ಸೈಬರ್‌ ಅಪರಾಧಕ್ಕೆ ಹೆಚ್ಚು ಸಿಲುಕುವವರೇ ಸುಶಿಕ್ಷಿತರು

| Published : Jun 16 2024, 01:45 AM IST

ಸೈಬರ್‌ ಅಪರಾಧಕ್ಕೆ ಹೆಚ್ಚು ಸಿಲುಕುವವರೇ ಸುಶಿಕ್ಷಿತರು
Share this Article
  • FB
  • TW
  • Linkdin
  • Email

ಸಾರಾಂಶ

ಸೈಬರ್ ಅಪರಾಧಕ್ಕೆ ಒಳಗಾಗುವವರು ಹಳ್ಳಿಯ ರೈತಾಪಿ, ಕೂಲಿಕಾರರು ಅಲ್ಲ, ಒಳ್ಳೆಯ ಶಿಕ್ಷಣ ಪಡೆದವರೇ ಹೆಚ್ಚು. ತಾಳ್ಮೆಯಿಂದ ಯಾವುದು ಸರಿ? ಯಾವುದು ತಪ್ಪು? ಎಂದು ಯೋಚಿಸುವುದು ಬಿಟ್ಟು, ಆಸೆಗೆ ಬಿದ್ದು ಅಪರಾಧ ಮಾಡುವವರ ಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.

ಧಾರವಾಡ:

ಪಾಲಕರು ಏನು ಮಾಡುತ್ತಾರೋ ಮಕ್ಕಳು ಅದನ್ನೇ ಪಾಲಿಸಲು ಮುಂದಾಗುತ್ತಾರೆ. ಮಕ್ಕಳು ಪಾಲಕರ ಪ್ರತಿಬಿಂಬ ಎಂಬುದನ್ನು ಮರೆಯಬಾರದು. ಆದ್ದರಿಂದ ಮಕ್ಕಳ ಮುಂದೆ ಮೊಬೈಲ್ ಬಳಸದೇ ಪಾಲಕರು ಪುಸ್ತಕ, ಪತ್ರಿಕೆ ಓದಬೇಕು ಎಂದು ಧಾರವಾಡ ಕೇಂದ್ರ ಕಾರಾಗೃಹದ ಆಂತರಿಕ ಭದ್ರತಾ ಅಧಿಕಾರಿ ಶಿವರಾಜ ಪಾಟೀಲ ಸಲಹೆ ನೀಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಆಯೋಜಿಸಿದ್ದ ಸೈಬರ್ ಅಪರಾಧ ಮಾಹಿತಿ ನೀಡುವ ಉಪನ್ಯಾಸದಲ್ಲಿ ಅವರು ಮಾತನಾಡಿ, ಇಂದು ಯುವಕರು ದಾರಿ ತಪ್ಪುತ್ತಿರುವುದೇ ಪಾಲಕರ ನಡೆ-ನುಡಿಯಿಂದ ಎನ್ನುವುದು ಬೇಸರದ ಸಂಗತಿ ಎಂದರು.

