ದಿನೇ ದಿನೇ ಬೆಳೆಯುತ್ತಿದೆ ಚಿಕ್ಕ ತಿರುಪತಿಯ ಶ್ರೀವೆಂಕಟೇಶ್ವರ ದೇಗುಲದ ಖ್ಯಾತಿ

| Published : Jan 10 2025, 12:50 AM IST

ದಿನೇ ದಿನೇ ಬೆಳೆಯುತ್ತಿದೆ ಚಿಕ್ಕ ತಿರುಪತಿಯ ಶ್ರೀವೆಂಕಟೇಶ್ವರ ದೇಗುಲದ ಖ್ಯಾತಿ
Share this Article
  • FB
  • TW
  • Linkdin
  • Email

ಸಾರಾಂಶ

60 ವರ್ಷಗಳ ಹಿಂದೆ ಕುಗ್ರಾಮವಾಗಿದ್ದ ಕಾಳಮುದ್ದನದೊಡ್ಡಿಯ ಮಾರಿಗುಡಿ ಬಳಿ ಗ್ರಾಮಸ್ಥರು ವೆಂಕಟೇಶನ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಕೆ.ಎಂ.ದೊಡ್ಡಿ ಇಂದು ಭಾರತೀನಗರವಾಗಿ ದೊಡ್ಡದಾಗಿ ಬೆಳೆದಿದ್ದರೂ ಇಲ್ಲಿ ಪ್ರಮುಖ ಧಾರ್ಮಿಕ ಕೇಂದ್ರ ಇರಲಿಲ್ಲ.‌ ಇದು ಗ್ರಾಮದ ಮೂಲ ನಿವಾಸಿಗಳಲ್ಲಿ ಒಂದು ಕೊರಗು ಕಾಡುತ್ತಿತ್ತು.

ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಶ್ರೀವೆಂಕಟೇಶ್ವರ ದೇವಾಲಯ ಅಲ್ಪಾವಧಿಯಲ್ಲೇ ಚಿಕ್ಕತಿರುಪತಿ ಎಂಬ ಖ್ಯಾತಿ ಪಡೆದು ಸಾವಿರಾರು ಭಕ್ತರ ಆಕರ್ಷಣೆಗೆ ಒಳಗಾಗುವಂತೆ ಮಾಡಿದೆ.

60 ವರ್ಷಗಳ ಹಿಂದೆ ಕುಗ್ರಾಮವಾಗಿದ್ದ ಕಾಳಮುದ್ದನದೊಡ್ಡಿಯ ಮಾರಿಗುಡಿ ಬಳಿ ಗ್ರಾಮಸ್ಥರು ವೆಂಕಟೇಶನ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಕೆ.ಎಂ.ದೊಡ್ಡಿ ಇಂದು ಭಾರತೀನಗರವಾಗಿ ದೊಡ್ಡದಾಗಿ ಬೆಳೆದಿದ್ದರೂ ಇಲ್ಲಿ ಪ್ರಮುಖ ಧಾರ್ಮಿಕ ಕೇಂದ್ರ ಇರಲಿಲ್ಲ.‌ ಇದು ಗ್ರಾಮದ ಮೂಲ ನಿವಾಸಿಗಳಲ್ಲಿ ಒಂದು ಕೊರಗು ಕಾಡುತ್ತಿತ್ತು.

ಕಳೆದ ಆರೇಳು ವರ್ಷಗಳ ಹಿಂದೆ ತಿಮ್ಮಪ್ಪನ ಭಕ್ತರು, ತಾವಿರುವ ಜಾಗದಲ್ಲಿ ತಮ್ಮ ಮನೆದೇವರಿಗೆ ದೇಗುಲ ಒಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಸಮಿತಿ ರಚಿಸಿ ಒಕ್ಕೂರಲಿನ ಜನರ ಜೊತೆಗೆ ದಾನಿಗಳಾದ ಭಾರತಿನಗರದ ಶಿಲ್ಪಿ, ಕಾವೇರಿ ಪುತ್ರ ಜಿ.ಮಾದೇಗೌಡ, ಮೇಲುಕೋಟೆ ಶೆಲ್ವ ಪಿಳ್ಳೈ ಅಯ್ಯಂಗಾರ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವರ ಸಹಕಾರದಿಂದ 3 ಕೋಟಿ ರು.ವೆಚ್ಚದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಇಡಲಾಯಿತು.

ಎಲ್ಲರ ಪರಿಶ್ರಮದಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಶ್ರೀವೆಂಕಟೇಶ್ವರ ದೇವಾಲಯ ಕೂಡ ಲೋಕಾರ್ಪಣೆಗೊಂಡಿತು. ದೇಗುಲ ಲೋಕಾರ್ಪಣೆಗೊಂಡ ಕೆಲವೇ ವರ್ಷಗಳಲ್ಲೇ ಚಿಕ್ಕ ತಿರುಪತಿ ಎಂಬ ಖ್ಯಾತಿ ಪಡೆದುಕೊಂಡು ದಿನೇ ದಿನೇ ದೊಡ್ಡದಾಗಿ ಬೆಳೆಯುತ್ತಿದೆ.

ಪ್ರತಿ ವರ್ಷ ವೈಕುಂಠ ಏಕಾದಶಿಯಂದು ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೇ, ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿನಿಯೋಗದ ಜೊತೆಗೆ ಪ್ರತಿ ವಿಶೇಷ ದಿನಗಳಲ್ಲೂ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಸಲಾಗುತ್ತಿದೆ.

ಇಂದು ವಿಜೃಂಭಣೆಯ ವೈಕುಂಠ ಏಕಾದಶಿ:

ದೇವಾಲಯದಲ್ಲಿಂದು ವೈಕುಂಠ ಏಕಾದಶಿ ಅಂಗವಾಗಿ ಸಮಿತಿ ವತಿಯಿಂದ ವಿಶೇಷ ಪೂಜೆ , ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮೂಲದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಆಭರಣ ಹಾಗೂ ಹೂವಿನ ಅಲಂಕಾರ ಜರುಗಲಿದೆ. ಮುಂಜಾನೆ ವಿಶೇಷ ಪೂಜೆ ನಡೆಸಿದ ಬಳಿಕ 5.30ಕ್ಕೆ ವೈಕುಂಠ ದ್ವಾರ ತೆರೆಯಲಾಗುತ್ತಿದೆ.

ದೇವಾಲಯದ ಅರ್ಚಕರಾದ ಗೋಪಾಲ ಕೃಷ್ಣ ಭಟ್ಟರ್, ಅನಂತ ಕೃಷ್ಣ ಭಟ್ಟರ್, ಪುರೋಹಿತ ಯು.ವಿ.ಗಿರೀಶ್, ಅರ್ಚಕ ಬಿ.ಎಸ್. ಉದಯ್‌ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಕಂರ್ಯಗಳು ಜರುಗಲಿವೆ. ದೇವಾಲಯಕ್ಕೆ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಿಶೇಷವಾಗಿ ಪಂಚಕಜ್ಜಾಯ, ಹಾಲು ಮತ್ತು ಹಣ್ಣು ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ:

ವಿವಿಧ ಕಲಾವಿದರು, ಹಾಡುಗಾರರಿಂದ ವೈಕುಂಠ ಏಕಾದಶಿ ಅಂಗವಾಗಿ ವಾಧ್ಯಗೋಷ್ಠಿ, ಭಜನೆ, ಭಕ್ತಿಗೀತೆ, ಶ್ರೀನಿವಾಸ ಕಲ್ಯಾಣ ಹರಿಕಥೆ, ಹೆಬ್ಬೆಟ್ಟು ನಾಟಕ ಪ್ರದರ್ಶನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅದ್ಭುತವಾಗಿ ಮೂಡಿ ಬಂದ ದೇಗುಲ

