ಚುನಾವಣಾ ಕಣದಲ್ಲಿ ಹೊರಗಿನವರು, ಒಳಗಿನವರು ಎನ್ನುವ ಚರ್ಚೆ ಅಪ್ರಸ್ತುತ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚುನಾವಣಾ ಕಣದಲ್ಲಿ ಹೊರಗಿನವರು, ಒಳಗಿನವರು ಎನ್ನುವ ಚರ್ಚೆ ಅಪ್ರಸ್ತುತ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ ಹೊರಗಿನವರು ಎಂಬ ಕಾಂಗ್ರೆಸ್‌ನ ಟೀಕೆ, ಟಿಪ್ಪಣೆ ಅಪ್ರಸ್ತುತವಾಗಿದೆ. ಈ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸಬೇಕಿದೆ. ಚುನಾವಣೆಯಲ್ಲಿ ರಾಷ್ಟ್ರೀಯ ಆಧಾರ, ಅಭಿವೃದ್ಧಿ ವಿಚಾರಧಾರೆ ಮೇಲೆ ನಾನು ಮತ ಕೇಳುತ್ತೇನೆ. ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲೇ ಮನೆ ಮಾಡಿ ಇರುತ್ತೇನೆ. ಬೆಳಗಾವಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ಸಿನವರು ನನ್ನನ್ನು ಹೊರಗಿನವರು ಎನ್ನುವುದಕ್ಕೆ ಯಾವುದೇ ಅರ್ಥ ಇಲ್ಲ. ಕಾಂಗ್ರೆಸ್‌ನ ಅಜಯಮಾಕನ್‌ ಅವರನ್ನು ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ರಾಹುಲ್‌ ಗಾಂಧಿ ಕೇರಳದ ವೈನಾಡು ಕ್ಷೇತ್ರದಿಂದ ಗೆದ್ದಿದ್ದಾರೆ. ಸೋನಿಯಾ ಗಾಂಧಿ ಬಳ್ಳಾರಿಯಿಂದ, ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದಿದ್ದರು. ಹಾಗಾಗಿ ಹೊರಗಿನವರು ಎನ್ನುವುದು ಅಪ್ರಸ್ತುತ. ಮೋದಿ ಅವರ ಸಾಧನೆಯನ್ನು ಜನರ ಮುಂದೆ ಇಟ್ಟು ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಿಎಂ ಸಿದ್ದರಾಮಯ್ಯ ಹಿಂದುಳಿಂದ ವರ್ಗದ ನಾಯಕ ಎನ್ನುತ್ತಾರೆ. ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಕೆಲಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಿಯೂ ಹಿಂದುಳಿದ ವರ್ಗದ ನಾಯಕ ಎಂದು ಹೇಳಿಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಅನುದಾನ ಕೊಡುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಎಲ್ಲ ಆಡಳಿತಯಂತ್ರ ಸ್ಥಗಿತಗೊಂಡಿದೆ. ಕಾಂಗ್ರೆಸ್‌ಗೆ ಸೋಲಿನ ಭಯ ಆರಂಭವಾಗಿದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.ಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅಭಯ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಮೇಶ ದೇಶಪಾಂಡೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮತ್ತಿತರರು ಉಪಸ್ಥಿತರಿದ್ದರು.

---------

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಹಿತ ಕಾಂಗ್ರೆಸ್‌ ನಾಯಕರು ಕೇಸರಿ ಶಾಲು ಹಾಕಿ ಪ್ರಚಾರ ರ್‍ಯಾಲಿ ಮಾಡಿದ್ದಾರೆ. ಕೇಸರಿ ಶಾಲು ಹಾಕಿದರೆ ಜನ ನಿಮಗೆ ಮರಳಾಗಲ್ಲ. ನಿಮ್ಮ ಮನಸ್ಥಿತಿ ಬದಲಾಗದು. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ನಿಲ್ಲದು. ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದಾಗ ಟೀಕೆ ಮಾಡಿದ್ದೀರಿ. ಈಗ ನೀವ್ಯಾಕೆ ಕೇಸರಿ ಶಾಲು ಹಾಕಿಕೊಂಡು ಚುನಾವಣಾ ಪ್ರಚಾರ ಮಾಡಿದ್ದೀರಿ. ಗೋ ಹತ್ಯೆ, ಮತಾಂತರ ನಿಷೇಧ ಕಾನೂನಿನ ಬಗ್ಗೆ ಕಾಂಗ್ರೆಸ್‌ ತನ್ನ ಸ್ಪಷ್ಟ ನಿಲುವು ತಿಳಿಸಬೇಕು.

-ಜಗದೀಶ ಶೆಟ್ಟರ್‌,

ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ.

-----------

ಇಂದಿರಾ, ಸೋನಿಯಾ ಸ್ಪರ್ಧಿಸಿದಾಗ ಕಾಂಗ್ರೆಸ್‌ ಸ್ವಾಭಿಮಾನ ಎಲ್ಲಿ ಹೋಗಿತ್ತು?

ಬೆಳಗಾವಿ: ಕಾಂಗ್ರೆಸ್ಸಿಗರು ಸ್ವಾಭಿಮಾನದ ಬಗ್ಗೆ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ, ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆಗ ಕಾಂಗ್ರೆಸ್ಸಿಗರ ಸ್ವಾಭಿಮಾನ ಎಲ್ಲಿ ಹೋಗಿತ್ತು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸ್ಥಳೀಯ ಸ್ವಾಭಿಮಾನದ ಬಗ್ಗೆ ಎತ್ತಿರುವ ಪ್ರಶ್ನೆ ಅಪ್ರಸ್ತುತವಾಗಿದೆ. ಸದ್ಯ ಸ್ವಾಭಿಮಾನದ ಪ್ರಶ್ನೆ ಬೇಡ, ಅಭಿವೃದ್ಧಿ ವಿಚಾರವಾಗಿ ಮಾತನಾಡೋಣ ಎಂದರು.

ಸಿಎಂ ಸಿದ್ದರಾಮಯ್ಯ ಕೇಸರಿ ಶಾಲು ತೆಗೆದು ಬಿಸಾಡಿದರು. ಅದನ್ನು ಕಾಂಗ್ರೆಸ್ ನಾಯಕರು ಖಂಡಿಸುತ್ತಾರೆಯೇ? ಈಗ ಅದೇ ಕೇಸರಿ ಶಾಲು ಹಾಕಿಕೊಂಡರೆ ಮತಗಳು ಬರುತ್ತವೆಯೇ? ಕಾಂಗ್ರೆಸ್ಸಿಗರು ಕೇಸರಿ ಶಾಲು ಹಾಕಿಕೊಂಡರೇ ಅವರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಬದಲಾಗುವುದಿಲ್ಲ ಎಂದು ಕಿಡಿಕಾರಿದರು.