ಶಿಗ್ಗಾಂವಿ: ಮನುಷ್ಯ ಪ್ರಜ್ಞಾವಂತನಾಗಿ ಹೃದಯ ಶ್ರೀಮಂತಿಕೆ ಉಳ್ಳವನಾಗಿ ಬಾಳಿದರೆ ಬಾಳು ಸಾರ್ಥಕ. ಶ್ರಮದ ಬೆವರಿನ ಫಲ ಯಾವಾಗಲೂ ಶಾಶ್ವತ ಮತ್ತು ಸುಖದಾಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಅರಟಾಳ ಗ್ರಾಮದ ಕ್ಷೇತ್ರನಾಥ ಶ್ರೀ ವರವೀರಭದ್ರಸ್ವಾಮಿ 32ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಬುಧವಾರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮನುಷ್ಯನಾಗಿ ಬಾಳುವುದು ಸುಲಭ. ಆದರೆ ಮಾನವೀಯತೆಯಿಂದ ನಡೆಯುವುದು ತುಂಬಾ ಕಷ್ಟ. ಒಳ್ಳೆಯ ನಡವಳಿಕೆಯೇ ನಿಜವಾದ ಧರ್ಮ. ಸುಖ ಸಮೃದ್ಧಿಗಳು ಬೆಸೆಯುತ್ತಿವೆ. ಆದರೆ ಸತ್ಕೃತಿ, ಸಂಸ್ಕೃತಿ ಬೆಳೆಯುತ್ತಿಲ್ಲ. ವಿದ್ಯಾ-ಬುದ್ಧಿ ಬೆಳೆದ ಪ್ರಮಾಣದಲ್ಲಿ ಹೃದಯ ಪರಿವರ್ತನೆಯಾಗದಿರುವುದೇ ಇಂದಿನ ಎಲ್ಲ ಗೊಂದಲಗಳಿಗೆ ಕಾರಣ. ಬೆಟ್ಟದಷ್ಟು ಕಷ್ಟ ಬಂದರೂ ಅಚಲವಾಗಿರುವ ಗಟ್ಟಿತನ ನಮ್ಮದಾಗಬೇಕು. ವಿವೇಕ, ಶ್ರದ್ಧೆ, ನಿಷ್ಠೆ ಸದಾ ಜಾಗ್ರತಗೊಳ್ಳಬೇಕು. ಅರಿವಿನ ಕಣ್ಣು ತೆರೆಸಲು ಧರ್ಮ ಮತ್ತು ಗುರು ಕಾರುಣ್ಯ ಬೇಕು. ನಾಗರಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು. ದುಷ್ಟರ ಸಂಹಾರ-ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿದಾತ ಶ್ರೀ ವೀರಭದ್ರಸ್ವಾಮಿ. 32ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗಂಜೀಗಟ್ಟಿ ಡಾ. ಶಿವಲಿಂಗ ಶಿವಾಚಾರ್ಯರು, ಹಾವೇರಿ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನರೇಗಲ್ ಮಲ್ಲಿಕಾರ್ಜುನ ಶಿವಾಚಾರ್ಯರು, ಹನುಮಾಪುರದ ಸೋಮಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು.ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ-ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಲಿಂ. ಅರಟಾಳು ರುದ್ರಗೌಡ ಪಾಟೀಲ ಅವರು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಬಹಳಷ್ಟು ಪ್ರಗತಿಗಾಗಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆಯಲಾಗದು. ಅರಟಾಳು ಗ್ರಾಮದಲ್ಲಾಗಲಿ ಶಿಗ್ಗಾಂವಿಯಲ್ಲಾಗಲಿ ಅವರ ಹೆಸರು ಚಿರಸ್ಥಾಯಿಯಾಗುವಂತೆ ಕೆ.ಎಲ್.ಇ. ಸಂಸ್ಥೆಯಿಂದ ಶೈಕ್ಷಣಿಕ ಕೇಂದ್ರವನ್ನು ಆರಂಭಿಸಬೇಕೆಂದು ಆಗ್ರಹಪಡಿಸಿದರು.
ಸಮಾರಂಭದಲ್ಲಿ ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಶಿಧರ ಯಲಿಗಾರ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಹಲವಾರು ಗಣ್ಯರಿಗೆ ಮತ್ತು ಧರ್ಮಾಭಿಮಾನಿಗಳಿಗೆ ಗುರುರಕ್ಷೆ ಕೊಡಿಸಲಾಯಿತು. ಡಾ. ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, ಕಳಸ -ಕನ್ನಡಿ -ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಜರುಗಿತು. ಸಹಸ್ರಾರು ಜನರು ಪಾಲ್ಗೊಂಡು ಆಶೀರ್ವಾದ ಪಡೆದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.