ಹೊಳೆಹೊನ್ನೂರು ಜನರ ಸೇತುವೆಯ ಕನಸು ನನಸು

| Published : Feb 07 2025, 12:30 AM IST

ಸಾರಾಂಶ

ಕಳೆದ ಎರಡು ಮೂರು ದಶಕಗಳಿಂದ ಕಿರಿದಾದ ಹಳೆಯ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಕಿರಿಕಿರಿ ಅನುಭವಿಸಿದ್ದ ಪಟ್ಟಣದ ಹಾಗೂ ಸುತ್ತಮುತ್ತಲಿನ ಜನರ ಕನಸು ಸುಸಜ್ಜಿತವಾದ ಹೊಸ ಸೇತುವೆ ನಿರ್ಮಾಣದಿಂದ ನನಸಾಗಿದೆ.

2018-19ರಲ್ಲಿ ಆರಂಭವಾಗಿದ್ದ ಶಿವಮೊಗ್ಗ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಕಾಮಗಾರಿ । ಸೇತುವೆಗಿದೆ ಸ್ವಾತಂತ್ರ್ಯ ಪೂರ್ವದ ನಂಟು

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಳೆದ ಎರಡು ಮೂರು ದಶಕಗಳಿಂದ ಕಿರಿದಾದ ಹಳೆಯ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಕಿರಿಕಿರಿ ಅನುಭವಿಸಿದ್ದ ಪಟ್ಟಣದ ಹಾಗೂ ಸುತ್ತಮುತ್ತಲಿನ ಜನರ ಕನಸು ಸುಸಜ್ಜಿತವಾದ ಹೊಸ ಸೇತುವೆ ನಿರ್ಮಾಣದಿಂದ ನನಸಾಗಿದೆ.

2018-19ರಲ್ಲಿ ಶಿವಮೊಗ್ಗ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಕಾಮಗಾರಿ ಆರಂಭವಾಯಿತು. ಕಾಮಗಾರಿ ಆರಂಭದಲ್ಲಿ ಬಿರುಸು ಪಡೆದುಕೊಂಡು ಎರಡೇ ವರ್ಷದಲ್ಲಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಉಳಿದ ಕಾಮಗಾರಿ ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಳೆದ ವರ್ಷ ಸರ್ಕಾರದಿಂದ ಅನುದಾನ ಬಂದ ಬಳಿಕ ಕಾಮಗಾರಿ ಈಗ ಪೂರ್ಣಗೊಂಡಿದೆ.

ಭದ್ರಾನದಿಗೆ ಹೊಸ ಸೇತುವೆ ಆಗಬೇಕೆಂದು ಹಲವು ಪ್ರಗತಿಪರ ಸಂಘಟನೆಗಳ ಹೋರಾಟ ಮಾಡಿದ್ದವು. ಹೋರಾಟ ಫಲವಾಗಿ ಸೇತುವೆ ಕಾಮಗಾರಿ ಆರಂಭಗೊಂಡು ಈಗ ಕಾಮಗಾರಿ ಫೂರ್ಣಗೊಂಡಿರುವುದು ಈ ಭಾಗದ ಜನರಲ್ಲಿ ಅತೀವ ಸಂತಸ ತಂದಿದೆ.

ಸ್ವಾತಂತ್ರ್ಯ ಪೂರ್ವ ಸೇತುವೆ:

ಸುಮಾರು 76 ವರ್ಷ ಹಳೆಯದಾದ ಈ ಸೇತುವೆ ತುಂಬಾ ಕಿರಿದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1942ರಲ್ಲಿ ಸಿ.ಎನ್.ನರಸಿಂಗರಾವ್ ಮತ್ತು ಎಚ್.ಸಿ.ರಾಮಚಂದ್ರ ಎಂಬ ಎಂಜಿನಿಯರ್ ರವರ ನೇತೃತ್ವದಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾರ್ಯ 1948ರಲ್ಲಿ ಪೂರ್ಣವಾಯಿತು.

ಹಳೆಯ ಸೇತುವೆ ಅಂದಿನ ಜನಸಂಖ್ಯೆಗೆ ಅನುಗುಣವಾಗಿತ್ತು. ಸ್ವಾತಂತ್ರ್ಯ ನಂತರ ಜನಸಂಖ್ಯೆ ಮತ್ತು ನಾಗರಿಕತೆ ಬೆಳೆದಂತೆಲ್ಲ ವಾಹನಗಳ ಬಳಕೆಯು ಹೆಚ್ಚಾಯಿತು. ಆದ್ದರಿಂದ ವಾಹನ ಸವಾರರು ಪ್ರತಿದಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಅನುಭವಿಸುವಂತಾಗಿತ್ತು.

