ಬತ್ತಿದ ಕೆರೆಗಳಲ್ಲೀಗ ಜಲದ ಜೀವಕಳೆ

| Published : Apr 29 2025, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಜಿಲ್ಲೆಯ ಗಡಿಭಾಗದಲ್ಲಿ ಕೆರೆಗಳು ತುಂಬಿಕೊಂಡಿವೆ. ಹೀಗಾಗಿ, ಇದೀಗ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಇದರಿಂದ ಜನರಲ್ಲಿ ಹರ್ಷ ಮೂಡಿದ್ದು, ಕೆರೆಗಳು ಈ ಬಾರಿ ಭರ್ತಿಯಾಗಿದ್ದೇ ವಿಶೇಷ. ತೀರಾ ಇತ್ತೀಚಿನವರೆಗೂ ಕೆರೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಜನ, ಜಾನುವಾರುಗಳು ಸಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿತ್ತು. ಸಾರ್ವಜನಿಕರು ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕು ಎನ್ನುವಷ್ಟರಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮುತುವರ್ಜಿ ವಹಿಸಿ ಇಂಡಿ ಹಾಗೂ ಚಡಚಣ ಭಾಗದ ಕೆರೆಗಳನ್ನು ತುಂಬಿಸಿದ್ದಾರೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಜಿಲ್ಲೆಯ ಗಡಿಭಾಗದಲ್ಲಿ ಕೆರೆಗಳು ತುಂಬಿಕೊಂಡಿವೆ. ಹೀಗಾಗಿ, ಇದೀಗ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಇದರಿಂದ ಜನರಲ್ಲಿ ಹರ್ಷ ಮೂಡಿದ್ದು, ಕೆರೆಗಳು ಈ ಬಾರಿ ಭರ್ತಿಯಾಗಿದ್ದೇ ವಿಶೇಷ. ತೀರಾ ಇತ್ತೀಚಿನವರೆಗೂ ಕೆರೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಜನ, ಜಾನುವಾರುಗಳು ಸಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿತ್ತು. ಸಾರ್ವಜನಿಕರು ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕು ಎನ್ನುವಷ್ಟರಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮುತುವರ್ಜಿ ವಹಿಸಿ ಇಂಡಿ ಹಾಗೂ ಚಡಚಣ ಭಾಗದ ಕೆರೆಗಳನ್ನು ತುಂಬಿಸಿದ್ದಾರೆ.

ಮಳೆ ಬೀಳುವ ಮುಂಚೆಯೇ ಬೇಸಿಗೆಯಲ್ಲಿ ಕೆರೆಗಳು ತುಂಬಿಕೊಂಡು ಕಂಗೊಳಿಸುತ್ತಿರುವುದನ್ನು ನೋಡಿ, ಜನರಿಗೂ ಜೀವ ಬಂದಂತಾಗಿದೆ. ಬರಗಾಲ ಆವರಿಸಿದ್ದರಿಂದ ಜೀವಜಲ ಅಸ್ತಿತ್ವ ಕಳೆದುಕೊಳ್ಳುವುದು ಸಾಮಾನ್ಯ. ಕೆರೆಯಲ್ಲಿ ನೀರು ಸಂಗ್ರಹವಾಗದಿದ್ದರೆ ಭವಿಷ್ಯದಲ್ಲಿ ಜನ, ಜಾನುವಾರುಗಳು ಜೀವನ ನಡೆಸುವುದು ಕೂಡ ಕಷ್ಟಕರವಾಗಿತ್ತು. ಇದೀಗ ಜನರು ನೀರಿಗಾಗಿ ಪರಿತಪಿಸುವುದು ನಿರಾಳವಾಗಿದೆ. ಬೇಸಿಗೆ ಭೀಕರ ಪ್ರಖರಕ್ಕೆ ಭೂಮಿ‌ ಕಾದು, ಕಾವು ಹೆಚ್ಚಾಗಿ, ಕೆರೆಗಳೆಲ್ಲ ಬತ್ತಿ, ಭೂಮಿ ಬಾಯ್ತೆರೆದಿತ್ತು. ಹೀಗಾಗಿ ಅಂತರ್ಜಲಮಟ್ಟ ಕುಸಿದು ಜಲಮೂಲಗಳು ಬತ್ತಿ ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಿದ್ದರಿಂದ ಕೆರೆಗಳು ಮೈದುಂಬಿಕೊಂಡಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿದೆ. ಕುಡಿಯುವ ನೀರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಅನುಕೂಲವಾಗಿದೆ.

