ಜಿಲ್ಲೆಗೆ ಬೇಕು ವಾರ್ಷಿಕ ೧೬ ಸಾವಿರ ಯುನಿಟ್ ರಕ್ತ

| Published : Jun 16 2024, 01:45 AM IST

ಸಾರಾಂಶ

ರಕ್ತದಾನದಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಉತ್ತೇಜಿಸುತ್ತದೆ. ದೇಹದಲ್ಲಿ ಹೊಸ ರಕ್ತಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಪ್ರತಿವರ್ಷಕ್ಕೆ ಸುಮಾರು ೧೬,೦೦೦ ಯೂನಿಟ್ ರಕ್ತಬೇಕಾಗಿರುತ್ತದೆ, ಆದರೆ ಅಷ್ಟೊಂದು ಯೂನಿಟ್ ರಕ್ತ ಸಂಗ್ರಹಿಸಲಾಗದೇ ಅನೇಕ ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಪರದಾಡಬೇಕಾದ ಪರಿಸ್ಥಿತಿ ಇದೆ. ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಮನವಿ ಮಾಡಿದರು. ನಗರದ ಗೋಕುಲ ಪದವಿ ಕಾಲೇಜಿನಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 6 ರಕ್ತನಿಧಿ ಕೇಂದ್ರ

ಗರ್ಭಿಣಿ ಸ್ತ್ರೀಯರು, ಅಪಘಾತ ಒಳಗಾದವರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗುವರಿಗೆ ಹಿಮೋಪೀಲಿಯಾ, ಕ್ಯಾನ್ಸರ್ ಹಾಗೂ ತ್ಯಾಲಸ್ಮಿಯಾ ರೋಗಿಗಳಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಅವಶ್ಯಕತೆಯನ್ನು ಪೂರೈಸಲು ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ೨ ಹಾಗೂ ೪ ಖಾಸಗಿ ರಕ್ತನಿಧಿ ಕೇಂದ್ರಗಳಿವೆ. ಈ ಕೇಂದ್ರಗಳಿಗೆ ಪ್ರತಿ ತಿಂಗಳು ಸುಮಾರು ೧೨೫೦ ಯೂನಿಟ್ ರಕ್ತ ಸಂಗ್ರಹಿಸಬೇಕು. ಆದರೆ ಈಗ ಇಷ್ಟು ಪ್ರಮಾಣದಲ್ಲಿ ರಕ್ತ ಸಂಗ್ರಹಣೆಯಾಗುತ್ತಿಲ್ಲ. ಈ ರಕ್ತ ಸಂಗ್ರಹಣೆ ಹೆಚ್ಚಿಸಲು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ವಿದ್ಯಾರ್ಥಿಗಳು ಮುಂದೆ ಬರುವಂತೆ ಮನವಿ ಮಾಡಿದರು. ರಕ್ತದಾನ ಕುರಿತು ಅರಿವು ಮೂಡಿಸಿ

ಸ್ವಯಂಪ್ರೇರಿತ ರಕ್ತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಅವಶ್ಯಕತೆಯಿರುವ ವ್ಯಕ್ತಿಗಳಿಗೆ ರಕ್ತವನ್ನು ಸರಿಯಾದ ವೇಳೆಯಲ್ಲಿ ಪೂರೈಸುವುದು. ತುರ್ತು ಸಮಯದಲ್ಲಿ ವಿತರಿಸಲು ಅವಶ್ಯಕವಾದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ರಕ್ತನಿಧಿ ಘಟಕಗಳಲ್ಲಿ ಶೇಖರಿಸಿಡುವುದು. ಸ್ವಯಂಪ್ರೇರಿತ ರಕ್ತದಾನಿಗಳಿಗೆ ಧನ್ಯವಾದ ಸಲ್ಲಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದರು.