ವಾರಾಂತ್ಯದಲ್ಲಿ ಸಂತೆ ಮತ್ತಿತರ ಕಾರಣಗಳಿಗೆ ಹೆಚ್ಚಿನ ಸಂಖ್ಯೆ ಜನರು ಈ ಮಾರ್ಗದಲ್ಲೇ ಆಗಮಿಸುತ್ತಿದ್ದರಿಂದ ಸಂದಣಿ ಉಂಟಾಗುತ್ತಿತ್ತು. ಹಲವುಬಾರಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿ ಸೇತುವೆ ದಾಟುವುದು ಹರಸಾಹಸವೇ ಆಗುತ್ತಿತ್ತು. ಕೆಲವೊಮ್ಮೆ ಘಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿ ಪೊಲೀಸರು ಬಂದು ತೆರವು ಮಾಡುತ್ತಿದ್ದರು. ಆದರೆ, ಈಗ ಭದ್ರಾನದಿಗೆ ಒನ್ ವೇ ಸೇತುವೆ ನಿರ್ಮಾಣವಾಗಿದ್ದು ಇನ್ನೊಂದು ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ಮೇಲ್ಸೇತುವೆ ನಿರ್ಮಾಣ ಅನಿವಾರ್ಯ:

ಹೊಳೆಹೊನ್ನೂರಿಂದ ಭದ್ರಾವತಿಗೆ ಹೋಗುವ ಮಾರ್ಗದಲ್ಲಿ ಬೈಪಾಸ್ ರಸ್ತೆ ಹಾದು ಹೋಗುವುದರಿಂದ ಮೇಲ್ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ. ಕಾರಣ ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಬೈ ಪಾಸ್ ರಸ್ತೆಯಲ್ಲಿ ವಾಹನಗಳ ಚಾಲನೆ ಸಾಮಾನ್ಯವಾಗಿ ವೇಗವಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಅಂಡರ್ ಪಾಸ್ ವ್ಯವಸ್ಯೆ:

ಭದ್ರಾನದಿಯ ನೂತನ ಸೇತುವೆ ದಾಟಿದ ಕೂಡಲೇ ಹೊಳೆಹೊನ್ನೂರು ಪಟ್ಟಣದಿಂದ ಹೊಳೆಬೆಳಗಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಇದರಿಂದ ಬೈಪಾಸ್ ಸವಾರರಿಗೆ ಹೆಚ್ಚಿನ ಉಪಯೋಗವಾಗಿದೆ.

ಹೊಸ ಸೇತುವೆ ನಿರ್ಮಾಣದಿಂದ ಹೊಳೆಹೊನ್ನೂರು ಮತ್ತು ಸುತ್ತಮುತ್ತಲ ಜನರ ಜೊತೆಗೆ ರೈತರಿಗೂ ಸಹಕಾರಿಯಾಗಿದೆ. ರೈತರು ಹೊಲ ಗದ್ದೆಗಳಿಗೆ ಹೋಗಲು, ದನಕರುಗಳನ್ನು ಮೇಯಿಸಲು ಹೋಗುವುದು ಸೇರಿದಂತೆ ಎಲ್ಲದಕ್ಕೂ ಅನುಕೂಲವಾಗಿದೆ. ವಾಹನಗಳು ಬೈಪಾಸ್ ಮೂಲಕ ಪಟ್ಟಣದ ಹೊರಗಡೆಯೇ ಹೋಗುವುದರಿಂದ ರೈತರಿಗೆ ಮತ್ತು ಜಾನುವಾರಿಗೆ ಅನುಕೂಲವಾಗಲಿದೆ.

-ಎಚ್.ಆರ್.ಬಸವರಾಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ.

ಹೊಳೆಹೊನ್ನೂರು ಪಟ್ಟಣದಿಂದ ಭದ್ರಾವತಿಗೆ ಹೋಗುವ ಮಾರ್ಗದಲ್ಲಿ ಬೈಪಾಸ್ ರಸ್ತೆ ಹಾದು ಹೋಗುವುದರಿಂದ ಅಲ್ಲಿ ಮೇಲ್ಸೇತುವೆ ನಿರ್ಮಾಣದ ಅವಶ್ಯಕತೆ ತುಂಬಾ ಇದೆ. ಸರ್ಕಾರ ಈ ಬಗ್ಗೆ ಆಲೋಚಿಸಬೇಕು. ಇಲ್ಲವಾದರೆ ಅಲ್ಲಿ ಆಗುವ ಅನಾಹುತಗಳಿಗೆ ಅವರೇ ನೇರ ಹೊಣೆಯಾಗಬೇಕಾಗುತ್ತದೆ.

ಎನ್.ರಮೇಶ್ ಎಮ್ಮಹಟ್ಟಿ ಗ್ರಾಮ.