ಕಂಗೊಳಿಸುತ್ತಿರುವ ಕೆರೆಗಳು:

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ದೇಗಿನಾಳ-1 ಮತ್ತು 2, ನಿಂಬಾಳ, ಬಬಲಾದ, ಹಳಗುಣಕಿ, ಕೂಡಗಿ, ಗುಂದವಾನ, ಹೊರ್ತಿ, ಕೊಳೂರಗಿ, ಸಾವಳಸಂಗ, ಸೊನಕನಹಳ್ಳಿ, ನಂದರಗಿ, ಹಂಜಗಿ, ಹಡಲಸಂಗ-1 ಮತ್ತು 2 , ತಡವಲಗಾ, ಅಥರ್ಗಾ, ಕೊಟ್ನಾಳ ಹಾಗೂ ಚಡಚಣ ತಾಲೂಕಿನ ಇಂಚಗೇರಿ, ಜಿಗಜಿವಣಗಿ, ಶಿಗಣಾಪೂರ, ಸಾತಲಗಾಂವ ಗ್ರಾಮಗಳ ವ್ಯಾಪ್ತಿಯ ಕೆರೆಗಳಿಗೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ತಿಡಗುಂದಿ ಕಾಲುವೆಯ ಮೂಲಕ ಮೂಲಕ ನೀರು ಹರಿಸಲಾಗಿದೆ. ನೀರು ಹರಿಸಿದ್ದರಿಂದ ಗ್ರಾಮದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.

ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕಿನಲ್ಲಿ ಐತಿಹಾಸಿಕ ಕೆರೆಗಳಿದ್ದು, ಇಂಡಿ ತಾಲ್ಲೂಕಿನ 21 ಕೆರೆಗಳು ಹಾಗೂ ಚಡಚಣ ತಾಲೂಕಿನ 5 ರಿಂದ 6 ಕೆರೆಗಳು ಭರ್ತಿಯಾಗಿವೆ.

ನೀಗಿನ ನೀರಿನ ಬವಣೆ:

ತಾಲೂಕಿನ‌ 21 ಕೆರೆಗಳನ್ನು ತುಂಬಿಸುವುದರ ಜತೆಗೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಒಳಪಡುವ ಸುಮಾರು 40 ರಿಂದ 50 ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲವಾಗಿದೆ. ಕೆರೆಗಳನ್ನು ತುಂಬಿಸುವ ಕಾರ್ಯ ಮಾಡದಿದ್ದರೆ ತಾಲೂಕಿನ ಹಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಇದನ್ನು ಅರಿತ ಶಾಸಕ ಯಶವಂತರಾಯಗೌಡ ಪಾಟೀಲ ಈ ಕಾರ್ಯಕ್ಕೆ ಮುಂದಾಗಿದ್ದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬವಣೆ ನೀಗಿದೆ.

ಬರಗಾಲ ಆವರಿಸಿದ್ದರಿಂದ ಜೀವಜಲಕ್ಕೆ ಎಲ್ಲಿಲ್ಲದ ಬೇಡಿಕೆ. ಇದೆಲ್ಲ ತಿಳಿದು ಜನರು ಮಾತ್ರ ತಲೆ ಕೆಡಿಸಿಕೊಳ್ಳದೇ ಬೇಕಾ ಬಿಟ್ಟಿಯಾಗಿ ನೀರನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ, ಇದೀಗ ಜನರು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ. ಈಗ ಬರ ಆವರಿಸಿದೆ. ಅಂತರ್ಜಲಮಟ್ಟ ಕುಸಿದು ಜಲಮೂಲಗಳು ಬತ್ತಿ ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಕಾಲುವೆ ಮೂಲಕ ಹಳ್ಳಕ್ಕೆನೀರು ಹರಿಸಿದ್ದರಿಂದ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿದೆ. ಅಲ್ಲದೇ, ಜನರು ಹಾಗೂ ರೈತರ ಕೃಷಿ ಕಾರ್ಯಗಳಿಗೂ ನೀರಿನ ವ್ಯವಸ್ಥೆಯಾದಂತಾಗಿದೆ.

-----

ಕೋಟ್‌

ಬೇಸಿಗೆಯ ಭೀಕರತೆ ಇರುವುದರಿಂದ ಮತಕ್ಷೇತ್ರದ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆರೆಗಳಿಗೆ ನೀರು ಹರಿಸಲಾಗಿದೆ. ಕೆರೆಗಳಲ್ಲಿನ ನೀರು ಪೋಲಾಗದಂತೆ ಜಾಗೃತ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮೇ ತಿಂಗಳು ಪೂರ್ಣಗೊಂಡು ಮಳೆ ಬರುವವರೆಗೂ ಯಾವ ಗ್ರಾಮಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

- ಯಶವಂತರಾಯಗೌಡ ಪಾಟೀಲ, ಶಾಸಕರು,ಇಂಡಿ .