ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಚತುಷ್ಪಥ ಹೆದ್ದಾರಿ ಕಾಮಗಾರಿ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದ್ದರೆ, ಸೀಬರ್ಡ್ ನೌಕಾನೆಲೆ ನಿರ್ಮಾಣ ಕಾಮಗಾರಿ ಪ್ರವಾಹವನ್ನು ಸೃಷ್ಟಿಸಿ ಜನರ ಜೀವವನ್ನು ಹಿಂಡುತ್ತಿದೆ. ಅಭಿವೃದ್ಧಿ ಕಾಮಗಾರಿಗಳೇ ಸ್ಥಳೀಯ ಜನರ ಜೀವಕ್ಕೆ ಮುಳುವಾಗುತ್ತಿದೆ.ಚತುಷ್ಪಥ ಕಾಮಗಾರಿ ಆರಂಭವಾಗಿ ದಶಕವೇ ಸಂದರೂ ಇದುವರೆಗೂ ಕಾಮಗಾರಿ ಮುಕ್ತಾಯವಾಗಿಲ್ಲ. ಈ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ವಿರುದ್ಧ ಆಗಾಗ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿದ್ದರೂ ಯಾವುದೇ ಪರಿಣಾಮವಾಗುತ್ತಿಲ್ಲ. ಆದರೆ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ನೀರು ನುಗ್ಗುವುದು, ಅಪಘಾತ ಮೇಲಿಂದ ಮೇಲೆ ಉಂಟಾಗುತ್ತಿದೆ.
ಕುಮಟಾದ ತಂಡ್ರಕುಳಿಯಲ್ಲಿ 2017ರಲ್ಲಿ ಚತುಷ್ಪಥ ಹೆದ್ದಾರಿ ಪಕ್ಕದ ಗುಡ್ಡ ಮನೆಯ ಮೇಲೆ ಕುಸಿದು ಮೂವರು ಮೃತಪಟ್ಟಿದ್ದರು. ಈಗ ಶಿರೂರು ಬಳಿ ಕುಸಿದ ಗುಡ್ಡ ಇಷ್ಟೊಂದು ಜನರನ್ನು ಬಲಿ ಪಡೆದಿರುವುದು ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿದೆ.ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುವಾಗ ಕೊರೆದ ಗುಡ್ಡ ಕುಸಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಅಲ್ಲದೆ ಗುಡ್ಡ ಕುಸಿಯದ ರೀತಿಯಲ್ಲಿ ಮೆಟ್ಟಿಲುಗಳಂತೆ ಗುಡ್ಡವನ್ನು ಕತ್ತರಿಸಬೇಕಿತ್ತು. ಆದರೆ ಸಾರಾಸಗಟಾಗಿ ಗುಡ್ಡ ಕತ್ತರಿಸಿ ಬಿಟ್ಟಿರುವುದೇ ಈ ದುರಂತಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಐಆರ್‌ಬಿ ಕಾಮಗಾರಿಗೆ ಇನ್ನೆಷ್ಟು ಜನರು ಬಲಿಯಾಗಬೇಕು ಎಂದೂ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಐಎನ್‌ಎಸ್ ಕದಂಬ ನೌಕಾನೆಲೆ ನಿರ್ಮಾಣ ಕಾಮಗಾರಿ ಹಾಗೂ ಐಆರ್‌ಬಿಯ ಚತುಷ್ಪಥ ಕಾಮಗಾರಿಯಿಂದ ಗುಡ್ಡಬೆಟ್ಟಗಳಿಂದ ಹರಿದುಬರುತ್ತಿರುವ ನೀರು ಸರಾಗವಾಗಿ ಸಮುದ್ರ ಸೇರದೆ ಚೆಂಡಿಯಾ, ತೋಡೂರು, ಅರಗಾ ಮತ್ತಿತರ ಕಡೆಗಳಲ್ಲಿನ ಮನೆಗಳು ಮೇಲಿಂದ ಮೇಲೆ ಜಲಾವೃತವಾಗುತ್ತಿವೆ. ಅಲ್ಲಿನ ಜನತೆ ಪ್ರತಿ ಮಳೆಗಾಲದಲ್ಲೂ ಹಿಂಸೆ ಅನುಭವಿಸುತ್ತಿದ್ದಾರೆ. ನೀರು ಸರಾಗವಾಗಿ ಸಮುದ್ರಕ್ಕೆ ಸೇರುವಂತೆ ಕ್ರಮ ಕೈಗೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅಗತ್ಯ ಕಲ್ಲುಕ್ವಾರಿ ಬಂದ್ ಮಾಡಿದ ಪರಿಣಾಮ ಕಾಮಗಾರಿ ಇನ್ನೂ ಕುಂಟುತ್ತ ನಡೆಯುತ್ತಿದೆ. ಐಆರ್‌ಬಿ ಅಪಾಯಕಾರಿ ಸ್ಥಿತಿಯಲ್ಲಿರುವ ಗುಡ್ಡ ಕುಸಿಯದಂತೆ ಕ್ರಮ ಕೈಗೊಳ್ಳಬೇಕು. ಅಪಘಾತ ವಲಯದಲ್ಲಿ ಒವರ್ ಬ್ರಿಡ್ಜ್ ಅಥವಾ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಜನತೆಯಷ್ಟೇ ಅಲ್ಲ, ಜನಪ್ರತಿನಿಧಿಗಳೂ ಒತ್ತಾಯಿಸುತ್ತಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗಾಗಿ ಮನೆ, ಆಸ್ತಿಪಾಸ್ತಿ ತ್ಯಾಗ ಮಾಡಿ ಬೇರೆಡೆ ಬದುಕು ಕಂಡುಕೊಂಡಿದ್ದರೂ ಇಂದು ಅದೇ ಯೋಜನೆಗಳು ಪ್ರಾಣಾಂತಿಕವಾಗಿರುವುದು ದುರಂತವಾಗಿದೆ.ಕಾಮಗಾರಿಗಳಿಂದ ಸಮಸ್ಯೆ ಉದ್ಭವಿಸಿರುವುದು ನನ್ನ ಗಮನಕ್ಕೆ ಬಂದಿದೆ. ಸಂಸದನಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.