ಸಾರಾಂಶ
ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ಸಮೀಪ ಎತ್ತಿನಹೊಳೆಯ ಯೋಜನೆಯ ೫ ಸಾವಿರ ಎಕರೆ ಜಾಗದಲ್ಲಿ ಬಫರ್ ಡ್ಯಾಂ ನಿರ್ಮಾಣ ಮಾಡಬಾರದು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ಸಮೀಪ ಎತ್ತಿನಹೊಳೆಯ ಯೋಜನೆಯ ೫ ಸಾವಿರ ಎಕರೆ ಜಾಗದಲ್ಲಿ ಬಫರ್ ಡ್ಯಾಂ ನಿರ್ಮಾಣ ಮಾಡಬಾರದು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ನ.೨೬ ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಹಿನ್ನೆಲೆಯಲ್ಲಿ ಭೂಚನಹಳ್ಳಿ ಗ್ರಾಮಕ್ಕೆ ಶುಕ್ರವಾರ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಜಮಾಯಿಸಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಬಫರ್ ಡ್ಯಾಂ ಮಾಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ ಗ್ರಾಮಸ್ಥರು, ಆಗ ಮುಖಂಡ ಬೂಚನಹಳ್ಳಿ ವೆಂಕಟೇಶ್ ಮಾತನಾಡಿ ಮೊದಲು ಬಫರ್ ಡ್ಯಾಂ ದೇವರಾಯನದುರ್ಗದ ದುರ್ಗದಹಳ್ಳಿ ಬಳಿಯಲ್ಲಿ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿತ್ತು. ಆದರೆ ಹಿಂದಿನ ಲೋಕೋಪಯೋಗಿ ಮತ್ತು ಎತ್ತಿನಹೊಳೆ ಇಲಾಖೆಗಳ ಮುಖ್ಯ ಇಂಜಿನಿಯರ್ ಆಗಿದ್ದ ಜಯಪ್ರಕಾಶ್ ಆ ಭಾಗದಲ್ಲಿದ್ದ ಅವರ ಜಮೀನು ತೋಟ ಉಳಿಸಿಕೊಳ್ಳಲು ಡ್ಯಾಂನ್ನು ಇಲ್ಲಿಗೆ ಸ್ಥಳಾಂತರಿಸಿ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.ರೈತ ಶಿವರಾಜ್ ಮಾತನಾಡಿ, ಈ ಡ್ಯಾಂ ನಿರ್ಮಾಣದಿಂದ ಕೊಳಾಲ ಹೊಬಳಿಯ ಲಕ್ಕಮುತ್ತನಹಳ್ಳಿ, ವೀರಸಾಗರ, ಬೆಲ್ಲದಹಳ್ಳಿ, ಗೆಜ್ಜಮೇನಹಳ್ಳಿ, ಸುಂಕದಹಳ್ಳಿ ಗ್ರಾಮಗಳು ಸಂಪೂರ್ಣ ಮುಳುಗಡೆಯಾದರೆ ಬೈರಗೋಂಡ್ಲು, ಬೂಚನಹಳ್ಳಿ, ಕಾಲುವೇದ ಹಳ್ಳಿ, ಚಿನ್ನಹಳ್ಳಿ, ಕಾಟೇನಹಳ್ಳಿ, ವಡೇರಹಳ್ಳಿ, ಪುರದಹಳ್ಳಿ, ಕೋಳಾಲ ಗ್ರಾಮಗಳು ಭಾಗಷಃ ಮುಳುಗುತ್ತವೆ ದಯಾಮಾಡಿ ನಮ್ಮನ್ನು ಉಳಿಸಿ ಎಂದು ಮನವಿ ಮಾಡಿದರು.ರೈತ ಮಹಿಳೆ ಅರಸಮ್ಮ ಮಾತನಾಡಿ ನಮಗೆ ಸರ್ಕಾರ ನೀಡುವ ಪರಿಹಾರ ಬೇಡ ನಮ್ಮ ಜಮೀನು ಊರು ನಮಗೆ ಬೇಕು. ಹಲವು ರೈತರು ಲಕ್ಷಾಂತರ ಸಾಲ ಮಾಡಿ ಬೋರ್ ಕೊರೆಸಿ ಅಡಿಕೆ ಕಟ್ಟಿದ್ದಾರೆ ಅವರು ಏನು ಮಾಡಬೇಕು? ನಮ್ಮನ್ನು ಕಾಪಾಡಬೇಕು ಎಂದರು. ಆದರೆ ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಯಾರಿಗೂ ಉತ್ತರ ನೀಡದೆ ಹೊರಟರು.26ಕ್ಕೆ ಡಿಸಿಎಂ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ನ.೨೬ ರಂದು ಭೂಚನಹಳ್ಳಿ ಗ್ರಾಮಕ್ಕೆ ಏತ್ತಿನಹೊಳೆ ಡ್ಯಾಂ ಗೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಉಪಮುಖ್ಯಮಂತ್ರಿಗಳ ಭೇಟಿ ಮಾಡಿ ರೈತರೊಂದಿಗೆ ಎತ್ತಿನಹೊಳೆ ಹಾಗೂ ಡ್ಯಾಂ ಗೆ ಸಂಬಂಧಿಸಿದಂತೆ ರೈತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಇದೆ. ಬಾಕ್ಸ್ ಬಳಸಿ
ರೈತರು ನೀವು ಏನೇ ಮಾಡಿದರು ಬಫರ್ ಡ್ಯಾಂ ನಿರ್ಮಾಣಕ್ಕೆ ನಮ್ಮ ಜಮೀನು ಆಸ್ತಿಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಕೂಗಾಡಿದರು. ಅಲ್ಲೆ ಇದ್ದ ರೈತನೊಬ್ಬ ಅಧಿಕಾರಿಗಳ ಕಾಲಿಗೆ ಬಿದ್ದು ಇಲ್ಲಿ ಡ್ಯಾಂ ಕಟ್ಟಿ ನನ್ನ ಜಮೀನು ಕಿತ್ತುಕೊಳ್ಳಬೇಡಿ ಗೋಗೆರೆದ. ಆಗ ಎಂ.ಡಿ ಸಣ್ಣಚಿತ್ತಯ್ಯ ರೈತರಿಗೆ ನಾವು ಕಾರ್ಯಕ್ರಮಕ್ಕೆ ಜಾಗ ನೋಡುತ್ತಿದ್ದೇವೆ ಅಷ್ಟೇ ಎಂದು ಹೇಳಿ ಹೊರಟರು.