ಉಚ್ಛಾಟಿತರನ್ನು ಗೆಲ್ಲಿಸುವ ಮೂರ್ಖರು ನಮ್ಮ ಮತದಾರರಲ್ಲ: ಬಿ.ವೈ.ವಿಜಯೇಂದ್ರ

| Published : May 28 2024, 01:10 AM IST / Updated: May 28 2024, 12:50 PM IST

ಉಚ್ಛಾಟಿತರನ್ನು ಗೆಲ್ಲಿಸುವ ಮೂರ್ಖರು ನಮ್ಮ ಮತದಾರರಲ್ಲ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರಿಗೆ ಪಕ್ಷದಿಂದ ಯಾವುದೇ ಅನ್ಯಾಯವಾಗಿಲ್ಲ, ಅವರಿಗೆ ಎಲ್ಲ ಅವಕಾಶಗಳನ್ನು ನೀಡಲಾಗಿತ್ತು. ಅವುಗಳನ್ನೆಲ್ಲ ಅವರು ಬಳಸಿಕೊಂಡಿದ್ದಾರೆ, ಆದರೆ ಈಗ ಎಡವಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

 ಉಡುಪಿ :  ವಿಧಾನ ಪರಿಷತ್‌ನಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಬರುತ್ತೇವೆ ಎಂದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಅಭ್ಯರ್ಥಿಗಳು ಹೇಳುತ್ತಿದ್ದಾರೆ, ಆದರೆ ಅವರನ್ನು ಗೆಲ್ಲಿಸುವಂತಹ ಮೂರ್ಖರು ನಮ್ಮ ಪಕ್ಷದ ಮತದಾರರಲ್ಲ. ಆದ್ದರಿಂದ ಬಂಡಾಯ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಅವರು ಸೋಮವಾರ ಉಡುಪಿಯಲ್ಲಿ ವಿಧಾನಪರಿಷತ್‌ ಚುನಾವಣೆ ಪ್ರಯುಕ್ತ ಪಕ್ಷದ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದರು.

ಉಡುಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರಿಗೆ ಪಕ್ಷದಿಂದ ಯಾವುದೇ ಅನ್ಯಾಯವಾಗಿಲ್ಲ, ಅವರಿಗೆ ಎಲ್ಲ ಅವಕಾಶಗಳನ್ನು ನೀಡಲಾಗಿತ್ತು. ಅವುಗಳನ್ನೆಲ್ಲ ಅವರು ಬಳಸಿಕೊಂಡಿದ್ದಾರೆ, ಆದರೆ ಈಗ ಎಡವಿದ್ದಾರೆ ಎಂದರು.

ಶಿಕ್ಷಕರ ಕ್ಷೇತ್ರವನ್ನು ಕರಾವಳಿಗೆ ನೀಡಬೇಕು ಎಂದು ನಾನೂ ದೆಹಲಿಗೆ ಹೇಳಿದ್ದೆ. ಆದರೆ ಮೈತ್ರಿಯ ಕಾರಣಕ್ಕೆ ಅದನ್ನು ಜೆಡಿಎಸ್‌ಗೆ ನೀಡಲಾಗಿದೆ. ಅದನ್ನು ಪಕ್ಷದ ನಾಯಕರು, ಕಾರ್ಯಕರ್ತರು ಒಪ್ಪಿಕೊಳ್ಳಬೇಕು, ಅದು ನಮ್ಮ ಕರ್ತವ್ಯ ಎಂದವರು ಸ್ಪಷ್ಟಪಡಿಸಿದರು.

ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ, ಪಕ್ಷದ ಅಭ್ಯರ್ಥಿ ಗೆದ್ದರೆ ತಾವೇ ಗೆದ್ದಂತೆ ಅವರು ಸಂಭ್ರಮಿಸುತ್ತಾರೆ. ಈ ಬಾರಿ ವಿಧಾನ ಪರಿಷತ್ತಿಗೆ ಸಾಕಷ್ಟು ಹಿರಿಯ ಆಕಾಂಕ್ಷಿಗಳಿದ್ದರು. ಆದರೆ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದ ಮೇಲೆ ಒಪ್ಪಿಕೊಂಡು, ಅವರ ಪರ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ಅವಕಾಶ ಸಿಕ್ಕಿಲ್ಲ ಎಂದು ನಾಯಕರನ್ನು ಟೀಕಿಸುತ್ತಿದ್ದಾರೆ. ಸಂಘಟನೆಗಿಂತ ಸ್ವಾರ್ಥದ ಬಗ್ಗೆ ಆಲೋಚಿಸಿದರೆ ದುರಂತವಾಗುತ್ತದೆ. ಆದರೆ ನೈರುತ್ಯ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಮತ್ತು ಎಸ್.ಎಲ್.ಭೋಜೇಗೌಡರು ಗೆಲ್ಲುವುದನ್ನು ಯಾರೂ ತಪ್ಪಿಸಿಕ್ಕಾಗುವುದಿಲ್ಲ ಎಂದು ಬಂಡಾಯ ಅಭ್ಯರ್ಥಿಗಳಿಗೆ ಸಂದೇಶ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ಹರೀಶ್ ಪೂಂಜಾ, ಡಿ.ಎಸ್.ಅರುಣ್, ರಾಜ್ಯ ಪ್ರಕೋಷ್ಠ ಸಂಯೋಜಕ ದತ್ತಾತ್ರಿ, ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಎಸ್.ಎಲ್.ಭೋಜೇಗೌಡ ಹಾಗೂ ಡಾ.ಧನಂಜಯ ಸರ್ಜಿ ಇದ್ದರು.

ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಬಾರದ ಸಚಿವರೇ, ಕನ್ನಡ ಹೇಗೆ ಉಳಿಸ್ತೀರಿ?: ರಾಜ್ಯ ಕಾಂಗ್ರೆಸ್ ಸರ್ಕಾರ ಕನ್ನಡಕ್ಕೆ ಆದ್ಯತೆ, ಶಿಕ್ಷಣಕ್ಕೆ ಒತ್ತು ಎನ್ನುತ್ತಿದೆ. ಆದರೆ ಕನ್ನಡ ಬಾರದ ಶಿಕ್ಷಣ ಸಚಿವರು ಕನ್ನಡ ಶಾಲೆಗಳನ್ನು ಹೇಗೆ ಉಳಿಸ್ತಾರೆ? ಸರ್ಕಾರ 3 ತಿಂಗಳಿಂದ ಶಿಕ್ಷಕರಿಗೆ ಸಂಬಳವನ್ನೇ ಕೊಟ್ಟಿಲ್ಲ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಶೇ.50ರಷ್ಟು ಶಿಕ್ಷಕರೇ ಇಲ್ಲ, ಶಿಕ್ಷಣಕ್ಕೆ ಒತ್ತು ಎಲ್ಲಿದೆ ಎಂದು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡರು ತೀವ್ರವಾಗಿ ಪ್ರಶ್ನಿಸಿದರು

.ಮತ ಹಾಕಿದರೆ ಕಾಂಗ್ರೆಸ್ ಉಳಿಯಬಾರದು!: ಬಡಿಸಿದರೇ ಹಸಿವಿರಬಾರದು, ಗುಡಿಸಿದರೇ ಕಸವಿರಬಾರದು, ಮತ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬಾರದು ಎಂದ ಪದವಿ ಕ್ಷೇಕ್ರದ ಅಭ್ಯರ್ಥಿ ಡಾ.ಸರ್ಜಿ, ಬಿಜೆಪಿ ಸರ್ಕಾರ ಜಾರಿಗೊಳಿಸಿದ ವಿವೇಕ ಕೊಠಡಿ, ವಿದ್ಯಾನಿಧಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಮಾಡಿದೆ. ಈ ಪಿಕ್ ಪಾಕೆಟ್ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯಿರಿ ಎಂದು ಮನವಿ ಮಾಡಿದರು.