ಸಾರಾಂಶ
- ಮಾಜಿ ಪೀಠಾಧಿಪತಿ ನಂದೀಶ್ವರ ಶ್ರೀ ಬೇಸರ । ವಡೆಯರ ಬಸಾಪುರದಲ್ಲಿ ಶ್ರೀಗಳ ಜನ್ಮದಿನಾಚರಣೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ನಂದಿಗುಡಿ ನೊಳಂಬ ಮಠವನ್ನು ತ್ಯಜಿಸಿ ಬಂದಿದ್ದೇನೆ, ಮತ್ತೆ ಅದರ ಬಗ್ಗೆ ಮಾತನಾಡಲು, ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ ಎಂದು ಮಠದ ಮಾಜಿ ಪೀಠಾಧಿಪತಿ ನಂದೀಶ್ವರ ಮಹಾಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪದ ವಡೆಯರ ಬಸಾಪುರದಲ್ಲಿ ಭಕ್ತರು ಗುರುವಾರ ಹಮ್ಮಿಕೊಂಡಿದ್ದ ಸ್ವಾಮೀಜಿಯವರ ೫೬ನೇ ಜನ್ಮದಿನ ಆಚರಣೆಯಲ್ಲಿ ಮಾತನಾಡಿದರು. ನಮ್ಮ ಅವಧಿಯಲ್ಲಿ ರಕ್ತ, ಬೆವರು ಹಾಗೂ ಭಕ್ತರ ಪ್ರೀತಿ ಮತ್ತು ಅಭಿಮಾನದಿಂದ ಅಭಿವೃದ್ಧಿ ಮಾಡಲಾಗಿತ್ತು. ಪ್ರಸ್ತುತ ಮಠವು ತೊಂದರೆಯಲ್ಲಿದೆ. ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಭಕ್ತರು ತಿಳಿಸುತ್ತಿರುವುದು ಮನಸಿಗೆ ನೋವು ತಂದಿದೆ ಎಂದರು.
ನಮ್ಮ ಜನ್ಮದಿನವನ್ನು ಭಕ್ತರು ಆಚರಿಸುತ್ತಿರುವುದು ಸಂತಸ ತಂದಿದೆ. ಆದರೆ ಜನ್ಮ ದಿನಾಚರಣೆಯಲ್ಲಿ ನಾಗರೀಕರಿಗೆ ಅನುಕೂಲವಾಗುವ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಉಚಿತ ಹೃದಯ ತಪಾಸಣೆ ಮತ್ತು ರಕ್ತ ತಪಾಸಣಾಯಂಥ ಜನಪರ ಸೇವೆಯ ಶಿಬಿರಗಳು ಏರ್ಪಡಿಸಬೇಕು. ಆಗಲೇ ಜಯಂತಿ, ಜನ್ಮದಿನ ಆಚರಣೆಗಳಿಗೆ ಒಳ್ಳೆಯ ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು.ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ನಂದೀಶ್ವರ ಗುರುಗಳು ೧೯೮೬ರಲ್ಲಿಯೇ ಯಲಗುಂದ ಮಠದಲ್ಲಿ ಭಿಕ್ಷೆ ಬೇಡಿ, ನೂರಾರು ಮಕ್ಕಳಿಗೆ ವೇದ, ಉಪನಿಷತ್ತು ಪಾಠ ಹೇಳುತ್ತಿದ್ದರು. ಕಳೆದ ೩೮ ವರ್ಷಗಳಲ್ಲಿ ಪುಷ್ಪಗಿರಿ ಮತ್ತು ನಂದಿಗುಡಿ ಮಠದ ಶ್ರೀಗಳ ಬಗ್ಗೆ ಒಂದು ಮಾತು ಆಡದೇ ನಿರುಪದ್ರವಿಯಾಗಿದ್ದು ನೋವಲ್ಲಿಯೂ ಪರರಿಗೆ ಹಿತ ಬಯಸಿದರು. ಅವರು ಕಷ್ಟಕ್ಕೆ ಕುಗ್ಗಲಿಲ್ಲ, ಸುಖಕ್ಕೆ ಹಿಗ್ಗಲಿಲ್ಲ ಎಂದರು.
