ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಿಷಮುಕ್ತ ಅನ್ನದ ಬಟ್ಟಲು ಆಶಯದಿಂದ ಇತ್ತೀಚೆಗೆ ಮಂಗಳೂರಿನಲ್ಲಿ ಗೆಡ್ಡೆ ಗೆಣಸು ಮೇಳ ನಡೆಸಿ ಗಮನ ಸೆಳೆದಿರುವ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಇದೀಗ ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಸಾವಯವ ಸಂತೆಯನ್ನು ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಸಾವಯವ ಸಂತೆ ಫೆಬ್ರವರಿಯಿಂದಲೇ ಆರಂಭವಾಗಲಿದೆ. ರಾಜ್ಯದ ವಿವಿಧ ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ವಿವಿಧ ಸಾವಯವ ತರಕಾರಿ, ಹಣ್ಣು, ವಿವಿಧ ದಿನಸಿ ಸಾಮಗ್ರಿಗಳು ಇದರಲ್ಲಿ ಲಭ್ಯ ಎಂದರು. ಎಲೆ ಅರಿವು ಕಾರ್ಯಕ್ರಮ: ಫೆ.2ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಎಲೆ ಅರಿವು ಎಂಬ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಲ್ಲಿ ಹಲವಾರು ವಿಧದ ಎಲೆ, ಬಳ್ಳಿ, ಗಿಡ, ಕಳೆಗಳ ಪರಿಚಯ, ಬಳಕೆ ಹಾಗೂ ಮನೆಮದ್ದಿನ ಮಾಹಿತಿ ನೀಡಲಾಗುವುದು. ಬೆಳಗ್ಗೆ 10 ಗಂಟೆಗೆ ಮರೆಯಾಗುತ್ತಿರುವ ಪ್ರಕೃತಿಯ ಅನನ್ಯ ಸಂಪತ್ತು ವಿಷಯದ ಬಗ್ಗೆ ಬೆಂಗಳೂರಿನ ಸುಸ್ಥಿರ ಕೃಷಿಕ ಶ್ರೀವತ್ಸ ಗೋವಿಂದರಾಜು ಮಾಹಿತಿ ನೀಡುವರು. ಮಧ್ಯಾಹ್ನ 2ಕ್ಕೆ ಹಸಿರು ಎಲೆಗಳು ಮತ್ತು ಆಯುರ್ವೇದದ ಬಗ್ಗೆ ವೈದ್ಯ ಡಾ. ಕೇಶವರಾಜ್ ಮಾತನಾಡುವರು. ಜನಮಾನಸದಿಂದ ಮರೆಯಾಗುತ್ತಿರುವ ಅಪೂರ್ವ ಗಿಡಮೂಲಿಕೆಗಳು ಎಂಬ ಬಗ್ಗೆ ಸಂಜೆ 4ಕ್ಕೆ ಪಿಲಿಕುಳ ಆಯುರ್ವೇದ ವನದ ಮುಖ್ಯಸ್ಥ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಲಿದ್ದಾರೆ ಎಂದು ರತ್ನಾಕರ ಕುಳಾಯಿ ತಿಳಿಸಿದರು.
ಶ್ರೀವತ್ಸ ಗೋವಿಂದರಾಜು ಅವರು ಹಸಿರು ಉದ್ಯಮಿ ಮತ್ತು ಸುಸ್ಥಿರ ಜೀವನ ತರಬೇತುದಾರ. 40ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಐಟಿ ವೃತ್ತಿಪರರು. ಶಾಲಾ ಮಕ್ಕಳಿಗೆ ನೂರಾರು ಕಾರ್ಯಕ್ರಮ ನೀಡಿ, ವಿದ್ಯಾರ್ಥಿಗಳು ಸಾವಯವ ದಿಕ್ಕಿನಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಉಚಿತವಾಗಿರುತ್ತದೆ, ಉಳಿದವರಿಗೆ ಶುಲ್ಕ ನಿಗದಿಪಡಿಸಲಾಗಿದೆ ಎಂದರು.ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿ ಎಲೆ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗೆ ದೂ. ೯೪೮೦೬೮೨೯೨೩ ಸಂಪರ್ಕಿಸಬಹುದು ಎಂದರು.ಬಳಗದ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಅಧ್ಯಕ್ಷ ಜಿ.ಆರ್. ಪ್ರಸಾದ್, ಶರತ್ ಇದ್ದರು.