ಓಬವ್ವನ ವಂಶಸ್ಥರಾದ ಕುದರೆಡೆವು ರಾಜಪ್ಪ ಮತ್ತು ತಂಡವು ಕಹಳೆ ವಾದನ ನುಡಿಸುವ ಮೂಲಕ ಓಬವ್ವನ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ್ದು, ಇತಿಹಾಸ ಮರುಕಳಿಸಿದಂತಿತ್ತು.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಪಾಳೇಗಾರರು ಆಳ್ವಿಕೆ ನಡೆಸಿದ ನೆಲದಲ್ಲಿ, ಒನಕೆ ಓಬವ್ವ ಹುಟ್ಟಿ ಬೆಳೆದ ಮಣ್ಣಲ್ಲಿ ಶನಿವಾರ, ಭಾನುವಾರ ನಡೆದ ಎರಡು ದಿನಗಳ ಒನಕೆ ಓಬವ್ವನ ಉತ್ಸವದಲ್ಲಿ ಪುನಃ ಓಬವ್ವನ ಗತವೈಭವ ಮರುಕಳಿಸುವಂತೆ ನೂರಾರು ಕಲಾವಿದರು ನೃತ್ಯ, ಸಂಗೀತ ಗಾಯನದ ಮೂಲಕ ಸಾಕ್ಷೀಕರಿಸಿದರು.

ಓಬವ್ವನ ವಂಶಸ್ಥರಾದ ಕುದರೆಡೆವು ರಾಜಪ್ಪ ಮತ್ತು ತಂಡವು ಕಹಳೆ ವಾದನ ನುಡಿಸುವ ಮೂಲಕ ಓಬವ್ವನ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ್ದು, ಇತಿಹಾಸ ಮರುಕಳಿಸಿದಂತಿತ್ತು. ಸ್ವರ ಮಾಂತ್ರಿಕ ರಾಜೇಶ್ ಕೃಷ್ಣನ್ ಸಂಗೀತ ಗಾಯನದ ಮೋಡಿ ಗುಡೇಕೋಟೆ ಹೆಬ್ಬಂಡೆ ಪ್ರತಿಧ್ವನಿಸಿ ಉತ್ಸವಕ್ಕೆ ಕಳೆತಂದಿತು. 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿ ಉತ್ಸವ ಯಶಸ್ವಿಯಾಗಲು ಕಾರಣರಾದರು. ಇನ್ನೊಬ್ಬ ಕಲಾವಿದ ಶ್ರೀಧರ್ ಅಕ್ಕಸಾಲಿ ಅವರ ವಯಲಿನ್ ವಾದನ ಊರಿನ ಬುಡದಲ್ಲೇ ಇದ್ದ ಹೆಬ್ಬಂಡೆಗಳ ಮಧ್ಯ ಪ್ರತಿಧ್ವನಿಸಿ ತಣ್ಣನೆಯ ರಾತ್ರಿಯಲ್ಲಿ ಜನತೆಯನ್ನು ನಿಬ್ಬೆರಗಾಗಿಸಿತು. ಲಂಬಾಣಿ ನೃತ್ಯ, ಕೋಲಾಟ ಪದಗಳು, ಮಹಿಳಾ ವೀರಗಾಸೆ ಕಲಾ ತಂಡಗಳು ನೀಡಿದ ವಾದ್ಯಗಳ ಲಯಕ್ಕೆ ತಕ್ಕ ನೃತ್ಯವು ಜನಸ್ತೋಮ ಹುಚ್ಚೆದ್ದು ಕುಣಿಯುವಂತೆ ಮಾಡಿತು. ತಿಮ್ಮನಹಳ್ಳಿ ಡಿ.ಬಿ. ನಿಂಗಪ್ಪ ಮತ್ತು ನಾಗರಹುಣಿಸೆ ದುರುಗೇಶ್ ಅವರ ವಚನ ಮತ್ತು ಸುಗಮ ಸಂಗೀತ ಗಾಯನವು ಭಾವಭಕ್ತಿಯಿಂದ ಪ್ರೇಕ್ಷಕರು ತಲೆದೂಗಿದ್ದರು.

