ಪಂಚಗೃಹ ಹಿರೇಮಠದ ಪ್ರಥಮ ಜಾತ್ರೆ, ಪುರಪ್ರವೇಶಿಸಿದ ರಥ

| Published : Apr 04 2024, 01:09 AM IST / Updated: Apr 04 2024, 09:29 AM IST

ಸಾರಾಂಶ

ಅಮ್ಮಿನಬಾವಿ ಬಸ್ ನಿಲ್ದಾಣದಿಂದ ಆರಂಭಗೊಂಡ ನೂತನ ರಥದ ಮೆರವಣಿಯು ಗ್ರಾಮದ ಮುಖ್ಯರಸ್ತೆ, ಮಸೀದಿ ಓಣಿಯ ಮೂಲಕ ಪಂಚಗೃಹ ಹಿರೇಮಠ ತಲುಪಿತು.

ಧಾರವಾಡ:  ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವಕ್ಕೆ ಸಿದ್ಧಪಡಿಸಲಾದ ನೂತನ ರಥಕ್ಕೆ 1008 ಮಾತೆಯರು ಪೂರ್ಣಕುಂಭ ಸ್ವಾಗತ ನೀಡುವುದರೊಂದಿಗೆ ಮಂಗಳವಾರ ಇಳಿಹೊತ್ತಿನ ಗೋಧೂಳಿ ಸಮಯದಲ್ಲಿ ರಥವು ಪುರಪ್ರವೇಶ ಮಾಡಿತು.

ಗ್ರಾಮದ ಬಹುಪಾಲು ರೈತ ಮಹಿಳೆಯರು ಹಸಿರು ಸೀರೆಯುಟ್ಟು ಪೂರ್ಣಕುಂಭಗಳೊಂದಿಗೆ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡಿದ್ದರು. ಜತೆಗೆ ಭಜನೆ, ಕರಡಿಮಜಲು, ಡೊಳ್ಳು ಸೇರಿದಂತೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಶ್ರೀಮಠದ ಸಮಸ್ತ ಭಕ್ತಗಣದ ಸಡಗರ-ಸಂಭ್ರಮದ ಮಧ್ಯೆ ನೂತನ ರಥದ ಪುರಪ್ರವೇಶ ಉತ್ಸವ ಕಳೆಗಟ್ಟಿತ್ತು. ಸಮೀಪದ ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ ಗ್ರಾಮಗಳಿಂದಲೂ ಭಕ್ತ ಸಮೂಹವೂ ನೂತನ ರಥದ ಭಕ್ತಿಯ ಸ್ವಾಗತಕ್ಕೆ ಕೈಜೋಡಿಸಿತ್ತು.

ಅಮ್ಮಿನಬಾವಿ ಬಸ್ ನಿಲ್ದಾಣದಿಂದ ಆರಂಭಗೊಂಡ ನೂತನ ರಥದ ಮೆರವಣಿಯು ಗ್ರಾಮದ ಮುಖ್ಯರಸ್ತೆ, ಮಸೀದಿ ಓಣಿಯ ಮೂಲಕ ಪಂಚಗೃಹ ಹಿರೇಮಠ ತಲುಪಿತು. ಶ್ರೀ ಮಠದ ಆವರಣ ತಲುಪಿದ ನೂತನ ರಥಕ್ಕೆ ಹಿರಿಯ ಹಾಗೂ ಕಿರಿಯ ಶಾಂತಲಿಂಗ ಶಿವಾಚಾರ್ಯರು ಹಾಗೂ ಕಲಬುರ್ಗಿ ಜಿಲ್ಲೆ ಸೂಗೂರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನರುದ್ರಮುನಿ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು. 

ಸಮಸ್ತ ಭಕ್ತಗಣಕ್ಕೆ ಜೋಳದ ಅಂಬಲಿ ಹಾಗೂ ಬೆಲ್ಲದ ಹಾಲಿನ ವಿಶೇಷ ಪ್ರಸಾದ ವಿತರಿಸಲಾಯಿತು. ಜಾತ್ರೆಗಾಗಿ ಸಮರ್ಪಣೆಗೊಂಡ ಈ ರಥವನ್ನು ಸಾಗವಾನಿ, ಹೊನ್ನಿ, ಕರಿಮತ್ತಿ, ದಾಮಣ ಹಾಗೂ ಶಿವಹೊನ್ನಿ ಸೇರಿ ಐದು ವಿಧದ ಕಟ್ಟಿಗೆ ಬಳಸಿ ಆಗಮ ಶಾಸ್ತ್ರೋಕ್ತ ವಿಧಾನದಲ್ಲಿ ಸಿದ್ಧಗೊಳಿಸಲಾಗಿದೆ. ಅಷ್ಟ ಭುಜಾಕೃತಿಯ ಈ ಗಡ್ಡಿ ರಥದ ಎತ್ತರ 12.5 ಅಡಿ ಇದ್ದು, ಗಾಲಿ ಅಳವಡಿಸಿ ನಿಶಾನೆ ಮತ್ತು ಕಳಸದ ತುದಿಯವರೆಗೆ ಒಟ್ಟು ಎತ್ತರ 25 ಅಡಿ ಇದೆ. ರಥದಲ್ಲಿ ಗಣಪತಿ, ಶ್ರೀಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿ, ಶ್ರೀಗುರುಶಾಂತಲಿಂಗ ಶಿವಯೋಗಿಗಳ ಗದ್ದುಗೆ, ಶಿವ-ಪಾರ್ವತಿಯರು, ಆನೆ ಮತ್ತು ಸಿಂಹಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಧಾರವಾಡ ಕಾಮನಕಟ್ಟಿ ಲಕಮನಹಳ್ಳಿ ಓಣಿಯ ಶಿಲ್ಪಿ ಲೋಚನಸಿಂಗ್ ಭಾತಖಂಡೆ ಈ ಸುಂದರ ರಥವನ್ನು ನಿರ್ಮಿಸಿದ್ದಾರೆ.