ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಗಣಿನಗರಿ ಖ್ಯಾತಿಯ ಬಳ್ಳಾರಿಯಲ್ಲಿ ಪಾದಚಾರಿಗಳ ಓಡಾಟಕ್ಕೆ ಸರಿಯಾದ ಫುಟ್‌ಪಾತ್‌ಗಳೇ ಇಲ್ಲ!ಇದು ಪಾಲಿಕೆ ಆಡಳಿತ ಸೇರಿದಂತೆ ಸ್ಥಳೀಯ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯೂ ಹೌದು. ಹಾಳಾಗಿರುವ ಪಾದಚಾರಿ ರಸ್ತೆಗಳನ್ನು ಸರಿಪಡಿಸಲು ಯಾರಿಗೂ ಸಮಯವೇ ಇಲ್ಲ. ಪರಿಣಾಮ ಸಾರ್ವಜನಿಕರು ರಸ್ತೆಯಲ್ಲಿಯೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ರಸ್ತೆ ಅಪಘಾತಗಳಿಗೆ ಆಸ್ಪದವಾಗಿದೆ.
ನಗರದ ಕೆಲವೆಡೆ ಹೊಸದಾಗಿ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ ಎಂಬ ಸಮಾಧಾನ ಬಿಟ್ಟರೆ, ಹಳೆಯ ರಸ್ತೆಗಳ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಪಾಲಿಕೆ ಮನಸ್ಸು ಮಾಡಿಲ್ಲ. ಈ ಸಮಸ್ಯೆ ಜನಪ್ರತಿನಿಧಿಗಳ ಕಣ್ಣಿಗೂ ಬಿದ್ದಿಲ್ಲ (ಬಹುತೇಕ ಜನಪ್ರತಿಧಿಗಳು ಕಾರ್‌ನಲ್ಲಿ ಓಡಾಡುತ್ತಾರೆ) ರಸ್ತೆಯಲ್ಲಿ ಓಡಾಡಲೇಬೇಕಾದ ಅನಿವಾರ್ಯದಲ್ಲಿರುವ ಜನರಿಗೆ ಮಾತ್ರ ಪಾದಚಾರಿ ರಸ್ತೆ ಇಲ್ಲದೆ ಒದ್ದಾಡುವ ಸಂಕಟ ತಪ್ಪಿಲ್ಲ.ಗುಂಡಿ ಬಿದ್ದರೂ ಮುಚ್ಚುವುದಿಲ್ಲ: ಬಳ್ಳಾರಿಯಲ್ಲಿ ಪಾದಚಾರಿ ರಸ್ತೆಗಳು ಹೇಗಿವೆ ಎಂದು ಗೊತ್ತಾಗಬೇಕಾದರೆ ನಗರದಲ್ಲಿ ಒಂದು ಸುತ್ತು ಓಡಾಡಿದರೆ ಸಾಕು ಎಲ್ಲವೂ ದಿವ್ಯದರ್ಶನವಾಗುತ್ತದೆ. ಅನೇಕ ಕಡೆ ಇಂಟರ್‌ಲಾಕ್‌ಗಳು ಮಾಯವಾಗಿದ್ದು, ಅದರ ಜಾಗದಲ್ಲಿ ಟೀ, ಕಾಫಿ ಹೋಟೆಲ್‌ಗಳು ತಲೆ ಎತ್ತಿವೆ. ಎಲ್ಲಿಯೂ ಸುಸೂತ್ರವಾದ ಫುಟ್‌ಪಾತ್ ಕನೆಕ್ಟಿವಿಟಿ ಇಲ್ಲ. ನಾಮಫಲಕಗಳ ತೆರವುಗೊಳಿಸಿಲ್ಲ. ತಿಂಗಳುಗಟ್ಟಲೇ ನಾಮಫಲಕಗಳು ಬಿದ್ದಿದ್ದರೂ ತೆರವುಗೊಳಿಸುವುದಿಲ್ಲ. ಕೆಲವೆಡೆ ಪಾದಚಾರಿ ರಸ್ತೆಯಲ್ಲಿಯೇ ಗುಂಡಿಗಳಿದ್ದು ರಾತ್ರಿ ವೇಳೆ ಬಿದ್ದು ಗಾಯಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಫುಟ್‌ಪಾತ್ ಸರಿಯಿಲ್ಲ ಎಂಬ ಕಾರಣಕ್ಕಾಗಿಯೇ ಬೆಳಿಗ್ಗೆ ಶಾಲಾ-ಕಾಲೇಜು ಸಮಯದಲ್ಲಿ ಹಿಂಡು ಹಿಂಡಾಗಿ ವಿದ್ಯಾರ್ಥಿಗಳು ರಸ್ತೆ ಮಧ್ಯದಲ್ಲಿಯೇ ನಡೆದುಕೊಂಡು ಬರುವ ದೃಶ್ಯ ಕಂಡು ಬರುತ್ತದೆ. ಈ ಕಾರಣಕ್ಕಾಗಿಯೇ ನಗರದಲ್ಲಿ ಅಪಘಾತ ಸಂಖ್ಯೆಗಳು ಹೆಚ್ಚಾಗಿವೆ ಎಂಬುದು ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತಕ್ಕೆ ಗೊತ್ತಿದೆ. ಆದರೆ, ಕ್ರಮ ವಹಿಸುವ ಕಾಳಜಿಗಳು ಕಂಡು ಬಂದಿಲ್ಲ. ಇನ್ನು ಖಾಸಗಿ ವ್ಯಕ್ತಿಗಳು ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ವಹಿವಾಟು ನಡೆಸಿದರೂ ಪಾಲಿಕೆ ಆಡಳಿತ ಮೌನಕ್ಕೆ ಶರಣಾಗಿದೆ ಎಂಬ ಆರೋಪ ಸಾರ್ವಜನಿಕರದ್ದು.ರೆಡ್ಡಿ ಕಾಲದಲ್ಲಾದ ರಸ್ತೆಗಳು: ಈ ಹಿಂದೆ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಇಡೀ ನಗರಕ್ಕೆ ಪಾದಚಾರಿಗಳ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಯಿತು. ಹೀಗಾಗಿಯೇ ಬಳ್ಳಾರಿಯಲ್ಲಿ ಸುಸಜ್ಜಿತ ಪಾದಚಾರಿ ರಸ್ತೆಗಳು ನಿರ್ಮಾಣಗೊಂಡವು. ಬಳಿಕ ಬಂದವರು ರಸ್ತೆ ನಿರ್ಮಾಣ ಇರಲಿ; ಅವುಗಳ ದುರಸ್ತಿ ಮಾಡುವ ಕಡೆಗೂ ಗಮನ ನೀಡಲಿಲ್ಲ. ಹೀಗಾಗಿ ನಗರದ ಬಹುತೇಕ ಪಾದಚಾರಿ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಉಪಯೋಗವಿಲ್ಲದಂತಾಗಿದೆ. ಪಾಲಿಕೆಗೆ ಸಾರ್ವಜನಿಕರು ನೀಡುವ ತೆರಿಗೆ ಹಣ ಹಾಗೂ ಸರ್ಕಾರದ ವಿವಿಧ ಯೋಜನೆಯಡಿ ಬರುವ ಅನುದಾನ ಎಲ್ಲಿ ಮಾಯವಾಗುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಜನರ ಪ್ರಶ್ನೆಗೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಉತ್ತರದಾಯಿಗಳು.
ಬಳ್ಳಾರಿಯಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ ಎಂಬುದಕ್ಕೆ ಪಾದಚಾರಿ ರಸ್ತೆಗಳೇ ಸಾಕ್ಷಿ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಗಣಿ ನಗರಿ ಎನ್ನುತ್ತಾರೆ. ಆದರೆ ಇಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲ ಎನ್ನುತ್ತಾರೆ ಬಳ್ಳಾರಿ ವಿದ್ಯಾನಗರ ನಿವಾಸಿ ವಿಜಯಕುಮಾರ್.