ಕನ್ನಡಪ್ರಭ ವಾರ್ತೆ ಹೊಸದುರ್ಗ
ವ್ಯಕ್ತಿಯಲ್ಲಿ ಚೈತನ್ಯ ತುಂಬುವ, ಸುಸಂಸ್ಕೃತ ಸಮಾಜ ನಿರ್ಮಿಸುವ ಶಕ್ತಿ ರಂಗಭೂಮಿ ಕ್ಷೇತ್ರಕ್ಕೆ ಇದ್ದು ಇಂದಿನ ಯುವ ಪೀಳಿಗೆಗೆ ಬಾಲ್ಯದಿಂದಲೇ ರಂಗಭೂಮಿಯ ಸ್ಪರ್ಶವಾಗಬೇಕಾಗಿದ್ದು, ಪ್ರತಿಯೊಂದು ಶಾಲೆಯಲ್ಲೂ ರಂಗ ಶಿಕ್ಷಕರ ನೇಮಕಾತಿ ಅತ್ಯಂತ ಅನಿವಾರ್ಯವಾಗಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಹುಣಸೇಮರದ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ, ಮೇ 17ರಿಂದ ಜೂನ್ 5ರವರೆಗೆ ನಡೆಯಲಿರುವ ಯುವಜನ ಶೈಕ್ಷಣಿಕ ತರಬೇತಿ ಶಿಬಿರ ಹಾಗೂ ರಂಗಶಾಲಾ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಾಗತಿಕ ಮಟ್ಟದ ನಾಯಕರಾದ ಅಮೆರಿಕದ ಅಧ್ಯಕ್ಷರಾಗಲಿ ಅಥವಾ ಇರಾನ್, ಇರಾಕ್, ಇಸ್ರೇಲ್ ಮುಂತಾದ ದೇಶಗಳ ನಾಯಕರಿಗಾಗಲಿ ರಂಗಭೂಮಿ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಪರಿಚಯ ಅವರಿಗಿದ್ದಿದ್ದರೆ ಇಂದು ಅಲ್ಲಿ ರಕ್ತಪಾತವಾಗುತ್ತಿರಲಿಲ್ಲ.ರಂಗಭೂಮಿ ಕೇವಲ ದೈಹಿಕ ಕಸರತ್ತಲ್ಲ ಅದು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಭಾಷೆ, ಭಾವನೆ ಹಾಗೂ ನೈತಿಕತೆಯನ್ನು ಕಲಿಸುತ್ತದೆ ಎಂಬುದಕ್ಕೆ ನಟ ಡಾ.ರಾಜ್‌ಕುಮಾರ್ ಅವರ ಭಾಷಾ ಬಳಕೆಯೇ ಅತ್ಯುತ್ತಮ ಉದಾಹರಣೆ ಎಂದರು.
ಶಾಲೆಗಳಿಗೆ ಕನಿಷ್ಠ 100 ಶಿಕ್ಷಕರನ್ನು ನೇಮಿಸಿಕೊಂಡರೂ ಅದರಲ್ಲಿ 10 ಜನ ರಂಗಶಿಕ್ಷಣ ಪಡೆದ ಅನುಭವಿಗಳಿರಬೇಕು ಎಂದು ಸರ್ಕಾರದ ಮೇಲೆ ಪತ್ರದ ಮೂಲಕ ಒತ್ತಾಯಿಸಲಾಗಿದೆ. ರಂಗಭೂಮಿಯ ಚಟುವಟಿಕೆಗೆ ನೀಡುವ ಅನುದಾನವನ್ನು ಕಡಿತಗೊಳಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.
ನಾಟಕೋತ್ಸವ ಉದ್ಘಾಟಿಸಿದ ಸಾಹಿತಿ ಹಾಗೂ ಚಿಂತಕ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಚರಿತ್ರೆಯನ್ನು ಒಳಗಣ್ಣಿನ ದರ್ಶನದ ಮೂಲಕ ಅರಿವಿಗೆ ತಂದುಕೊಂಡಾಗ ಮಾತ್ರ ವರ್ತಮಾನದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿವೇಕವನ್ನು ಬೆಳೆಸಿಕೊಳ್ಳಲು ಸಾಧ್ಯ. ಸಾಂಸ್ಕೃತಿಕ ಮನಸ್ಸಿಲ್ಲದ ನಾಯಕರು ಜಗತ್ತಿನ ವಿನಾಶಕ್ಕೆ ಕಾರಣರಾಗುತ್ತಾರೆ. ಕಲೆ ಕಲೆಗಾಗಿ ಅಲ್ಲ, ಕಲೆ ಬದುಕಿಗಾಗಿ ಮತ್ತು ನಿಸರ್ಗ ಧರ್ಮಕ್ಕಾಗಿ ಎಂಬ ತತ್ವದಡಿ ಸಾಮಾಜಿಕ ಜವಾಬ್ದಾರಿಯೊಂದಿಗೆ ರಂಗಭೂಮಿಯನ್ನು ಅಧ್ಯಯನ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕ ಟಿ.ಎಚ್.ಲವಕುಮಾರ್ ಮಾತಮಾಡಿ, ಇಂದು ಬಸವಣ್ಣನವರನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸಿ, ಅವರನ್ನು ದೇವರನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ, ರಂಗಶಿಕ್ಷಕ ವೆಂಕಟೇಶ, ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ಮಾತನಾಡಿದರು.
ವೇದಿಕೆಯ ಮೇಲೆ ರಂಗ ಶಿಕ್ಷಕ ಮಲ್ಲೇಶ್, ರಂಗಾಸಕ್ತರು, ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ನಾಗರಾಜ್, ಶರಣ್ ವಚನಗೀತೆಗಳನ್ನು ಹಾಡಿದರು. ಶಿಕ್ಷಕಿ ಸಂಗೀತ ಬಿಡೆ ಸ್ವಾಗತಿಸಿದರೆ ರಾಜು ನಿರೂಪಿಸಿದರು. ಕೊನೆಯಲ್ಲಿ ರಾಘು ಪುರಪ್ಪೆಮನಿ ನಿರ್ದೇಶನದ ಆ ಮನಿ ನಾಟಕ ಪ್ರದರ್ಶನಗೊಂಡಿತು.