ಫಲಕ್ಕೆ ಬಂದ ಅಡಕೆ ತೋಟ ನಾಶ ಪಡಿಸಿದ ರೈತ

| Published : May 14 2024, 01:00 AM IST

ಸಾರಾಂಶ

ಮಾಯಕೊಂಡ ಹೋಬಳಿ ಹೊನ್ನಾಯಕನಹಳ್ಳಿಯ ರೈತ ಬಸವರಾಜಪ್ಪ ಮಳೆ ಇಲ್ಲದೇ ತಾನು ಬೆಳೆದ ಅಡಕೆ ಗಿಡಗಳನ್ನು ನಾಶ ಮಾಡುತ್ತಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೀಕರ ಬರಗಾಲದ ಹಿನ್ನೆಲೆ ಸಮಯಕ್ಕೆ ಸರಿಯಾಗಿ ಮಳೆ ಇಲ್ಲದೆ, ಸಮರ್ಪಕವಾಗಿ ನೀರಿಲ್ಲದ್ದರಿಂದ ನಿರ್ವಹಣೆ ಮಾಡಲು ಆಗದ ಕಾರಣಕ್ಕೆ ರೈತನೋರ್ವ ಫಲಕ್ಕೆ ಬಂದಿರುವ ಅಡಕೆ ಗಿಡಗಳನ್ನು ತಾನೇ ಕಡಿದು ಹಾಕಿದ ಘಟನೆ ಮಾಯಕೊಂಡ ಹೋಬಳಿ ಹೊನ್ನಾಯಕನಹಳ್ಳಿಯಲ್ಲಿ ನಡೆದಿದೆ.

ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ಹೊನ್ನನಾಯಕನಹಳ್ಳಿ ರೈತ ಬಸವರಾಜಪ್ಪ ಎಂಬುವರು ಫಲಕ್ಕೆ ಬಂದಿದ್ದ ಅಡಕೆ ಮರ ಕಡಿದು ಹಾಕಿದ್ದಾರೆ. 10ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯದ ಕಾರಣಕ್ಕೆ ಕೊನೆಗೆ ಅಡಕೆ ಮರಗಳನ್ನು ಕಡಿದು ಹಾಕಿರುವುದು ಜಿಲ್ಲೆಯಲ್ಲಿನ ಮಳೆ, ಅಂತರ್ಜಲ ಮಟ್ಟದ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ.

ರೈತ ಬಸವರಾಜಪ್ಪ ತಾನು ಬೆಳೆದ ಅಡಕೆ ಗಿಡಗಳಿಗೆ ಮಳೆ ಇಲ್ಲದ ಹಿನ್ನೆಲೆ ನೀರು ಒದಗಿಸಲಾಗದೆ ಪರದಾಡಿ, ಇದರಿಂದ ರೋಸಿ ಹೋಗಿ ತನ್ನ ತೋಟದಲ್ಲಿ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದ ಅಡಕೆ ಗಿಡಗಳನ್ನು ತಾನೇ ನಾಶ ಮಾಡಿದ್ದಾನೆ. ತನ್ನ ತೋಟದಲ್ಲಿ ನೀರಿಗಾಗಿ 10ಕ್ಕೂ ಹೆಚ್ಚು ಬೋರ್‌ವೆಲ್‌ ಕೊರೆಸಿದರೂ ಸಹಾ ಉಪಯೋಗವಾಗಿಲ್ಲ. ಅಂತರ್ಜಲ ಕುಗ್ಗಿದ ಹಿನ್ನೆಲೆ ಬೋರ್‌ವೆಲ್ ಕೊರೆಸಿದರೂ ಸಹಾ ನೀರು ಸಿಗದೇ ಲಕ್ಷಾಂತರ ರೂಪಾಯಿ ಹಣವನ್ನು ನಷ್ಟ ಮಾಡಿಕೊಂಡಿದ್ದಾನೆ.ರೈತ ಬಸವರಾಜಪ್ಪನವರಿಗೆ ಪರಿಹಾರ ನೀಡಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಳೆದ ವರ್ಷ ಮುಂಗಾರು, ಹಿಂಗಾರಿನಿಂದ ಅತೀ ಮಳೆ ಕೊರತೆಯಿಂದ ಬರದ ಸಂಕಷ್ಟಕ್ಕೆ ತುತ್ತಾಗಿದ್ದ ರೈತಾಪಿ ವರ್ಗ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಅರೇ ಮಲೆನಾಡು ಖ್ಯಾತಿಯ ದಾವಣಗೆರೆ ಜಿಲ್ಲೆ ಬರಕ್ಕೆ ತುತ್ತಾಗಿ, ಜಿಲ್ಲೆಯ ಜೀವ ಸೆಲೆ ಭದ್ರಾ ಜಲಾಶಯದಲ್ಲಿ ಪಾಳಿ ಪದ್ಧತಿಯಲ್ಲಿ ನಾಲೆಯಲ್ಲಿ ನೀರು ಹರಿಸಿದ್ದರ ಪರಿಣಾಮ ಮಳೆಗಾಲದ ಭತ್ತ ಕೈಗೆ ಸಿಕ್ಕಿತು. ಆದರೆ, ಅತೀ ಮುಖ್ಯವಾದ ಮೆಕ್ಕೆಜೋಳ, ಜೋಳ, ರಾಗಿ ಇತರೆ ಬೆಳೆಗಳು ಕೈಗೆ ಸಿಗಲೇ ಇಲ್ಲ.

ಹವಾಮಾನ ಇಲಾಖೆ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ, ರೈತರು ಮಾತ್ರವಲ್ಲ ಜನಸಾಮಾನ್ಯರಲ್ಲೂ ಒಂದಷ್ಟು ನೆಮ್ಮದಿಗೆ ಕಾರಣವಾಗಿದೆ. ವಾಡಿಕೆಯಂತೆ ಯುಗಾದಿ, ಬಸವ ಜಯಂತಿ ಯಂದು ಮಳೆಗಳು ಬರಲಿಲ್ಲ. ಮೇ ತಿಂಗಳ 2 ವಾರಗಳು ಕಳೆದರೂ ಮಳೆಯ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಹರಿಹರ ತಾಲೂಕಿನ ಹೊಳೆಸಿರಿಗೆರೆಯಲ್ಲಿ ಸೋಮವಾರ ಕತ್ತೆಗಳ ಮದುವೆ ಮಾಡಲಾಗಿದೆ. ಕತ್ತೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿದೆ. ಅನೇಕ ಕಡೆ ಕಪ್ಪೆ ಮದುವೆ, ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.