ವೈಭವದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಸಂಪನ್ನ

| Published : Jul 31 2024, 01:04 AM IST

ಸಾರಾಂಶ

ಮಳೆ ನಡುವೆಯೂ ಕಳೆಗಟ್ಟಿದ ಮಾರಿಕಾಂಬ ದೇವಿಯ ಜಾತ್ರಾ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ

ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾಮಹೋತ್ಸವವು ವೈಭವದೊಂದಿಗೆ ಸಂಪನ್ನಗೊಂಡಿತು.

ವರ್ಷದಲ್ಲಿ ಎರಡು ಭಾರಿಯಲ್ಲಿ ಆಚರಿಸುವ ಮಾರಿಕಂಬ ದೇವಿ ಜಾತ್ರೆಯು ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರದೊಂದು ಆಚರಿಸುವುದು ಇಲ್ಲಿನ ವಿಶೇಷ.

ಮಳೆಗಾಲದ ಮಂಗಳವಾರ ಮುಂಜಾನೆ ಆರು ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ನಡೆದು ನಂತರ ಕೋಳಿ ಕುರಿಗಳ ಬಲಿ ಪೂಜೆ ಜರುಗುತ್ತದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ಹಣ್ಣು ಕಾಯಿ ಸಮರ್ಪಿಸಿ ದರ್ಶನಾಶೀರ್ವಾದ ಪಡೆಯುತ್ತಾರೆ.

ಬೇಡಿದ ವರ ಕರುಣಿಸುವ ಮಾರಿಕಾಂಬೆ ವಿವಾಹವಾಗದವರು ಮತ್ತು ಸಂತಾನ ಭಾಗ್ಯ ಹೀಗೆ ಹತ್ತು ಹಲವು ಬೇಡಿಕೆಯನ್ನು ದೇವಿಯಲ್ಲಿಟ್ಟು ಪ್ರಾರ್ಥಿಸಿದರೆ ಕೇವಲ ಅರು ತಿಂಗಳಲ್ಲಿ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆಯಿಂದ ಈ ಕ್ಷೇತ್ರ ಭಕ್ತರ ಸಮೂಹ ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತವಾಗಿದ್ದು, ಜಾತ್ರಾ ಮಹೋತ್ಸವದಲ್ಲಿ ಹರಿಕೆ ಸಮರ್ಪಿಸಲು ಭಕ್ತರ ದಂಡು ತಂಡೋಪತಂಡವಾಗಿ ಹರಿದು ಬರುತ್ತಾರೆ.

ದೇವಸ್ಥಾನ ಧರ್ಮದರ್ಶಿ ಸಮಿತಿಯವರು ಹಾಗೂ ಗ್ರಾಮಸ್ಥರು ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಯಿಂದ ಸುಮಾರು ೨೦ ಸಹಸ್ರಕ್ಕೂ ಆಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪಡೆದರು.