ಪಕ್ಷದಿಂದ ಪಕ್ಷಕ್ಕೆ ಜಿಗಿದಾಟದ ಪ್ರಹಸನ ಶುರು

| Published : Mar 30 2024, 12:46 AM IST

ಪಕ್ಷದಿಂದ ಪಕ್ಷಕ್ಕೆ ಜಿಗಿದಾಟದ ಪ್ರಹಸನ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕುತೂಹಲಕ್ಕೆ ಕಾರಣವಾಗಿರುವುದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಇಲ್ಲೀಗ ಕಾರ್ಯಕರ್ತರ ಪಕ್ಷದಿಂದ ಪಕ್ಷಕ್ಕೆ ನೆಗೆ ಜಿಗಿದಾಟ ಸದ್ದು ಮಾಡುತ್ತಿದೆ.

ರಾಮನಗರ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕುತೂಹಲಕ್ಕೆ ಕಾರಣವಾಗಿರುವುದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಇಲ್ಲೀಗ ಕಾರ್ಯಕರ್ತರ ಪಕ್ಷದಿಂದ ಪಕ್ಷಕ್ಕೆ ನೆಗೆ ಜಿಗಿದಾಟ ಸದ್ದು ಮಾಡುತ್ತಿದೆ.

ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅಖಾಡಕ್ಕಿಳಿದಿರುವ ಕಾರಣ ರೇಷ್ಮೆ ನಾಡಿನಲ್ಲಿ ಲೋಕ ಕದನ ಕುತೂಹಲ ಕೆರಳಿಸಿದೆ. ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವವೂ ಜೋರಾಗಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿ ನಾಯಕರು ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಪರೇಷನ್ - ರಿವರ್ಸ್ ಆಪರೇಷನ್ ಗೆ ಇಳಿದಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗುಪಡೆಯುತ್ತಿದೆ. ಪ್ರಾರಂಭದಿಂದ ಒಂದು ಪಕ್ಷದಲ್ಲಿ ಗುರುತಿಸಿಕೊಂಡು ವಿವಿಧ ಜವಾಬ್ದಾರಿ ನಿಭಾಯಿಸಿದವರು ರಾತ್ರೋರಾತ್ರಿ ಎದುರಾಳಿ ಪಕ್ಷದ ನಾಯಕನಿಂದ ಪಕ್ಷದ ಬಾವುಟ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ದಿನಕ್ಕೊಂದು ಬಣ ಸೃಷ್ಟಿಯಾಗುತ್ತಿವೆ. ಗಲ್ಲಿಗೊಬ್ಬ ಮುಖಂಡ ಹುಟ್ಟಿಕೊಳ್ಳುತ್ತಿದ್ದಾನೆ. ಮುಖಂಡನ ಹಿಂದೆ ಹಿಂಬಾಲಕರು ಇಬ್ಬಾಗವಾಗುತ್ತಿದ್ದಾರೆ. ಇದರ ನಡುವೆ ಪಕ್ಷದಿಂದ ಪಕ್ಷಕ್ಕೆ ಜಿಗಿದಾಡುವ ಪ್ರಹಸನವೂ ಜೋರಾಗಿದೆ. ಕಾರ್ಯಕರ್ತರನ್ನು ಸಂಘಟಿಸಲು ಬೆವರು ಹರಿಸುತ್ತಿರುವ ಮುಖಂಡರು ಅವರನ್ನು ಪಕ್ಷದಲ್ಲೇ ಕಟ್ಟಿಹಾಕಿಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಅತ್ತ ಕಡೆ ಕಾರ್ಯಕರ್ತರು ವರಸೆ ಬದಲಿಸಿ ಮುಖಂಡರನ್ನೇ ತಬ್ಬಿಬ್ಬುಗೊಳಿಸುತ್ತಿದ್ದಾರೆ. ಏನೆಲ್ಲ ಸಾಹಸ ಮಾಡಿ ಕರೆ ತಂದು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಜೈಕೂಗಿಸಿ ಅಪ್ಪಿಮುದ್ದಾಡಿದ ಕಾರ್ಯಕರ್ತರು ಇದ್ದಕ್ಕಿದ್ದಂತೆ ವರಸೆ ಬದಲಿಸುತ್ತಿರುವುದು ಮುಖಂಡರನ್ನು ಬೆಸ್ತು ಬೀಳಿಸುತ್ತಿದೆ.

