ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಮರೀಚಿಕೆ

| Published : Oct 25 2024, 12:52 AM IST

ಸಾರಾಂಶ

ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹುಣ್ಣಿಮೆಗೊಮ್ಮೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಹತ್ತಾರು ಲಕ್ಷ ಭಕ್ತರು ಸೇರುತ್ತಾರೆ. ದೇವಿಯ ವಾರ (ಮಂಗಳವಾರ, ಶುಕ್ರವಾರ) ಹತ್ತಾರು ಸಾವಿರ ಜನರು ಆಗಮಿಸುತ್ತಾರೆ, ಆದರೂ ಇಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

ದೇವಸ್ಥಾನದ ದುಡ್ಡಲ್ಲಿಯೇ ಅಭಿವೃದ್ಧಿಗೆ ಮೀನಮೇಷ

ಪ್ರಾಧಿಕಾರ ರಚನೆಯಾದರೂ ವೇಗ ಪಡೆದುಕೊಳ್ಳದ ಮಾಸ್ಟರ್ ಪ್ಲಾನ್

ಇರುವುದು ₹70 ಕೋಟಿ, ಬೇಕಾಗಿದ್ದು ₹300 ಕೋಟಿ

ಅನುಮತಿ, ಅನುದಾನ ನೀಡುತ್ತಿಲ್ಲ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹುಣ್ಣಿಮೆಗೊಮ್ಮೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಹತ್ತಾರು ಲಕ್ಷ ಭಕ್ತರು ಸೇರುತ್ತಾರೆ. ದೇವಿಯ ವಾರ (ಮಂಗಳವಾರ, ಶುಕ್ರವಾರ) ಹತ್ತಾರು ಸಾವಿರ ಜನರು ಆಗಮಿಸುತ್ತಾರೆ, ಆದರೂ ಇಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

ರಾಜ್ಯ ಸರ್ಕಾರ ಪ್ರಾಧಿಕಾರ ರಚನೆ ಮಾಡಿದ್ದೇ ಸಾಧನೆ ಎನ್ನುವಂತೆ ಆಗಿದೆ. ಕಳೆದ ಹತ್ತು ವರ್ಷಗಳಿಂದ ಭಕ್ತರು ದೇಣಿಗೆ ಕೊಟ್ಟಿರುವ ಬರೋಬ್ಬರಿ ₹70 ಕೋಟಿ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಸರ್ಕಾರ ಇದುವರೆಗೂ ನಯಾ ಪೈಸೆ ಅನುದಾನವನ್ನು ಶ್ರೀ ದೇವಸ್ಥಾನಕ್ಕೆ ನೀಡಿಲ್ಲ, ಭಕ್ತರು ಕೊಡುವ ದೇಣಿಗೆಯಲ್ಲಿ ಅಭಿವೃದ್ಧಿ ಮಾಡುವುದಕ್ಕೂ ಬಿಡುತ್ತಿಲ್ಲ. ಇಲ್ಲದ ನೆಪ ಹೇಳಿ ಕಾಲದೂಡುತ್ತಲೇ ಬರುತ್ತದೆ.

ಹಾಗೊಂದು ವೇಳೆ ಹತ್ತು ವರ್ಷಗಳ ಹಿಂದೆಯೇ ಅಭಿವೃದ್ಧಿಗೆ ಚಾಲನೆ ನೀಡಿದ್ದರೆ ರಾಜ್ಯದಲ್ಲೇ ಶ್ರೀ ಹುಲಿಗೆಮ್ಮ ದೇವಸ್ಥಾನ ಮುಂಚೂಣಿಯಲ್ಲಿ ಇರುತ್ತಿತ್ತು.ಬೇಕು ₹300 ಕೋಟಿ:

ಈಗ ರೂಪಿಸಿರುವ ಮಾಸ್ಟರ್ ಪ್ಲಾನ್‌ಗೆ ಬರೋಬ್ಬರಿ ₹300 ಕೋಟಿ ಹಣ ಬೇಕಾಗುತ್ತದೆ. ಆದರೆ, ದೇವಸ್ಥಾನದ ಬಳಿ ಇರುವುದು ಕೇವಲ ₹70 ಕೋಟಿ ರುಪಾಯಿ ಮಾತ್ರ. ಹೀಗಾಗಿ, ರಾಜ್ಯ ಸರ್ಕಾರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಬೇಕಾಗುವ ಹೆಚ್ಚುವರಿ ಅನುದಾನ ನೀಡುವ ಅಗತ್ಯವಿದೆ.ಕರಗಿದ ಅನುದಾನ:

ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರತಿ ವರ್ಷ 18 ಕೋಟಿ ಅನುದಾನ ಬರುತ್ತದೆ. ಇದರಲ್ಲಿ ₹10 ಕೋಟಿ ವೆಚ್ಚವಾಗುತ್ತಿದೆಯಂತೆ. ಹೀಗಾಗಿ, ಉಳಿಯುವುದು 8 ಕೋಟಿ ಮಾತ್ರ. ಕಳೆದ ಐದು ವರ್ಷಗಳಿಂದಲೂ ಈ ಉಳಿಕೆ ಮೊತ್ತ ₹60-65 ಕೋಟಿಯಷ್ಟೇ ತೋರಿಸಲಾಗುತ್ತಿದ್ದು, ಈಗ ಸದ್ಯ ₹70 ಕೋಟಿ ಇದೆ.

ಹಾಗಾದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕಾಗಿರುವ ಉಳಿಕೆ ಹಣ ಕರಗಿದ್ದು, ಎಲ್ಲಿ ಎನ್ನುವುದನ್ನು ತಾಯಿ ಹುಲಿಗೆಮ್ಮ ದೇವಿಯೇ ಹೇಳಬೇಕು.

ಶ್ರೀ ಹುಲಿಗೆಮ್ಮ ದೇವಸ್ಥಾನ ಶಕ್ತಿ ಕೇಂದ್ರವಾಗಿದೆ. ಇಲ್ಲಿಗೆ ಬರುವಷ್ಟು ಭಕ್ತರು ಉತ್ತರ ಕರ್ನಾಟಕ ಯಾವ ದೇವಸ್ಥಾನಕ್ಕೂ ಬರುವುದಿಲ್ಲ. ಅಷ್ಟೊಂದು ಭಕ್ತರು ಆಗಮಿಸುತ್ತಾರೆ. ಆದರೂ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷಿತ ಅಭಿವೃದ್ಧಿಯಾಗುತ್ತಿಲ್ಲ.ಬೀದಿಯಲ್ಲಿ ನಿಲ್ಲುವ ಭಕ್ತರು:

ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಜಾತ್ರೆಯ ವೇಳೆಯಲ್ಲಿ ಹತ್ತಾರು ಲಕ್ಷ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ದಿನ ಬರೋಬ್ಬರಿ 5 ಲಕ್ಷ ಭಕ್ತರು ಆಗಮಿಸುತ್ತಾರೆ. ಪ್ರತಿ ಹುಣ್ಣಿಮೆಗೂ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಾರೆ. ವಿಶೇಷ ಹುಣ್ಣಿಮೆಯ ವೇಳೆಯಲ್ಲಿ 2-3 ಲಕ್ಷ ಭಕ್ತರು ಆಗಮಿಸುತ್ತಾರೆ. ಈ ಭಕ್ತರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ.

ಸರಿಯಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಭಕ್ತರು ತಂಗುವುದಕ್ಕೂ ಸಮರ್ಪಕ ವ್ಯವಸ್ಥೆ ಇಲ್ಲ. ಹೀಗಾಗಿ ಸುತ್ತಮುತ್ತಲ ಹೊಲಗಳಲ್ಲಿಯೇ ತಂಗಬೇಕಾಗುತ್ತದೆ. ಹಾದಿ, ಬೀದಿಯಲ್ಲಿ ನಿಲ್ಲಬೇಕಾಗುತ್ತದೆ.

ವಿಶೇಷ ಸಂದರ್ಭಗಳಲ್ಲಿ ಆಗಮಿಸುವ ಲಕ್ಷಾಂತರ ಭಕ್ತರಿಗೆ ವಾಹನ ವ್ಯವಸ್ಥೆಯೂ ಇರುವುದಿಲ್ಲ. ಹೆದ್ದಾರಿವರೆಗೂ ನಡೆದುಕೊಂಡು ಹೋಗಿ ಬಸ್ಸಿಗಾಗಿ ಕಾಯುವ ದೃಶ್ಯವಂತೂ ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.ಪ್ರಾಧಿಕಾರ ರಚನೆ:

ಹುಲಿಗೆಮ್ಮ ದೇವಸ್ಥಾನಕ್ಕೆ ಇದುವರೆಗೂ ಸ್ಥಳೀಯವಾಗಿ ಆಡಳಿತ ಮಂಡಳಿ ಇರುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ ಮಾಡಿದೆ. ಮುಜರಾಯಿ ಮಂತ್ರಿಗಳನ್ನೇ ಪದನಿಮಿತ್ತ ಅಧ್ಯಕ್ಷರನ್ನಾಗಿ ಮಾಡಿದೆ. ದೇವಸ್ಥಾನದ ಅಭಿವೃದ್ಧಿಗೆ ಸಚಿವರು ಸಮಯ ನೀಡುವುದು ಅಸಾಧ್ಯವಾಗಿದೆ. ಹೀಗಾಗಿ, ಸ್ಥಳೀಯರನ್ನೇ ಕಾರ್ಯಾಧ್ಯಕ್ಷರನ್ನಾದರೂ ನೇಮಕ ಮಾಡಿದರೇ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎನ್ನಲಾಗುತ್ತಿದೆ.

ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಇತ್ತೀಚೆಗೆ ಆಗಮಿಸಿ, ತ್ವರಿತಗತಿಯಲ್ಲಿ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿ ಮಾಡಿ ಎಂದು ಹೇಳಿದ್ದರೂ ಸರ್ಕಾರದಿಂದ ಇನ್ನೂ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ಸಿಕ್ಕಿಲ್ಲ.