ಶ್ರೀವೆಂಕಟೇಶ್ವರ ದೇವಾಲಯವು ಒಂದು ಸಾಮಾನ್ಯ ಕಟ್ಟೆಯಂತಿದ್ದ ಜಾಗದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದಿದೆ ಎಂದರೆ ಅದಕ್ಕೆ ಸ್ವಾಮಿ ಕೃಪೆಯೇ ಹೊರತು ಬೇರೇನೂ ಅಲ್ಲ. ಹಲವು ವರ್ಷಗಳಿಂದ ಸ್ವಾಮಿ ಭಕ್ತರು ಈ ಸ್ಥಳದಲ್ಲಿ ಪರ ಪೂಜೆ (ಅನ್ನ ಸಂತರ್ಪಣೆ) ಮಾಡುತ್ತಿದ್ದರು. ಆ ಜನರ ಭಕ್ತಿ ಮೆಚ್ಚಿ ಭಗವಂತ ಇಲ್ಲಿಗೆ ಬಂದು ನೆಲೆ ನಿಂತರು.

- ಡಾ.ಶೆಲ್ವ ಪಿಳ್ಳೈ ಅಯ್ಯಂಗಾರ್, ಆಗಮ ಪ್ರವೀಣ ಸ್ಥಾನಾಚಾರ್ಯರು, ಮೇಲುಕೋಟೆ

ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಮಾರಮ್ಮ ದೇಗುಲ ಹೊರತು ಪಡಿಸಿ ಯಾವುದೇ ದೇವಾಲಯ ಇರಲಿಲ್ಲ. ಇಲ್ಲಿ ವೆಂಕಟೇಶ್ವರಸ್ವಾಮಿ ಕುಲದವರು ಹೆಚ್ಚಾಗಿದ್ದರು. ಪ್ರತಿ ವರ್ಷ ದೇವರ ಸೇವೆ ಮಾಡುತ್ತಾ ಅನ್ನಸಂತರ್ಪಣೆ ಮಾಡುತ್ತಿದ್ದರು. ದೇವರ ಸಂಕಲ್ಪದಿಂದ ಸಮಾನ ಮನಸ್ಕರು ಸೇರಿ ದೇಗುಲ ನಿರ್ಮಾಣಕ್ಕೆ ತೀರ್ಮಾನಿಸಿ ದಾನಿಗಳು ಆರ್ಥಿಕ ನೆರವು ಪಡೆದು ಅದ್ಭುತವಾಗಿ ದೇಗುಲ ನಿರ್ಮಾಣ ಮಾಡಲಾಗಿದೆ.

-ವೆಂಕಟೇಶ್ , ಗ್ರಾಪಂ ಮಾಜಿ ಅಧ್ಯಕ್ಷರುಶ್ರೀವೆಂಕಟೇಶ್ವರ ದೇವಾಲಯ ಜನರ ಮನದಲ್ಲಿ ಚಿಕ್ಕತಿರುಪತಿ ಎಂದೆ ಬಿಂಬಿತವಾಗಿದೆ. ದಿನ ಕಳೆದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗಿ, ದೇವರ ಮಹಿಮೆಯೂ ಅಪಾರವಾಗಿದೆ. ಪ್ರತಿ ವರ್ಷ ವೈಕುಂಠ ಏಕಾದಶಿ ಅಂಗವಾಗಿ 25 ಸಾವಿರ ಜನರಿಗೆ ಕಜ್ಜಾಯ ವಿತರಣೆ ಮಾಡಲಾಗುತ್ತಿದೆ. ದೇವಾಲಯದ ರಾಜ್ಯದಲ್ಲೆ ಹೆಸರುವಾಸಿಯಾಗುವತ್ತ ಸಾಗುತ್ತಿದೆ.

- ದೇವರಹಳ್ಳಿ ವೆಂಕಟೇಶ್, ಸದಸ್ಯರು, ಶ್ರೀವೆಂಕಟೇಶ್ವರ ದೇವಾಲಯ ಸಮಿತಿ