ಶಾಲೆ ನಿರ್ಮಿಸಿಕೊಟ್ಟ ದಾನಿಯನ್ನೇ ಮರೆತ ಶಿಕ್ಷಣ ಇಲಾಖೆ; ಸರ್ವಾಜನಿಕರ ಅಸಮಾಧಾನ

| Published : Feb 16 2024, 01:46 AM IST

ಶಾಲೆ ನಿರ್ಮಿಸಿಕೊಟ್ಟ ದಾನಿಯನ್ನೇ ಮರೆತ ಶಿಕ್ಷಣ ಇಲಾಖೆ; ಸರ್ವಾಜನಿಕರ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಹೆದ್ದಾರಿ ಪಾರ್ಶ್ವದಲ್ಲಿದ್ದ ಖಾಲಿ ಸ್ಥಳದಲ್ಲಿ ಯು.ವಿ. ಭಟ್ ಅವರು ಶಾಲೆಗೆ ಕಟ್ಟಡ ನಿರ್ಮಿಸಿದ್ದರಿಂದ, ಇದೀಗ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬರೋಬ್ಬರಿ ೧.೭೦ ಕೋಟಿ ರು. ಪರಿಹಾರಧನ ಲಭಿಸಲು ಕಾರಣ. ತೆರವಾದ ಕಟ್ಟಡದಲ್ಲಿದ್ದ ಯು.ವಿ. ಭಟ್ ಅವರ ತಂದೆಯ ಹೆಸರನ್ನೇ ಹೊಸ ಕಟ್ಟಡಕ್ಕೆ ಹಾಕಬೇಕೆನ್ನುವುದು ಸಾರ್ವಜನಿಕರ ಆಶಯವಾಗಿತ್ತು.

ಉಲುಕ್ ಉಪ್ಪಿನಂಗಡಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ತಾನು ಕಲಿತ ಶಾಲೆಯನ್ನು ದತ್ತು ಪಡೆದು ಶಾಲೆಗೆ ಲಕ್ಷಾಂತರ ರುಪಾಯಿ ವ್ಯಯಿಸಿದ ದಾನಿಯ ಬಗ್ಗೆ ಉಪಕಾರ ಸ್ಮರಣೆಯ ಕರ್ತವ್ಯವನ್ನು ಮರೆತ ಶಿಕ್ಷಣ ಇಲಾಖೆಯ ಕಾರ್ಯ ವೈಖರಿ ಸರ್ಕಾರಿ ಶಾಲಾ ಹಿರಿಯ ವಿದ್ಯಾರ್ಥಿಗಳನ್ನು ಕೆರಳಿಸಿದೆ. ದಾನಿಯ ನೆರವಿನಿಂದ ನಿರ್ಮಾಣವಾಗಿರುವ ಶಾಲೆಯ ನೂತನ ಕಟ್ಟಡಕ್ಕೆ ದಾನಿಗಳ ಅಪೇಕ್ಷಿತ ಹೆಸರು ಹಾಕದಿರುವುದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಅಸಮಧಾನ ವ್ಯಕ್ತವಾಗಿದೆ.

ಬ್ರಿಟಿಷರ ಆಡಳಿತದ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯಲ್ಲಿ ಪ್ರಸಕ್ತ ೧೮೭ ವರ್ಷಗಳ ಇತಿಹಾಸವನ್ನು ಕಂಡಿರುವ ಸರ್ಕಾರಿ ಮಾದರಿ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಉದ್ಯಮಿ ಯು.ವಿ. ಭಟ್ ತಾವು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯನ್ನು ದತ್ತು ಪಡೆದುಕೊಂಡು ಸುಮಾರು ೮೦ ಲಕ್ಷ ರು. ಹಣವನ್ನು ವಿನಿಯೋಗಿಸಿ ೨೦೧೦ರ ಸುಮಾರಿಗೆ ಹಲವು ಶಾಲಾ ಕೊಠಡಿ ಮತ್ತು ಶಾಲಾ ಸಭಾಂಗಣವೂ ಒಳಗೊಂಡ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದರು. ಈ ಕಟ್ಟಡವಿದ್ದ ಸ್ಥಳವು ರಾಷ್ಟ್ರೀಯ ಹೆದ್ದಾರಿ ೭೫ ರ ಅಗಲೀಕರಣದಿಂದಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಸಿಲುಕಿ ೧.೭೦ ಕೋಟಿ ರು. ಪರಿಹಾರ ಧನವು ಲಭಿಸಿತ್ತು. ಪರಿಹಾರ ಮೊತ್ತದಲ್ಲಿ ಸುಸಜ್ಜಿತ ಮೂರು ಅಂತಸ್ತಿನ ಶಾಲಾ ಕೊಠಡಿಗಳ ಸಂಕೀರ್ಣ ಕಟ್ಟಡವನ್ನು ನಿರ್ಮಿಸಲಾಯಿತು.

