ಶಾಲೆ ಉಳಿಸುವಂತೆ ಚನ್ನಮ್ಮನಪಾಳ್ಯ ಗ್ರಾಮಸ್ಥರ ಆಗ್ರಹ

| Published : May 20 2024, 01:33 AM IST

ಶಾಲೆ ಉಳಿಸುವಂತೆ ಚನ್ನಮ್ಮನಪಾಳ್ಯ ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

1998-99ನೇ ಸಾಲಿನಲ್ಲಿ ಚನ್ನಮ್ಮನಪಾಳ್ಯ ಗ್ರಾಮದ ಕೆ.ಜಯಮ್ಮ ಮತ್ತು ಸಿ.ಎನ್.ನರಸಿಂಹಯ್ಯ ಎಂಬುವರು ಸರ್ವೇ ನಂ. 354ರ ತಮ್ಮ ಜಮೀನಿನ ಪೈಕಿ 20 ಗುಂಟೆ ಜಾಗವನ್ನು ಸರಕಾರಿ ಶಾಲೆಗಾಗಿ ದಾನ ನೀಡಿದ್ದು, 1999ರ ಮಾರ್ಚ್ 8ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಹೆಸರಿಗೆ ನೋಂದಣಿ ಮಾಡಿರುವುದು ದಾಖಲೆಗಳಿಂದ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜಲ್ಲಿ ಕ್ರಷರ್ ಘಟಕದ ಮಾಲೀಕರೊಬ್ಬರ ಚಿತಾವಣೆಯಿಂದ ಸರ್ಕಾರಿ ಶಾಲೆಯನ್ನು ಸ್ಥಳಾಂತರಿಸುವ ಸಂಚು ನಡೆದಿದ್ದು, ಅಧಿಕಾರಿಗಳು ಷಡ್ಯಂತ್ರಕ್ಕೆ ಮಣಿಯದೇ ಶಾಲೆಯನ್ನು ನಮ್ಮೂರಲ್ಲಿಯೇ ಉಳಿಸಬೇಕು ಎಂದು ಚನ್ನಮ್ಮನಪಾಳ್ಯದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ತಾಲೂಕಿನ ಭೈರಮಂಗಲ ಗ್ರಾಪಂ ವ್ಯಾಪ್ತಿಯ ಚನ್ನಮ್ಮನಪಾಳ್ಯ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ನಿರ್ವಹಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಜಲ್ಲಿಕಲ್ಲು ಕ್ರಷರ್ ಘಟಕದ ಮಾಲೀಕರ ಒತ್ತಡಕ್ಕೆ ಮಣಿದು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಪ್ರಶ್ನಿಸುವವರ ವಿರುದ್ಧ ಬೇರೆ ಗ್ರಾಮದ ದಲಿತ ಸಮುದಾಯದವರನ್ನು ಎತ್ತಿಕಟ್ಟುವ ಮೂಲಕ ದೌರ್ಜನ್ಯದ(ಅಟ್ರಾಸಿಟಿ) ಕೇಸ್ ಹಾಕಿಸಲಾಗುತ್ತಿದೆ. ಒಳ್ಳೆಯ ದಾಖಲಾತಿಯೊಂದಿಗೆ ಉತ್ತಮ ಸ್ಥಿತಿಯಲ್ಲಿರುವ ಶಾಲೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಮಹಿಳೆಯರಾದಿಯಾಗಿ ಗ್ರಾಮಸ್ಥರು ಒಕ್ಕೂರಲ ಮನವಿ ಮಾಡಿದರು.

ಶಾಲೆಗೆ 20 ಗುಂಟೆ ನೀಡಿದ ದಾನಿಗಳು:

1998-99ನೇ ಸಾಲಿನಲ್ಲಿ ಚನ್ನಮ್ಮನಪಾಳ್ಯ ಗ್ರಾಮದ ಕೆ.ಜಯಮ್ಮ ಮತ್ತು ಸಿ.ಎನ್.ನರಸಿಂಹಯ್ಯ ಎಂಬುವರು ಸರ್ವೇ ನಂ. 354ರ ತಮ್ಮ ಜಮೀನಿನ ಪೈಕಿ 20 ಗುಂಟೆ ಜಾಗವನ್ನು ಸರಕಾರಿ ಶಾಲೆಗಾಗಿ ದಾನ ನೀಡಿದ್ದು, 1999ರ ಮಾರ್ಚ್ 8ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಹೆಸರಿಗೆ ನೋಂದಣಿ ಮಾಡಿರುವುದು ದಾಖಲೆಗಳಿಂದ ಕಂಡುಬಂದಿದೆ. ಕನಕಪುರ-ರಾಮನಗರ ತಾಲೂಕು ಗಡಿಭಾಗದಲ್ಲಿರುವ ಚನ್ನಮ್ಮನಪಾಳ್ಯ ಸೇರಿ ಸುತ್ತಮುತ್ತಲ ಗಡಿ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದರಿ ಸ್ಥಳದಲ್ಲಿ ಶಾಲಾಕಟ್ಟಡ ನಿರ್ಮಿಸಲಾಗಿದ್ದು ಕಳೆದ 25 ವರ್ಷಗಳಿಂದ ಸಾವಿರಾರು ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಸಾಕ್ಷಿಯಾಗಿದೆ.