ಹೆಚ್ಚು ದುಡ್ಡು ಕೊಟ್ಟವರಿಗೆ ಜೈ :

ಪಕ್ಷ ನಿಷ್ಠರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಭಾಗಶಃ ಕಾರ್ಯಕರ್ತರು ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಕಾಯಕ ಮುಂದುವರಿಸಿದ್ದಾರೆ, ಅದರಲ್ಲೂ ಮೊದಲ ಬಾರಿಗೆ ರಾಜಕೀಯ ವಾಸನೆ ಗ್ರಹಿಸಿಕೊಂಡು ಬರುತ್ತಿರುವ ಯುವ ಸಮೂಹ ಯಾವ ಪಕ್ಷದ ಪರ ನಿಲ್ಲಬೇಕು ಎಂಬ ಗೊಂದಲದಲ್ಲಿದ್ದಾರೆ. ಯಾರು ಹೆಚ್ಚಿನ ದುಡ್ಡು ಕೊಡುತ್ತಾರೋ ಅವರಿಗೆ ಬೆಂಬಲ ನೀಡಬೇಕು ಎಂಬ ವಾದ ಒಂದೆಡೆಯಾದರೆ, ಆ ಪಕ್ಷ ಗೆದ್ದರೆ, ಆ ಅಭ್ಯರ್ಥಿ ಸಂಸದರಾದರೆ ವೈಯಕ್ತಿಕವಾಗಿ ನನಗೇನು ಲಾಭ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಇದರ ಜತೆಗೆ ಗೆಲ್ಲುವ ಅಭ್ಯರ್ಥಿ ಯಾರು? ಮಣ್ಣು ಮುಕ್ಕುವವರಾರು? ಎಂಬ ಲೆಕ್ಕಾಚಾರವೂ ಈ ಜಿಗಿದಾಟಕ್ಕೆ ಕಾರಣವಾಗುತ್ತಿದೆ.

ಪರಸ್ಪರ ಹದ್ದಿನ ಕಣ್ಣು :

ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್‌ ಮೈತ್ರಿಕೂಟ ಪಕ್ಷಗಳಲ್ಲಿ ಕಾರ್ಯಕರ್ತರನ್ನು ಹಿಡಿದಿಡುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಅನ್ಯ ಪಕ್ಷದವರು ಯಾರೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಹೈಜಾಕ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಆಯಾಯ ವ್ಯಾಪ್ತಿಯ ಮುಖಂಡರು ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ಪಕ್ಷದಿಂದ ಕಾರ್ಯಕರ್ತರು ಮತ್ತೊಂದು ಪಕ್ಷ ಸೇರ್ಪಡೆಯಾದರು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಚುರುಕಾಗುವ ಮಾತೃ ಪಕ್ಷದ ಮುಖಂಡರು ಹೇಗಾದರೂ ಮಾಡಿ ಅವರ ಮನವೊಲಿಸಿ ಮತ್ತೆ ಮಾತೃ ಪಕ್ಷಕ್ಕೆ ಕರೆತರುವ ಕಸರತ್ತು ಆರಂಭಿಸುತ್ತಾರೆ. ಇದರಿಂದ ಬೆಳಗ್ಗೆ ಮತ್ತೊಂದು ಪಕ್ಷಕ್ಕೆ ಹಾರಿದ್ದವರು ಮಧ್ಯಾಹ್ನದ ಹೊತ್ತಿಗಾಗಲೇ ಮಾತೃ ಪಕ್ಷದತ್ತ ಹೆಜ್ಜೆ ಹಾಕಿರುತ್ತಾರೆ.