ಅಂದು ಹೆದ್ದಾರಿ ಪಾರ್ಶ್ವದಲ್ಲಿದ್ದ ಖಾಲಿ ಸ್ಥಳದಲ್ಲಿ ಯು.ವಿ. ಭಟ್ ಅವರು ಶಾಲೆಗೆ ಕಟ್ಟಡ ನಿರ್ಮಿಸಿದ್ದರಿಂದ, ಇದೀಗ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬರೋಬ್ಬರಿ ೧.೭೦ ಕೋಟಿ ರು. ಪರಿಹಾರಧನ ಲಭಿಸಲು ಕಾರಣ. ತೆರವಾದ ಕಟ್ಟಡದಲ್ಲಿದ್ದ ಯು.ವಿ. ಭಟ್ ಅವರ ತಂದೆಯ ಹೆಸರನ್ನೇ ಹೊಸ ಕಟ್ಟಡಕ್ಕೆ ಹಾಕಬೇಕೆನ್ನುವುದು ಸಾರ್ವಜನಿಕರ ಆಶಯವಾಗಿತ್ತು.

ಆದರೆ ಕಟ್ಟಡ ನಿರ್ಮಾಣವಾಗಿ, ಕಟ್ಟಡಕ್ಕೆ ಹೆಸರು ಬರೆದು, ಹೊಸ ಕಟ್ಟಡದಲ್ಲಿ ಶಾಲಾ ತರಗತಿಗಳು ಪ್ರಾರಂಭಗೊಂಡರೂ ದಾನಿಗಳ ಹೆಸರು ಬರೆಯಲು ಶಿಕ್ಷಣ ಇಲಾಖೆ ಇನ್ನೂ ಆಸಕ್ತಿ ತೋರದಿರುವುದು ಶಾಲೆಯ ಹಿರಿಯ ವಿದ್ಯಾರ್ಥಿಗಳಾದಿಯಾಗಿ ಎಲ್ಲರಲ್ಲೂ ಅಸಮಾಧಾನ ಮೂಡಿಸಿದೆ. ಈ ಹಿಂದಿನ ಕಟ್ಟಡದಲ್ಲಿ ‘ಸಾಹುಕಾರ ಮಾಧವ ವೈಕುಂಠ ಭಟ್ಟ ಸ್ಮಾರಕ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ’ ಎಂದು ದಾಖಲಿಸಲ್ಪಟ್ಟಿದ್ದು, ಅದೇ ಹೆಸರನ್ನು ಹಾಕಲು ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಇಲಾಖಾ ಆಯುಕ್ತರ ಅನುಮತಿ ಬೇಕಾಗಿದೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಈ ಹಿಂದೆ ಯಾರ ಕೊಡುಗೆಯಲ್ಲಿ ಯಾವುದೆಲ್ಲ ಕಟ್ಟಡಗಳು ನಿರ್ಮಾಣವಾಗಿವೆ ಎಂಬುದು ಹೊಸದಾಗಿ ಬಂದ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ಮೇಲಾಗಿ ಯಾರಾದರೂ ದಾನಿಗಳ ಕಾರಣದಿಂದ ಕಟ್ಟಡ ನಿರ್ಮಿಸಲ್ಪಟ್ಟು ಅವರ ಹೆಸರು ದಾಖಲಿಸಬೇಕಾಗಿದ್ದರೆ, ಶಾಲಾ ಎಸ್‌ಡಿಎಂಸಿ ವತಿಯಿಂದ ಬಿಇಒ ಕಚೇರಿಗೆ ಮನವಿ ಸಲ್ಲಿಸಬೇಕಾಗಿದೆ. ನಾವು ಜಿಲ್ಲಾ ಶಿಕ್ಷಣಾಧಿಕಾರಿಗೆ ಕಳುಹಿಸಿ ಅಲ್ಲಿಂದ ಇಲಾಖಾ ಆಯುಕ್ತರಿಗೆ ಮನವಿ ಸಲ್ಲಿಸಬೇಕು. ಆಯುಕ್ತರು ಮನವಿಯನ್ನು ಪರಿಶೀಲಿಸಿ ಒಪ್ಪಿಗೆ ನೀಡಿದರೆ ಮಾತ್ರ ಸರ್ಕಾರಿ ಶಾಲೆಗೆ ದಾನಿಗಳ ಹೆಸರನ್ನು ನೀಡಬಹುದಾಗಿದೆ ಎನ್ನುತ್ತಾರೆ.

