ಶ್ರೀಆಂಜನೇಯಸ್ವಾಮಿಯೊಂದಿಗೆ ಕೆರಗೋಡು ಗ್ರಾಮಸ್ಥರ ಭಾವನಾತ್ಮಕ ಸಂಬಂಧ

| Published : Feb 05 2024, 01:49 AM IST

ಶ್ರೀಆಂಜನೇಯಸ್ವಾಮಿಯೊಂದಿಗೆ ಕೆರಗೋಡು ಗ್ರಾಮಸ್ಥರ ಭಾವನಾತ್ಮಕ ಸಂಬಂಧ
Share this Article
  • FB
  • TW
  • Linkdin
  • Email

ಸಾರಾಂಶ

ಕೆರಗೋಡು ಗ್ರಾಮಕ್ಕೆ ಪ್ರವೇಶ ಪಡೆಯುವ ಮೊದಲೇ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯ ಸಿಗುತ್ತದೆ. ಈ ದೇವಾಲಯದ ದೇವರ ಮೂರ್ತಿ ಶ್ರೀವೀರಾಂಜನೇಯ ನಿಂತಿರುವ ಭಂಗಿಯಲ್ಲಿ ವಿಗ್ರಹ ಕಾಣುತ್ತದೆ. ಇದರ ಬಾಲದಲ್ಲಿ ಗಂಟೆಯಿರುವ ಲಾಂಛನವಿದ್ದು, ಇದು ವ್ಯಾಸರಾಜರ ಪ್ರತಿಷ್ಠಾಪನೆ ಎಂದು ಹೇಳಲಾಗಿದೆ. ಈ ದೇವಾಲಯದ ಕಂಬದ ಮೇಲೂ ಮಹಿಳಾ ಲಾಂಛನವನ್ನು ಗಮನಿಸಿದರೆ ಇದು ಸಹ ಕ್ರಿ.ಶ.೧೬೧೯ರಲ್ಲಿ ಬೆಣ್ಣೆಹೊನ್ನಮ್ಮ ಆಳ್ವಿಕೆಯಲ್ಲಿ ನಿರ್ಮಿಸಿರುವ ಉಲ್ಲೇಖವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಗ್ರಾಮದ ಜನರೊಂದಿಗೆ ಶ್ರೀಆಂಜನೇಯಸ್ವಾಮಿ ದೇವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಶ್ರೀ ಆಂಜನೇಯ ಸ್ವಾಮಿಯನ್ನು ಕುಲದೇವರೆಂದೇ ನಂಬಿದ್ದಾರೆ. ಇದಕ್ಕೆ ಪೂರಕವಾಗಿ ೧೯೮೦ರ ಅವಧಿಯಲ್ಲಿ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ಗ್ರಾಮದ ಕಟ್ಟೆಮನೆ ಮಹಾನಾಡು ಯಜಮಾನರ ಸಮ್ಮುಖದಲ್ಲಿ ಅಕ್ಕಪಕ್ಕದ ೧೨ ಗ್ರಾಮಸ್ಥರು ಮೊಟ್ಟ ಮೊದಲ ಬಾರಿಗೆ ಶಾಸ್ತ್ರೋಕ್ತವಾಗಿ ಅಡಿಕೆ ಮರ ನೆಟ್ಟು ಅದರ ಮೇಲೆ ಹನುಮಧ್ವಜವನ್ನು ಹಾರಿಸುತ್ತಾರೆ.

ಗ್ರಾಮಕ್ಕೆ ಪ್ರವೇಶ ಪಡೆಯುವ ಮೊದಲೇ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯ ಸಿಗುತ್ತದೆ. ಈ ದೇವಾಲಯದ ದೇವರ ಮೂರ್ತಿ ಶ್ರೀವೀರಾಂಜನೇಯ ನಿಂತಿರುವ ಭಂಗಿಯಲ್ಲಿ ವಿಗ್ರಹ ಕಾಣುತ್ತದೆ. ಇದರ ಬಾಲದಲ್ಲಿ ಗಂಟೆಯಿರುವ ಲಾಂಛನವಿದ್ದು, ಇದು ವ್ಯಾಸರಾಜರ ಪ್ರತಿಷ್ಠಾಪನೆ ಎಂದು ಹೇಳಲಾಗಿದೆ. ಈ ದೇವಾಲಯದ ಕಂಬದ ಮೇಲೂ ಮಹಿಳಾ ಲಾಂಛನವನ್ನು ಗಮನಿಸಿದರೆ ಇದು ಸಹ ಕ್ರಿ.ಶ.೧೬೧೯ರಲ್ಲಿ ಬೆಣ್ಣೆಹೊನ್ನಮ್ಮ ಆಳ್ವಿಕೆಯಲ್ಲಿ ನಿರ್ಮಿಸಿರುವ ಉಲ್ಲೇಖವಿದೆ.