ಚುನಾವಣಾ ಕಣದಲ್ಲಿನ ಆಕಾಂಕ್ಷಿಗಳು ಹಾಗೂ ಪಕ್ಷದ ನಾಯಕರು ಇಂತಹ ಮುಖಂಡರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ನಾನಾ ತಂತ್ರ ರೂಪಿಸುತ್ತಿದ್ದಾರೆ. ಪಕ್ಷದಲ್ಲಿ ಹುದ್ದೆಗಳನ್ನು ನೀಡುವುದು, ಚುನಾವಣೆಯಲ್ಲಿ ಗೆದ್ದರೆ ಇಂತಿಂಥ ಸ್ಥಾನ ನೀಡುವ ಆಮಿಷ ಜತೆಗೆ ಕಾರ್ಯಕರ್ತರನ್ನು ನಿಭಾಯಿಸಲು ಇಂತಿಷ್ಟು ದುಡ್ಡು ಹೀಗೆ ನಾನಾ ಬಗೆಯಲ್ಲಿ ಮುಖಂಡರನ್ನು ಗಾಳಕ್ಕೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಮುಖಂಡರನ್ನು ಬಲೆಗೆ ಕೆಡವಿದರೆ ನೂರಾರು ಕಾರ್ಯಕರ್ತರನ್ನು ಬಳಸಿಕೊಳ್ಳಬಹುದು ಎಂಬುದು ರಾಜಕೀಯ ನಾಯಕರ ಲೆಕ್ಕಾಚಾರವಾಗಿದೆ.

ಒಂದೇ ದಿನದಲ್ಲಿ ಮಾತೃಪಕ್ಷಕ್ಕೆ ಮರು ಸೇರ್ಪಡೆ :

ಜೆಡಿಎಸ್ ನ ಹಾರೋಹಳ್ಳಿ ಮುಖಂಡ ಮಲ್ಲಪ್ಪ ಸಂಸದ ಡಿ.ಕೆ.ಸುರೇಶ್ ಅವರಿಂದ ಶಾಲು ಹಾಕಿಸಿಕೊಂಡು ಕಾಂಗ್ರೆಸ್ ಸೇರಿದ್ದರು. ಮರು ದಿನವೇ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಂದಲೂ ಶಾಲು ಹಾಕಿಸಿಕೊಂಡು ಜೆಡಿಎಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡರು. ಇಂತಹದೊಂದು ರಾಜಕೀಯ ಪ್ರಹಸನ ಹಾರೋಹಳ್ಳಿಯಲ್ಲಿ ನಡೆದಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಪಕ್ಷಗಳಲ್ಲಿ ಕಾರ್ಯಕರ್ತರ ಆಗಮನ– ನಿರ್ಗಮನ ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಹೊಸಬರ ಆಗಮನವಾಗುತ್ತಿದೆ.ಬಾಕ್ಸ್ .........

''ಕೈ''ನಿಂದ ಮತಗಳ ವ್ಯತ್ಯಾಸ ಸರಿದೂಗಿಸುವ ತಂತ್ರ :

ಮಾಜಿ ಶಾಸಕರ ಆದಿಯಾಗಿ ಸ್ಥಳೀಯವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಎರಡು ಪಕ್ಷಗಳ ಮಾಜಿಗಳು ತಮ್ಮ ಬೆಂಬಲಿಗರೊಂದಿಗೆ ''''''''ಕೈ'''''''' ಹಿಡಿಯುತ್ತಿದ್ದಾರೆ.

ಚನ್ನಪಟ್ಟಣದ ಜೆಡಿಎಸ್‌ನ ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರಿಂದ ಪಕ್ಷಾಂತರ ಪರ್ವ ಶುರುವಾಯಿತು. ಬಿಜೆಪಿ ಮುಖಂಡ ಹಾಗೂ ಚನ್ನಪಟ್ಟಣ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲುವೇಗೌಡ ಬೆಂಗಳೂರಿನಲ್ಲಿ ಇತ್ತೀಚೆಗೆ, ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು.