ಚಪ್ಪಾಳೆ ಗಿಟ್ಟಿಸಿದ ನಗೆ ಚಟಾಕಿ:

ಉದ್ಘಾಟನೆ ಕಾರ್ಯಕ್ರಮದ ನಂತರ ನಾಡಿನ ವಿವಿಧ ಭಾಗದ ಸಂಗೀತ ಮತ್ತು ನೃತ್ಯ ರೂಪಕಗಳು ಮುಗಿದ ಮೇಲೆ ಜನರು ವಾಪಸ್‌ ತೆರಳುತ್ತಾರೆ ಎಂಬ ಭಾವನೆ ಆಯೋಜಕರಲ್ಲಿ ಮೂಡಿತ್ತು. ಆದರೆ, ಕಾಮಿಡಿ ಕಿಲಾಡಿಗಳಾದ ಅಪ್ಪಣ್ಣ, ನಟರಾಜ್ ತಂಡ ನೀಡಿದ ನಗೆಹಬ್ಬ ಕಾರ್ಯಕ್ರಮ ನೋಡಲು ರಾತ್ರಿ 12 ಗಂಟೆವರೆಗೂ ಕಾತುರದಿಂದ ಕಾದರು.

ಅಪಾರ ಜನಸ್ತೋಮ:

ಒನಕೆ ಓಬವ್ವನ ಉತ್ಸವದಲ್ಲಿ ಅಪಾರ ಜನಸ್ತೋಮ ಸೇರಿತ್ತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿಗಳು ಉತ್ಸವ ಆಯೋಜಿಸಿದ್ದರು. ₹1 ಕೋಟಿಗೂ ಹೆಚ್ಚು ಅನುದಾನ ತಂದು ಒನಕೆ ಓಬವ್ವನ ಉತ್ಸವ ಮಾಡುತ್ತೇನೆ ಎಂದು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕರು ಹೇಳಿದ್ದರು. ಯಾವುದಕ್ಕೂ ಕೊರತೆ ಇಲ್ಲದೇ ಐತಿಹಾಸಿಕ ವೇದಿಕೆ ನಿರ್ಮಿಸಿದ್ದರು. ನೆರೆದಿದ್ದ ಸಹಸ್ರಾರು ಪ್ರೇಕ್ಷಕರಿಗೆ ಹುರುಪು ತುಂಬುವ ಕಾರ್ಯ ಮಾಡಿದ್ದರು. ಯಾವುದೇ ರಾಜಕೀಯ ಆಡಂಬರವಿಲ್ಲದೇ ವೇದಿಕೆಯಲ್ಲಿ ಸೀಮಿತ ಗಣ್ಯರೊಂದಿಗೆ ಕಾರ್ಯಕ್ರಮ ನಡೆಸಿ ಕಲಾವಿದರಿಗೆ ಸಮಯ ಕೊಟ್ಟಿದ್ದು ಉತ್ಸವಕ್ಕೆ ಮತ್ತಷ್ಟು ಮೆರುಗು ತಂದಿತು. ಪ್ರೇಕ್ಷಕರು ಮಧ್ಯರಾತ್ರಿವರೆಗೂ ಕುಳಿತು ಸಂಗೀತ ಗಾಯನದ ಮಾಧುರ್ಯ ಸವಿದರು.

ಕಾರ್ಯಕ್ರಮದ ಕೊನೆವರೆಗೆ ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ ವೇದಿಕೆ ಮುಂದೆ ಕುಳಿತು ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದರೆ, ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರು, ಬಿಸಿಎಂ ಅಧಿಕಾರಿ ಶ್ಯಾಮಪ್ಪ ಮುಂತಾದ ಅಧಿಕಾರಿಗಳು ಸಾಥ್ ನೀಡಿದರು.

ಈ ಬಾರಿಯ ಒನಕೆ ಓಬವ್ವನ ಉತ್ಸವ ಅತ್ಯಂತ ಅದ್ಧೂರಿಯಾಗಿ ಆಯೋಜನೆಗೊಂಡಿತು. ನಮ್ಮ ನೆಲದ ಶ್ರೀಮಂತಿಕೆಯನ್ನು ಪುನರ್ ನಿರ್ಮಾಣ ಮಾಡುವ ಕೆಲಸವಾಗಿದೆ. ಓಬವ್ವನ ಉತ್ಸವ ಜನರ ಉತ್ಸವವಾಗಿ ರೂಪುಗೊಂಡಿದೆ ಎನ್ನುತ್ತಾರೆ ಗುಡೇಕೋಟೆ ಗ್ರಾಪಂ ಅಧ್ಯಕ್ಷ ಕೃಷ್ಣ.