬಾ ಹತ್ತಿರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಹಿರಿಯೂರು : ನಮ್ಮ ಸರ್ಕಾರ ಮಾದಿಗರ ಪರವಿದೆ. ಒಳ ಮೀಸಲಾತಿ ಜಾರಿಯ ಕಾಲ ತುಂಬಾ ಹತ್ತಿರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಟಿಬಿ ವೃತ್ತದಿಂದ ಬ್ಲಾಕ್ ಕಾಂಗ್ರೆಸ್ ಕಚೇರಿವರೆಗೂ ಪಾದಯಾತ್ರೆ ನಡೆಸಿ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಎಂದು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಮೀಸಲಾತಿ ಜಾರಿ ಮಾಡಿದ ಪಕ್ಷವಾಗಿದ್ದು, ಪಕ್ಷ ಮತ್ತು ಸರ್ಕಾರ ಮಾದಿಗರ ಪರವಿದೆ. ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ರಚಿಸಿದರು. ಆನಂತರ ನಾನು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ನ್ಯಾ. ಸದಾಶಿವರವರು ಭೇಟಿ ಮಾಡಿ ಆಯೋಗಕ್ಕೆ ಒಂದು ಕಚೇರಿ ಇಲ್ಲ. ಕೆಲಸ ಮಾಡಲು ಮೂಲಭೂತ ಸೌಕರ್ಯಗಳೇ ಇಲ್ಲ ಎಂದಾಗ ವರದಿ ತಯಾರಿಯ ಅನುಕೂಲಕ್ಕಾಗಿ 9 ಕೋಟಿ ಹಣ ಬಿಡುಗಡೆ ಮಾಡಿದ್ದೆ ಎಂದು ತಿಳಿಸಿದರು.

ಒಳ ಮೀಸಲಾತಿ ಜಾರಿಯ ಅನುಷ್ಠಾನ ಅಂತಿಮ ಘಟ್ಟಕ್ಕೆ ಬಂದಿದೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಲಾಗುತ್ತಿದೆ. ಸೋಮವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ನಾನು ಇಡೀ ಜಿಲ್ಲೆಯ ಮಾದಿಗರ ಪರವಾಗಿ ಒಳ ಮೀಸಲಾತಿ ಜಾರಿಗೆ ಮನವಿ ಮಾಡುತ್ತೇನೆ. ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗದ ಸಂಘಟನೆಗಳು ಕೊಟ್ಟ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಕೆ.ಪಿ.ಶ್ರೀನಿವಾಸ್, ಜೀವೇಶ್, ಕರಿಯಪ್ಪ, ರಾಜಪ್ಪ ಮಸ್ಕಲ್, ಹೆಗ್ಗೆರೆ ಮಂಜುನಾಥ್, ಧರ್ಮಪುರ ರಂಗಸ್ವಾಮಿ, ಎಂ.ಡಿ.ರಮೇಶ್, ಲಕ್ಷ್ಮಕ್ಕ, ಮೇಟಿಕುರ್ಕೆ ಚಂದ್ರಪ್ಪ, ರಂಗನಾಥ್, ಘಾಟ್ ರವಿ, ಪರಮೇಶ್ವರಪ್ಪ, ಮಹೇಶ್, ಒಂಕಾರ್ ಮಟ್ಟಿ, ಬ್ಯಾಡರಹಳ್ಳಿ ಹನುಮಂತರಾಯ, ಘಾಟ್ ಮಂಜುನಾಥ್, ತಿರುಮಲೇಶ್ ಮುಂತಾದವರು ಹಾಜರಿದ್ದರು.