ರಕ್ತದಾನಕ್ಕೆ ಆಸಕ್ತಿಯಿಲ್ಲದ ಆರೋಗ್ಯವಂತ ವ್ಯಕ್ತಿಗಳಲ್ಲಿ ರಕ್ತದಾನ ಮಾಡುವಂತೆ ಪ್ರೇರೇಪಿಸುವುದು. ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಅವಶ್ಯಕವಾದಾಗ ಮಾತ್ರ ರಕ್ತದಾನ ಮಾಡುವುದಲ್ಲದೇ ಇನ್ನಿತರೆ ಸಮಯಗಳಲ್ಲಿ ರಕ್ತದಾನ ಮಾಡುವಂತೆ ಪ್ರೇರೇಪಿಸುವುದೇ ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.ರಕ್ತದಾನದಿಂದ ಆರೋಗ್ಯ ರಕ್ಷಣೆ

ಹೆಣ್ಣು ಗಂಡೆಂಬ ಭೇದವಿಲ್ಲದೇ ೧೮ ರಿಂದ ೬೦ ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಿಯ ದೇಹದ ತೂಕ ೪೫ ಕೆ.ಜಿ.ಗಿಂತ ಹೆಚ್ಚಿರಬೇಕು. ಗಂಡಸರು ೩ ತಿಂಗಳಿಗೆ ಒಮ್ಮೆ, ಹೆಂಗಸರು ೪ ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೂ ಉತ್ತಮ.ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕನಿಷ್ಠ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು. ರಕ್ತದಾನ ಮಾಡುವುದರಿಂದ ಹೃದಯಘಾತದ ಸಂಭವ ಕಡಿಮೆಯಾಗುವುದು ಎಂದರು.

ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಉತ್ತೇಜಿಸುತ್ತದೆ. ದೇಹದಲ್ಲಿ ಹೊಸ ರಕ್ತಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಎಂದು ಅರಿವು ಮೂಡಿಸಿದರು.ಪ್ರಬಂಧ ಸ್ಪರ್ಧೆ ವಿಜೇತರುರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ಜಿಲ್ಲಾಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸದರಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಎಸ್.ಸ್ವಾತಿ, ಪ್ರಥಮ ಬಹುಮಾನ, ಎಸ್.ಎಂ.ಜಿ. ವಿಷ್ಣು ಕಾಲೇಜು ಆಪ್ ನರ್ಸಿಂಗ್, ಕೋಲಾರ ಗ್ಲೋರಿ, ದ್ವಿತೀಯ ಬಹುಮಾನ, ಶ್ರೀ ದೇವರಾಜ್ ಅರಸ್ ಕಾಲೇಜ್ ಅಪ್ ನರ್ಸಿಂಗ್, ಕೋಲಾರ ಮತ್ತು ಮೌನಿಕ ವೈ.ವಿ ತೃತೀಯ ಬಹುಮಾನ, ಎಸ್.ಎಂ.ಜಿ. ವಿಷ್ಣು ಕಾಲೇಜು ಆಪ್ ನರ್ಸಿಂಗ್, ಕೋಲಾರ ಇವರಿಗೆ ಬಹುಮಾನ ವಿತರಿಸಲಾಯಿತು.ರಕ್ತದಾನಿಗಳಿಗೆ ಸನ್ಮಾನ

ರಕ್ತದಾನಿಗಳಾದ ಮಹೇಶ್ ವಿ.ಎಸ್.ಕೃಷ್ಣಮೂರ್ತಿ ಮತ್ತು ಕೊರೊಲಾನ್ ಜಾನ್‌ರನ್ನು ಸನ್ಮಾನಿಸಿದರು. ಗೋಕುಲ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಅದರಂತೆ ೪೨ ರಕ್ತದ ಯೂನಿಟ್ ಸಂಗ್ರಹಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಗೋಕುಲ ವಿದ್ಯಾಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಎನ್.ತೇಜಸ್ವಿನಿ ವಹಿಸಿದ್ದು, ಪ್ರಾಂಶುಪಾಲ ಶ್ರೀನಿವಾಸ್, ಎನ್‌ಎಸ್‌ಎಸ್ ಅಧಿಕಾರಿ ಗಂಗಾಧರಪ್ಪ, ಜಿಲ್ಲಾ ಮೇಲ್ವಿಚಾರಕಿ ಹೇಮಲತಾ ಇದ್ದರು.