ಸೈಬರ್ ಅಪರಾಧಕ್ಕೆ ಒಳಗಾಗುವವರು ಹಳ್ಳಿಯ ರೈತಾಪಿ, ಕೂಲಿಕಾರರು ಅಲ್ಲ, ಒಳ್ಳೆಯ ಶಿಕ್ಷಣ ಪಡೆದವರೇ ಹೆಚ್ಚು. ತಾಳ್ಮೆಯಿಂದ ಯಾವುದು ಸರಿ? ಯಾವುದು ತಪ್ಪು? ಎಂದು ಯೋಚಿಸುವುದು ಬಿಟ್ಟು, ಆಸೆಗೆ ಬಿದ್ದು ಅಪರಾಧ ಮಾಡುವವರ ಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಯುವಕರು, ವಿದ್ಯಾರ್ಥಿಗಳು ಈ ಸೈಬರ್ ಅಪರಾಧದ ಆಳ-ಅಗಲ ವನ್ನು ತಿಳಿದುಕೊಳ್ಳಲು ಇಂಥ ಮಾಹಿತಿ ನೀಡುವ ಉಪನ್ಯಾಸಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಸೈಬರ್ ಅಪರಾಧ ವಿಭಾಗದ ಶಿವಾನಂದ ತಿಮ್ಮಾಪೂರ, ಸೈಬರ್ ಅಪರಾಧ ಅಂದರೆ ಏನು? ಅದರ ಸ್ವರೂಪಗಳು ಎಂಥವಿರುತ್ತವೆ? ಎಂಥವರು ಇದಕ್ಕೆ ಬಲಿಯಾಗುತ್ತಾರೆ? ಹೇಗೆ ಬಲಿ ಹಾಕುತ್ತಾರೆ? ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮನೆಯಲ್ಲಿ ಕುಳಿತು ಹಣ ಗಳಿಸಿ, ಪಾರ್ಟ್ಟೈಮ್ ಜಾಬ್ ಮಾಡಿ ಸಾವಿರ ಸಾವಿರ ಹಣ ಪಡೆಯಿರಿ.. ಹೀಗೆ ಹಲವು ರೀತಿಯ ಜಾಹೀರಾತು ನಂಬಿ ಮೋಸಹೋಗುವುದು ಸಾಮಾನ್ಯ. ವೈದ್ಯರು, ಪ್ರಾಧ್ಯಾಪಕರು ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ವಿವೇಕ ಬಳಸದಿರುವುದಕ್ಕೆ ಸೈಬರ್ ಅಪರಾಧ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು. ಡಾ. ವಿ. ಶಾರದಾ ಅತಿಥಿಗಳನ್ನು ಪರಿಚಯಿಸಿದರು. ಸವಿತಾ ಕುಸುಗಲ್ಲ ನಿರೂಪಿಸಿದರು. 200 ವಿದ್ಯಾರ್ಥಿಗಳಿದ್ದರು.

ಕರ್ನಾಟಕ ಪೊಲೀಸ್ ಆ್ಯಪ್‌ ಡೌನ್‌ಲೋಡ್ ಬಳಸಿ

ಪೆಡ್ಲೆಕ್ಸ್ ಕೋರಿಯರ್ ಮನೆಗೆ ಬರುತ್ತದೆ. ಅದರಲ್ಲಿ ಡ್ರಕ್ಸ್‌ ಇರಲಿದ್ದು, ಈ ಮೂಲಕ ನಿಮ್ಮನ್ನು ಸಿಬಿಐದವರು ಎಂದು ಫೋನ್ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುವ ತಂಡ ಹುಟ್ಟಿಕೊಂಡಿದೆ. ಇಂತಹ ಕೋರಿಯರ್‌ಗಳಿಂದ ಎಚ್ಚರವಿರಬೇಕು. ಕರ್ನಾಟಕ ಪೊಲೀಸ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಯಾವುದೇ ವೆಬ್‌ಸೈಟ್, ಲಿಂಕ್‌ ಬಂದರೆ ನಿಜವೇ ಎಂಬುದನ್ನು ಕರ್ನಾಟಕ ಪೊಲೀಸ್ ಆ್ಯಪ್‌ಗೆ ಹೋಗಿ ಆ ಲಿಂಕ್‌ ಹಂಚಿಕೊಂಡರೆ ಅದರ ಸತ್ಯಾಸತ್ಯತೆ ಕುರಿತು ಮಾಹಿತಿ ಸಿಗಲಿದೆ. ಇನ್ನು, ಮೊಬೈಲ್ ಕಳೆದುಕೊಂಡಿದ್ದರೆ ಸಿಇಐರ್ ಪೋರ್ಟಲ್‌ಗೆ ಹೋಗಿ ಮೊಬೈಲ್ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆ ನಿಮ್ಮ ಮೊಬೈಲ್ ಹುಡುಕಿ ಕೊಡಲಿದೆ. ಹೀಗೆ ಹಲವು ರೀತಿಯಲ್ಲಿ ಸೈಬರ್ ಕ್ರೈಂ ತಡೆಯುವ ಪ್ರಯತ್ನ ಇಲಾಖೆ ಮಾಡುತ್ತಿದೆ ಎಂದು ಶಿವಾನಂದ ತಿಮ್ಮಾಪೂರ ಮಾಹಿತಿ ನೀಡಿದರು.