ತಾಲೂಕಿನ ಕೆರಗೋಡು, ತಾಳೆಮೇಳೆದೊಡ್ಡಿ, ಅಂಕಣದೊಡ್ಡಿ, ಕಲ್ಮಂಟಿದೊಡ್ಡಿ, ಪಂಚೇಗೌಡನದೊಡ್ಡಿ, ಸಿದ್ದೇಗೌಡನದೊಡ್ಡಿ, ಕೋಡಿದೊಡ್ಡಿ, ಮೋಳೆಕೊಪ್ಪಲು, ಮರಿಲಿಂಗನದೊಡ್ಡಿ, ಹೊಸೂರುಮುದ್ದನದೊಡ್ಡಿ, ಮಾರಗೌಡನಹಳ್ಳಿ, ಹೊನ್ನನಾಯಕನ ಹಳ್ಳಿ, ಚಿಕ್ಕಬಾಣಸವಾಡಿ, ದೊಡ್ಡಿಬಾಣಸವಾಡಿ, ಹುಲಿವಾನ, ಗೌಡಗೆರೆ, ಕೋಡಿಹಳ್ಳಿ, ಹಂಚಹಳ್ಳಿ, ಕೆಬ್ಬಳ್ಳಿ, ದ್ಯಾಪಸಂದ್ರ, ಗಂಟಗೌಡನಹಳ್ಳಿ, ಮಾಯಪ್ಪನಹಳ್ಳಿ, ಚಿಕ್ಕಬಳ್ಳಿ, ಆನಸೋಸಲು, ಹಲ್ಲೇಗೆರೆ ಸೇರಿದಂತೆ ವಿವಿಧ ಗ್ರಾಮಗಳಿಂದ ಕೋಟೆ ಶ್ರೀ ಆಂಜನೇಯ ಸ್ವಾಮಿ ಭಕ್ತರು ಇದ್ದಾರೆ.

ಅಡಿಕೆಮರದ ಧ್ವಜಸ್ತಂಭ ಶಿಥಿಲಗೊಂಡ ನಂತರ ಒಂದು ಕಬ್ಬಿಣದ ೨೫ ಅಡಿಗೂ ಹೆಚ್ಚು ಇರುವ ಕಂಬ ನಿರ್ಮಿಸಿ ಹನುಮಧ್ವಜ ಹಾರಿಸುತ್ತಾರೆ. ಇದರ ಜೊತೆಯಲ್ಲೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ನೀಡುತ್ತಾ ಬಂದಿದ್ದಾರೆ.

ಈ ಕಂಬವೂ ಕೂಡ ಶಿಥಿಲಗೊಳ್ಳುತ್ತದೆ. ತದನಂತರ ಮೊದಲು ಅಡಿಕೆಮರ ಧ್ವಜಸ್ತಂಭ ಇದ್ದ ಕಡೆಯೇ ನೂತನ ಧ್ವಜಸ್ತಂಭ ನಿರ್ಮಿಸಲಾಗಿದೆ. ಇದರೊಂದಿಗೆ ಹುಟ್ಟಿಕೊಂಡ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಹಾಲಿ ಇರುವ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬ, ನಾಡಹಬ್ಬದಂದು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಹಾರಾಟಕ್ಕೆ ನಮ್ಮ ಸಹಮತವಿದೆ. ಉಳಿದ ದಿನಗಳಲ್ಲಿ ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಡಬೇಕು. ಇದು ಒಬ್ಬರ ಭಾವನೆಯಲ್ಲ. ಇಡೀ ಊರಿನವರೆಲ್ಲರ ಒಮ್ಮತದ ಭಾವನೆಯಾಗಿದೆ. ಅದಕ್ಕೆ ವಾರ್ಷಿಕ ಕಿಮ್ಮತ್ತನ್ನು ನೀಡಲು ಸಿದ್ಧರಿದ್ದೇವೆ.

