ಯೋಗ ಮಂದಿರ ನಿರ್ಮಾಣದ ಕನಸು ನನಸು: ಆನಂದ್

| Published : Jun 24 2024, 01:35 AM IST

ಸಾರಾಂಶ

ಕಡೂರು, ಮನುಷ್ಯನಿಗೆ ಆರೋಗ್ಯ ನೀಡುವ ಯೋಗ ವಿದ್ಯೆಯನ್ನು ಕಲಿಯಲು ಪೂರಕವಾಗಿ ಜನರ ಬಹುದಿನದ ಬೇಡಿಕೆಯಾದ ಯೋಗ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಮನುಷ್ಯನಿಗೆ ಆರೋಗ್ಯ ನೀಡುವ ಯೋಗ ವಿದ್ಯೆಯನ್ನು ಕಲಿಯಲು ಪೂರಕವಾಗಿ ಜನರ ಬಹುದಿನದ ಬೇಡಿಕೆಯಾದ ಯೋಗ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಕಡೂರಿನಲ್ಲಿ ಪುರಸಭೆಯಿಂದ ಕೋರ್ಟ್ ರಸ್ತೆಯಲ್ಲಿ 30 ಲಕ್ಷ ರು. ವೆಚ್ಚದ ಯೋಗಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯರು ವಿಶ್ವಕ್ಕೆ ನೀಡಿದ ಯೋಗ ವಿದ್ಯೆಯೆಂಬುದು ಇಂದು‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ. ಅಂತಹ ಯೋಗ ವಿದ್ಯೆಯ ಮಾರ್ಗದರ್ಶನ ಜನಸಾಮಾನ್ಯರಿಗೂ ಒಂದೆಡೆ ಸಿಗಬೇಕೆಂಬ ಉದ್ದೇಶದಿಂದ ಯೋಗ ಮಂದಿರ ನಿರ್ಮಾಣ ಆಗಲಿದೆ. ವೇದಾ ಪಾರ್ಕಿನಲ್ಲಿ ಜಿಮ್‌ ಮುಂತಾದ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಅತಿ ಶೀಘ್ರವಾಗಿ ಆಧ್ಯತೆ ನೀಡಲಾಗುವುದು. ಪುರಸಭೆ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದರು.

ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಬೆಂಕಿಶೇಖರಪ್ಪ ಮಾತನಾಡಿ, ಬಹಳಷ್ಟು ದಿನಗಳಿಂದ ಯೋಗ ಮಂದಿರಕ್ಕಾಗಿ ಬೇಡಿಕೆಯಿಟ್ಟರೂ ಯಾರೂ ಸಹಕಾರ ನೀಡಲಿಲ್ಲ. ಕೆ.ಎಸ್.ಆನಂದ್ ಯೋಗಮಂದಿರಕ್ಕಾಗಿ ಆಸಕ್ತಿ ವಹಿಸಿ ಕನಸು ನನಸಾಗಿಸಿದ್ದಾರೆ. ಅವರಿಗೆ ಕಡೂರು ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಜನರ ಆರೋಗ್ಯ ವಿಚಾರದಲ್ಲಿ ಪುರಸಭೆ ಯಾವಾಗಲೂ ಜಾಗರೂಕವಾಗಿರುತ್ತದೆ. ಈ ಹಿಂದೆ ಬಹುದೊಡ್ಡ ಜಾಗದಲ್ಲಿ ವೇದಾ ಪಾರ್ಕ್ ನಿರ್ಮಾಣ ಮಾಡಿದ್ದು, ಜನರಿಗೆ ಉಪಯೋಗವಾಗುತ್ತಿದೆ. ಈಗ ಯೋಗ ಮಂದಿರ ನಿರ್ಮಾಣ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಸುರುಚಿ ನರೇಂದ್ರನಾಥ್, ಪುರಸಭಾ ಸದಸ್ಯ ತೋಟದಮನೆ ಮೋಹನ್, ರಾಘವೇಂದ್ರ ಯೋಗ ಕೇಂದ್ರದ ಪ್ರಾಚಾರ್ಯ ಗಿರೀಶ್, ಯೋಗ ಶಿಕ್ಷಕಿ ವಿಜಯಾ ಗಿರೀಶ್, ಪುರಸಭಾ ಸಿಬ್ಬಂದಿ ಮತ್ತು ಸದಸ್ಯರು ಇದ್ದರು.

3ಕೆೆಕೆಡಿಯು3.

ಕಡೂರಿನ ಕೋರ್ಟ್ ರಸ್ತೆಯಲ್ಲಿ 30 ಲಕ್ಷ ರೂ ವೆಚ್ಚದ ಯೋಗಮಂದಿರ ನಿರ್ಮಾಣ ಕಾರ್ಯಕ್ಕೆ ಶಾಸಕ ಕೆ.ಎಸ್ .ಆನಂದ್ ಚಾಲನೆ ನೀಡಿದರು.