ವಕೀಲ ನಂದಿತಾವರೆ ತಿಮ್ಮನಗೌಡ ಮಾತನಾಡಿ, ನಂದೀಶ್ವರ ಸ್ವಾಮೀಜಿ ಅವರ ಅವಧಿಯಲ್ಲಿ ಎರಡು ಬಾರಿ ನಂದಿಗುಡಿಯಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಗಿತ್ತು. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದ್ದಂತೆ ಈ ಸ್ವಾಮೀಜಿ ಅವರಿಗೂ ಗುರುತ್ವಾಕರ್ಷಣ ಶಕ್ತಿ ಇದೆ. ಈ ಮಠಕ್ಕೆ ವಾಪಸ್ ಆಗಮಿಸಬೇಕು. ಪ್ರಸ್ತುತ ನೊಳಂಬ ಮಠದಲ್ಲಿ ಸಂಸ್ಕೃತ ಪಾಠವೂ, ಇಲ್ಲ ಸಂಸ್ಕೃತಿಯೂ ಇಲ್ಲದಾಗಿದೆ. ಪೀಠದ ಗುರುಗಳು ಸಮಾಜಮುಖಿಯಾಗದೇ, ಅಭಿವೃದ್ಧಿಯತ್ತ ಗಮನಹರಿಸದೇ, ತಪ್ಪಸ್ಸು ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.ಕೆಲವು ಹಿರಿಯರಿಗೆ ಮಠ ಮತ್ತು ಸಮಾಜದ ಚಿಂತೆ ಇಲ್ಲದೇ ಜಮೀನು ಒತ್ತುವರಿ ಮಾಡೋದು, ಪುಸ್ತಕದಲ್ಲಿ ಬಡ್ಡಿ ಲೆಕ್ಕ ಮಾಡೋದೇ ಕಾಯಕವಾಗಿದೆ ಎಂದರು.
ಸಮಾಜದ ಮುಖಂಡ ಇಂದೂಧರ್ ಮಾತನಾಡಿ, ಹಿಂದಿನ ನಂದೀಶ್ವರ ಗುರುಗಳ ಸ್ಥಾನ ತೆರವು ಮಾಡಿ ಬೇರೆ ಗುರುಗಳನ್ನು ಕೂರಿಸುವ ನಿರ್ಣಯ ಸೂಕ್ತ ತೀರ್ಮಾನವಲ್ಲ. ಪ್ರಸ್ತುತ ಪೀಠದಲ್ಲಿರುವ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಗುಂಪುಗಾರಿಕೆ, ಬೇರೆಯವರ ಮೇಲೆ ಅಪವಾದ ಹೊರಿಸುತ್ತ ಅಭಿವೃಧ್ದಿ ಬಗ್ಗೆ ಚಿಂತನೆ ಮರೆತಿದ್ದಾರೆ ಎಂದು ಆರೋಪಿಸಿದರು.ನಂದೀಶ್ವರ ಶ್ರೀಗಳ ೫೬ ಜನ್ಮದಿನಾಚರಣೆಯು ಅವರು ಪೀಠಾಧಿಪತಿಯಾದ ಅವಧಿಯಲ್ಲಿ ಸೇವೆ ಮಾಡಿದ ಫಲವಾಗಿ ಗೌರವ ನೀಡುವುದಾಗಿದೆ. ಅವರು ಸ್ನೇಹಜೀವಿ ಎಂಬುದನ್ನು ಭಕ್ತರು ನಿಜವಾಗಿಸಿದ್ದಾರೆ ಎಂದರು.
ಮುಖಂಡ ಕೆ.ನಾಗನಗೌಡ ಮಾತನಾಡಿ, ನಂದಿಗುಡಿ ನೊಳಂಬ ಪೀಠದಲ್ಲಿ ೧೯೯೨ರಿಂದ ೨೦೦೬ರವರೆಗೆ ಅಭಿವೃದ್ಧಿ ಕಾರ್ಯಗಳು, ಅನಂತರದ ಕಾರ್ಯಗಳನ್ನು ಅವಲೋಕಿಸಿದರೆ ಸಮಾಜಕ್ಕೆ ಗುರು ಮತ್ತು ಗುರಿ ಇಲ್ಲದೇ ಸಮಾಜವು ಅನಾಥವಾಗಿದೆ ಎಂದರು.ನೊಳಂಬ ಸಮಾಜದ ಸೋಮಶೇಖರ್, ಶಿವಮೂರ್ತಿ, ವೀರಭದ್ರಯ್ಯ, ನಾಗರಾಜ್, ಶಿವಾನಂದಪ್ಪ, ವಿಜಯ್‌ಕುಮಾರ್, ಪತ್ರಕರ್ತ ಸದಾನಂದ, ಹಲವು ಗ್ರಾಮಗಳ ನೂರಾರು ಭಕ್ತರು ಇದ್ದರು.
- - - -ಚಿತ್ರ೧: ವಡೆಯರ ಬಸಾಪುರದಲ್ಲಿ ನಂದೀಶ್ವರ ಸ್ವಾಮೀಜಿ ಜನ್ಮದಿನ ಕಾರ್ಯಕ್ರಮದಲ್ಲಿ ಮಠಾಧೀಶರು ಮಾತನಾಡಿದರು.