ಸೂಚನೆ ನೀಡಿದ್ದೇನೆ: ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶಾಂತಿ ಪ್ರತಿಕ್ರಿಯಿಸಿ, ಹೆದ್ದಾರಿ ಅಗಲೀಕರಣದ ಕಾರಣಕ್ಕೆ ದಾನಿಗಳು ನೀಡಿದ ಕಟ್ಟಡ ತೆರವಿಗಾಗಿ ಲಭಿಸಿದ ಪರಿಹಾರ ಧನದಿಂದ ಹೊಸ ಕಟ್ಟಡ ನಿರ್ಮಾಣವಾಗಿದೆ. ದಾನಿಗಳು ನೀಡಿದ ಕಟ್ಟಡದಲ್ಲಿದ್ದ ಹೆಸರನ್ನೇ ಹೊಸಕಟ್ಟಡಕ್ಕೆ ಹಾಕಬೇಕೆಂದು ಸೂಚನೆ ನೀಡಿದ್ದೇನೆ. ಕಟ್ಟಡದ ಗುತ್ತಿಗೆದಾರರು ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಾಗಿ ದಾನಿಗಳ ಹೆಸರನ್ನು ದಾಖಲಿಸದೆ ನಾಮಫಲಕ ಬರೆದಿದ್ದಾರೆ. ಹಾಗೂ ದಾನಿಗಳ ಹೆಸರನ್ನು ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ. ದಾನಿಗಳ ಹೆಸರು ಕೈಬಿಟ್ಟಿರುವ ಬಗ್ಗೆ ನಮಗೂ ತುಂಬಾ ನೋವಿದೆ ಎಂದರು.

ತನ್ನ ತಂದೆಯವರ ಸ್ಮರಣಾರ್ಥ ೮೦ ಲಕ್ಷಕ್ಕೂ ಮಿಕ್ಕಿದ ಮೊತ್ತದಲ್ಲಿ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡವನ್ನು ಒದಗಿಸಿದ್ದ ಯು.ವಿ. ಭಟ್ ಆಶೋತ್ತರಗಳನ್ನು ಕಡೆಗಣಿಸುವುದು ಸರಿಯಲ್ಲ. ಬರೇ ಆಟದ ಮೈದಾನದಂತಿದ್ದ ಭೂಮಿಯಲ್ಲಿ ಅವರು ಅಂದು ಕಟ್ಟಡವನ್ನು ಕಟ್ಟಿಸಿಕೊಡದೇ ಇರುತ್ತಿದ್ದರೆ ಇಂದು ಕೋಟ್ಯಂತರ ರುಪಾಯಿ ಮೊತ್ತದ ಪರಿಹಾರ ಧನ ಲಭಿಸುತ್ತಿರಲಿಲ್ಲ. ಇಲಾಖೆಯ ಈ ನಿರ್ಲಕ್ಷ್ಯ ಸಲ್ಲದು

- ಝಕಾರಿಯಾ ಕೊಡಿಪ್ಪಾಡಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