ವಿವಾದ ಸೃಷ್ಟಿಯಾಗಿದ್ದು ಏಕೆ?

ಚನ್ನಮ್ಮನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸನಿಹದಲ್ಲಿ ವೆಂಕಟೇಶ್ವರ ಹಿಲ್ ಕ್ರಷರ್ ಹೆಸರಿನ ಜಲ್ಲಿಕಲ್ಲು ಪುಡಿಮಾಡುವ ಕ್ರಷರ್ ಘಟಕ ಸುರಕ್ಷಿತ ವಲಯದಲ್ಲಿಲ್ಲ. ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದು ಶಬ್ದ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಸದರಿ ಕ್ರಷರ್ ವಿರುದ್ಧ ಗ್ರಾಮದ ಮಂಜುನಾಥ್ ಎಂಬ ಸಾಮಾಜಿಕ ಕಾರ್ಯಕರ್ತ 2023ರಲ್ಲಿ ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ಆದೇಶ ಹೊರಡಿಸಿದ್ದರು.

ಹೀಗಾಗಿ ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸರ್ವೇ ಕೈಗೊಳ್ಳಲಾಗಿತ್ತು. ಕ್ರಷರ್ ನಿಂದ ಸರಕಾರಿ ಶಾಲೆ ಕೇವಲ 430 ಮೀಟರ್ ಅಂತರದಲ್ಲಿರುವುದು ಬೆಳಕಿಗೆ ಬಂದಿದೆ. ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ 2020ರ ನಿಯಮ 6(1)ರನ್ವಯ ಯಾವುದೇ ಶಾಲೆಗಳು 500 ಮೀಟರ್ ಅಂತರದಲ್ಲಿ ಇರತಕ್ಕದ್ದಲ್ಲ. ಹಾಗಾಗಿ ಸದರಿ ಕ್ರಷರ್ ನಿಯಮ ಬಾಹಿರವೆಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ಕ್ರಷರ್ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ.

ಜಲ್ಲಿ ಕ್ರಷರ್ ಘಟಕ ಸ್ಥಗಿತಕ್ಕೆ ಕಾರಣವಾದ ಸರಕಾರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ನಾನಾ ಪ್ರಯತ್ನಗಳು ಭರದಿಂದ ಸಾಗಿವೆ. ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಪರ್ಯಾಯ ಜಾಗ ಕಲ್ಪಿಸುವ ಬೇಡಿಕೆ ಜತೆಗೆ ನಾನಾ ಅಮಿಷಗಳನ್ನು ಅಧಿಕಾರಿಗಳ ಮುಂದಿಡಲಾಗಿದೆ. ಅಲ್ಲದೇ ಬೆಂಗಳೂರು ದಕ್ಷಿಣ ತಾಲೂಕಿನ ನಾಗನಾಯ್ಕನಹಳ್ಳಿಯಿಂದ ಕೆಲವು ಅಮಾಯಕರನ್ನು ಕರೆತಂದು ಶಾಲಾ ಸಹರದ್ದಿನಲ್ಲಿ ಅತಿಕ್ರಮಿಸಿ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದಿವೆ.

ಕೆ.ಜಿ.ಗೊಲ್ಲರಪಾಳ್ಯ, ಲಿಂಗಪ್ಪನದೊಡ್ಡಿ, ಕಳ್ಳಿಪಾಳ್ಯ, ಅರಳೀಮರದದೊಡ್ಡಿ, ಆಪ್ಕೋ ಫ್ಯಾಕ್ಟರಿ, ಯೋಗವನ ಬೆಟ್ಟದ ತಪ್ಪಲಿನ ಸಹರದ್ದಿನಿಂದ ಹಲವು ಮಕ್ಕಳು ಚನ್ನಮ್ಮನಪಾಳ್ಯ ಸರ್ಕಾರಿ ಶಾಲೆಗೆ ಬರುತ್ತಾರೆ. ಪ್ರಸ್ತುತ 24 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಯನ್ನು ಎತ್ತಂಗಡಿ ಮಾಡಿದ ಪಕ್ಷದಲ್ಲಿ ನಾನಾ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮುಖಂಡ ಎಚ್.ಎಂ.ಲೇಪಾಕ್ಷ, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ಗ್ರಾಪಂ ಸದಸ್ಯರಾದ ಮುರಳಿ, ಹೊಂಬಯ್ಯ, ಕರ್ನಾಟಕ ಭೀಮ್ ಸೇನೆ ಉಸ್ತುವಾರಿ ದಿನೇಶ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಂಚೀಪುರ ಶೇಖರ್, ಮುಖಂಡರಾದ ಗಂಗಾಧರ್, ಲೋಕೇಶ್, ನರಸಿಂಹಯ್ಯ, ವೆಂಕಟರಮಣ, ನರಸಿಂಹಯ್ಯ, ಶಿವಣ್ಣ, ಮಂಜುನಾಥ್, ಮೋಹನ್ಕುಮಾರ್, ಯಶೋಧಮ್ಮ, ಸುಂದರಮ್ಮ, ಭಾಗ್ಯಮ್ಮ, ವೆಂಕಟಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.