ಮಾಗಡಿ, ರಾಮನಗರ ಹಾಗೂ ಹಾರೋಹಳ್ಳಿಯಲ್ಲೂ ಹೋಬಳಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ನತ್ತ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ಸ್ವತಃ ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದ್ದಾರೆ.

ಬಿಜೆಪಿ ಪ್ರಾಬಲ್ಯವಿರುವ ರಾಜಧಾನಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್‌ ಕ್ಷೇತ್ರದಲ್ಲಾಗುವ ಮತಗಳ ವ್ಯತ್ಯಾಸವನ್ನು ಸರಿದೂಗಿಸುವ ತಂತ್ರ ಹೆಣೆದು, ಆ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.(ಫೋಟೋ - 6.ಕಾಂಗ್ರೆಸ್ ಚಿಹ್ನೆ ಬಳಸಿ)ಬಾಕ್ಸ್ ..............

ದಳ - ಕಮಲ ಮೈತ್ರಿ ಬೆಸುಗೆಗೆ ಸಭೆ:

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಮೈತ್ರಿಕೂಟ ಸೇರಿದ ತರುವಾಯ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರ ಅಳಿಯ ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಚನಾವಣಾ ಕಣ ಪ್ರವೇಶಿಸಿದ್ದಾರೆ. ಮೇಲ್ಮಟ್ಟದಲ್ಲಿ ಕಂಡು ಬಂದ ಹೊಂದಾಣಿಕೆ ಸ್ಥಳೀಯವಾಗಿ ಉಭಯ ಪಕ್ಷಗಳ ಮುಖಂಡರು - ಕಾರ್ಯಕರ್ತರಲ್ಲಿ ಕಂಡು ಬರಲಿಲ್ಲ.

ಎರಡೂ ಪಕ್ಷಗಳ ಮುಖಂಡರು ಪ್ರತ್ಯೇಕ ಸಭೆಗಳನ್ನು ಮಾಡಿಕೊಂಡು, ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರು. ಒಟ್ಟಿಗೆ ಕಾಣಿಸಿಕೊಂಡು ಪ್ರಚಾರ ಮಾಡುತ್ತಿರಲಿಲ್ಲ. ಆದರೀಗ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತಂದು ಬೆಸೆಯಲಾಗುತ್ತಿದೆ. ತಮ್ಮ ಕಾರ್ಯಕರ್ತರ ಪಕ್ಷಾಂತರ ಪರ್ವಕ್ಕೆ ತಡೆಯೊಡ್ಡಿ, ಎದುರಾಳಿ ವಿರುದ್ಧ ಹೋರಾಡಲು ಹೋಬಳಿವಾರು ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಗಳ ಮೂಲಕ ಹುರುಪು ತುಂಬಲು ಎರಡೂ ಪಕ್ಷಗಳ ನಾಯಕರು ಮುಂದಾಗಿದ್ದಾರೆ. ಅಲ್ಲದೆ, ಕೆಲ ನಾಯಕರು ಕಾಂಗ್ರೆಸ್ ಸೇರಿರುವ ತಮ್ಮ ಕಾರ್ಯಕರ್ತರನ್ನು ಮರಳಿ ಮಾತೃ ಪಕ್ಷಕ್ಕೆ ಕರೆತರಲು ರಿವರ್ಸ್ ಆಪರೇಷನ್ ಗೆ ಇಳಿದಿದ್ದಾರೆ.

(ಫೋಟೋ - 7,8.ಬಿಜೆಪಿ - ಜೆಡಿಎಸ್ ಚಿಹ್ನೆ ಬಳಸಿ)29ಕೆಆರ್ ಎಂಎನ್‌ 4,5.ಜೆಪಿಜಿ

4.ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್

5.ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್