ಶಾಲೆಯ ಸ್ಥಾಪನೆ ದೇವಸ್ಥಾನದ ಸ್ಥಾಪನೆಯಷ್ಟೇ ಶ್ರೇಷ್ಠ

| Published : Apr 12 2025, 12:48 AM IST

ಸಾರಾಂಶ

ತೀರ್ಥಹಳ್ಳಿ: ಜ್ಞಾನದ ಹಣತೆಯನ್ನು ಬೆಳಗುವ ಶಾಲೆಯ ಸ್ಥಾಪನೆ ದೇವಸ್ಥಾನದ ಸ್ಥಾಪನೆಯಷ್ಟೇ ಶ್ರೇಷ್ಠವಾದುದು. ಸ್ವಾತಂತ್ರ್ಯ ಪೂರ್ವದ ಎರಡು ದಶಕಗಳಿಗೂ ಮುಂಚಿತವಾಗಿ ಆರಂಭಗೊಂಡಿರುವ ಕುಡುಮಲ್ಲಿಗೆ ಶಾಲೆಯ ಸ್ಥಾಪಕರ ಕಾಳಜಿ ಸ್ಮರಣೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಜ್ಞಾನದ ಹಣತೆಯನ್ನು ಬೆಳಗುವ ಶಾಲೆಯ ಸ್ಥಾಪನೆ ದೇವಸ್ಥಾನದ ಸ್ಥಾಪನೆಯಷ್ಟೇ ಶ್ರೇಷ್ಠವಾದುದು. ಸ್ವಾತಂತ್ರ್ಯ ಪೂರ್ವದ ಎರಡು ದಶಕಗಳಿಗೂ ಮುಂಚಿತವಾಗಿ ಆರಂಭಗೊಂಡಿರುವ ಕುಡುಮಲ್ಲಿಗೆ ಶಾಲೆಯ ಸ್ಥಾಪಕರ ಕಾಳಜಿ ಸ್ಮರಣೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಕುಡುಮಲ್ಲಿಗೆಯಲ್ಲಿ ಶುಕ್ರವಾರ ನಡೆದ ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ಕಲೆ, ವಿಜ್ಞಾನ, ನಾಣ್ಯ ಸಂಗ್ರಹ ಮುಂತಾದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಊರಿನ ಹಬ್ಬದಂತೆ ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುತ್ತಿರುವುದು ಮಾದರಿಯಾಗಿದೆ. ನನ್ನ ಪತ್ನಿ ಕೂಡಾ ಇದೇ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಶಾಲೆಯ ಬಗ್ಗೆ ವಿಶೇಷ ಅಭಿಮಾನವಿದೆ ಎಂದರು.ಉನ್ನತ ಶಿಕ್ಷಣದ ಬಗ್ಗೆ ಇರುವ ಗೌರವ ಪ್ರಾಥಮಿಕ ಶಿಕ್ಷಣಕ್ಕಿಲ್ಲಾ. ಪ್ರಾಥಮಿಕ ಶಿಕ್ಷಣವೇ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಮಕ್ಕಳ ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಕನಸನ್ನು ಭಿತ್ತುವ ಪ್ರಾಥಮಿಕ ತರಗತಿಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಗ್ರಾಮೀಣ ಪ್ರದೇಶವಾದ ಕುಡುಮಲ್ಲಿಗೆಯಲ್ಲಿ ನೂರು ವರ್ಷದ ಹಿಂದೆ ಅಕ್ಷರ ಕಲಿಕೆಯ ಬಗ್ಗೆ ಆಸಕ್ತಿಯಿಂದ ಕುಡುಮಲ್ಲಿಗೆಯಲ್ಲಿ ಶಾಲೆಯ ಸ್ಥಾಪನೆಗೆ ಕಾರಣರಾದವರು ಸ್ಮರಣೀಯರಾಗಿದ್ದಾರೆ ಎಂದರು.ಈ ಸಮಾರಂಭದ ನೆನಪಿನಲ್ಲಿ ಶಾಲೆಯನ್ನು ಸದೃಢಗೊಳಿಸುವ ಸಲುವಾಗಿ ದಾನಿಗಳ ನೆರವಿನಿಂದ 40 ಲಕ್ಷ ರು ಸಂಗ್ರಹ ಮಾಡಿರುವುದು ಶತಮಾನೋತ್ಸವವನ್ನು ಸ್ಮರಣೀಯಗೊಳಿಸಲಿದೆ. ಆದರೆ ಪ್ರಸ್ತುತ ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹ ಮತ್ತು ಸರ್ಕಾರದ ಅಸಡ್ಡೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಅನ್ನ, ಅಕ್ಷರ ನೀಡಬೇಕಾದ ಸರ್ಕಾರ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸದೇ ಕಟುಕರ ರೀತಿ ವರ್ತಿಸುತ್ತಿದೆ ಎಂದು ಟೀಕಿಸಿದರು.ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಕ ಮಾಡಲು ವಿಫಲವಾಗಿರುವ ಸರ್ಕಾರ ಅತಿಥಿ ಶಿಕ್ಷಕರಿಗೆ ವೇತನವನ್ನೂ ಬಿಡುಗಡೆ ಮಾಡಿಲ್ಲಾ. ರಾಜ್ಯದಲ್ಲಿ 250 ಉರ್ದು ಶಾಲೆಗಳ ಆರಂಭಕ್ಕೆ 500 ಕೋಟಿ ರುಗಳನ್ನು ಬಿಡುಗಡೆ ಮಾಡಿರುವ ಸರ್ಕಾರ ಉರ್ದು ಶಾಲೆಯ ಹಾಸ್ಟೆಲ್‌ಗಳಿಗೆ 400 ಕೋಟಿ ರು. ಹಣ ನೀಡಿದೆ. ಸರ್ಕಾರಿ ಶಾಲೆಗಳನ್ನು ವಂಚಿಸಿ ಉರ್ದು ಶಾಲೆಗೆ ಆದ್ಯತೆ ಕೊಡುವ ಅಗತ್ಯವಾದರೂ ಏನು ಎಂದು ಕಟುವಾಗಿ ಪ್ರಶ್ನಿಸಿದರು.ಜಾತ್ಯಾತೀತೆಯ ಆಧಾರದಲ್ಲಿ ಎಲ್ಲ ಮಕ್ಕಳೂ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವಂತೆ ಧರ್ಮದ ಹೆಸರಿನಲ್ಲಿ ಶಿಕ್ಷಣ ನೀಡುವ ಪದ್ಧತಿ ಅಕ್ಷಮ್ಯವಾಗಿದೆ. ಈ ಬೆಳವಣಿಗೆಯಿಂದ ಸಮಾಜದಲ್ಲಿ ಒಡಕು ಮೂಡುವುದಕ್ಕೂ ಕಾರಣವಾಗಲಿದೆ. ಈ ದೇಶ ಒಡೆದಿರುವುದೇ ಧರ್ಮದ ಆಧಾರದಲ್ಲಿ ಎಂಬುದನ್ನು ಮರೆಯಬಾರದು. ಕನ್ನಡ ಶಾಲೆಯನ್ನು ಮುಚ್ಚಿ ಉರ್ದು ಶಾಲೆಗೆ ಆದ್ಯತೆ ನೀಡುವ ನೀವು ಸಮಾಜವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತೀರಿ ಎಂದು ಸರ್ಕಾರವನ್ನು ತರಾಟೆಗೈದರು.ಸರ್ಕಾರದ ಹಸ್ತಕ್ಷೇಪವಿಲ್ಲದೇ ಸಾರ್ವಜನಿಕರ ನೆರವಿನಲ್ಲಿ ಈ ಶಾಲೆಯ ರಂಗಮಂದಿರ ನಿರ್ಮಾಣ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ. ಹೀಗಾಗಿ ಕೆರೆ ಶಾಲಾ ಕಟ್ಟಡದಂತಹ ನಿರ್ಮಾಣ ಕಾರ್ಯಗಳಿಗೆ ಸರ್ಕಾರ ಟೆಂಡರ್ ಕರೆಯಬಾರದು. ಈ ಪ್ರಕ್ರಿಯೆ ಕಾಮಗಾರಿಗಳಿಗೆ ತಗುಲುವ ವೆಚ್ಚಕ್ಕಿಂತ ಮುಖ್ಯವಾಗಿ ಇತರೆ ವಿಚಾರಗಳಿಗೆ ಹಣ ಹಂಚಿಕೆಗೆ ಕಾರಣವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಅಂಜೂರ ಕುಡುಮಲ್ಲಿಗೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷೆ ಮಮತಾ ಮೋಹನ್, ರಂಗಮಂದಿರದ ಪ್ರಮುಖ ದಾನಿ ಬಿ.ಕೆ.ಮಂಜಪ್ಪ, ಬಿಇಒ ವೈ.ಗಣೇಶ್, ಗ್ರಾಪಂ ಸದಸ್ಯರಾದ ಡಿ.ಸಂದೀಪ್, ವಿನಂತಿ ಶಿವಾನಂದ, ಕುಡುಮಲ್ಲಿಗೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮಾರುತೇಶ್, ಶಾಲೆಯ ಹಿರಿಯ ವಿದ್ಯಾರ್ಥಿ ಸುರೇಶ್ ಮತ್ತಿತರರಿದ್ದರು.