- ರಾಜೇಶ್, ಗ್ರಾಪಂ ಸದಸ್ಯ ಕೆರಗೋಡು

೩೦ ವರ್ಷದಿಂದಲೂ ಈ ಧ್ವಜಸ್ತಂಭ ಇದೆ. ರಾಷ್ಟ್ರಧ್ವಜ ಹಾಗೂ ಕನ್ನಡರಾಜ್ಯೋತ್ಸವ ಜೊತೆಗೆ ಹನುಮಧ್ವಜ ಹಾರಾಡುತ್ತಿತ್ತು, ಪ್ರತಿ ಶನಿವಾರ ಆಂಜನೇಯ ದೇವಾಲಯದಲ್ಲಿ ಭಜನೆ ನಡೆಯುತ್ತಿತ್ತು, ವಿಷ್ಣು ಸಹಸ್ರನಾಮ ಪಾರಾಯಣ, ಯಥಾಪ್ರಕಾರ ಗ್ರಾಮದಲ್ಲಿ ಶಾಂತಿ ಲೆಸುವಂತೆ ಅಧಿಕಾರಿಗಳು ಮಾಡಲಿ.

-ಎಂ.ಪಿ.ಅನ್ನಪೂರ್ಣ, ಸ್ವಯಂಸೇವಕರು, ಕೆರಗೋಡು.

ಹನುಮಧ್ವಜ ಹಾರಿಸಿ ಇಳಿಸಿದ್ದು ನೋವುಂಟಾಗಿದೆ. ಹೈಟೆಕ್ ಬಸ್ ನಿಲ್ದಾಣ ಮಾಡುತ್ತೇವೆ ಎಂದು ಹೇಳುತ್ತಾರೆ. ಗ್ರಾಮದಲ್ಲಿ ವೈದ್ಯರ ಕೊರತೆಯಿದೆ, ಚರಂಡಿ ವ್ಯವಸ್ಥೆ ಸೇರಿದಂತೆ ರಸ್ತೆ ಸರಿಯಿಲ್ಲ, ಇಂತಹ ಅಭಿವೃದ್ಧಿ ಕೆಲಸದ ಕಡೆ ಗಮನಹರಿಸದೇ ಶ್ರೀರಾಮ ಮತ್ತು ಹನುಮ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ಇಂತಹ ಅಶಾಂತಿ ವಾತಾವರಣವನ್ನು ಗ್ರಾಮದಲ್ಲಿ ಉಂಟು ಮಾಡುವುದು ಶಾಸಕರಿಗೆ ಶೋಭೆ ತರುವುದಿಲ್ಲ.

-ಕೆ.ಆರ್.ಲಕ್ಷ್ಮೀ, ಗೃಹಿಣಿ, ಕೆರಗೋಡು.

ಊರಿನವರ ಭಾವನೆಗಳಿಗೆ ಬೆಲೆ ಕೊಡಿ. ನಾವೆಲ್ಲರೂ ಒಟ್ಟಾಗಿದ್ದೇವೆ. ಗ್ರಾಮದಲ್ಲಿರುವ ಶಾಂತಿಯ ವಾತಾವರಣವನ್ನು ಕದಡಬೇಡಿ. ಪ್ರಚೋದನೆಗೆ ಒಳಗಾಗುವಷ್ಟು ಮೂರ್ಖರು ನಾವಲ್ಲ. ನಾವು ಜಿಲ್ಲಾಡಳಿತಕ್ಕೂ ಮನವಿ ಮಾಡುವುದಿಷ್ಟೇ. ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ಮಾಡಿಕೊಡಿ.

- ಕೆ.ಎಲ್.ಕೃಷ್ಣ, ಮಾಜಿ ಅಧ್ಯಕ್ಷರು, ಕೆರಗೋಡು ಗ್ರಾಪಂ

ಗ್ರಾಮ ಸಂಪೂರ್ಣವಾಗಿ ಶಾಂತಿಯಿಂದಿತ್ತು. ಹೊರಗಿನವರು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅದರಿಂದ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಾನೂನಾತ್ಮಕವಾಗಿಯೇ ಸ್ಥಳವನ್ನು ನಮ್ಮ ಸುಪರ್ದಿಗೆ ಬಿಟ್ಟುಕೊಡಲಿ. ಆ ಜಾಗವನ್ನು ಖರೀದಿಸುವುದಕ್ಕೂ ನಾವು ಸಿದ್ದರಿದ್ದೇವೆ. ಹನುಮಧ್ವಜವೇ ಅಲ್ಲಿ ಹಾರಾಡಬೇಕು.

- ವಸಂತ್, ಸ್ಥಳೀಯರು, ಕೆರಗೋಡು