ಮಾಗಡಿ: ರೈತರಿಗೆ ಅನುಕೂಲ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.

ಮಾಗಡಿ: ರೈತರಿಗೆ ಅನುಕೂಲ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.

ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ಡೈರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಮೂಲ್ ಒಕ್ಕೂಟದಲ್ಲಿ 17 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದ್ದು, ಕೇವಲ 10 ಲಕ್ಷ ಲೀಟರ್‌ ಹಾಲು ಮೊಸರು ರೀತಿಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಇನ್ನು 7 ಲಕ್ಷ ಹಾಲು ಉಳಿಯುತ್ತಿದೆ. ರಾಜ್ಯ ಬಿಟ್ಟರೆ ಬೇರೆ ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲೂ ರೈತರಿಗೆ ಪ್ರೋತ್ಸಾಹ ಧನ ಕೊಡುತ್ತಿಲ್ಲ. 3 ರು.ಇದ್ದ ಪ್ರೋತ್ಸಾಹ ಧನ ಕನಕಪುರದಲ್ಲಿ ಮೆಗಾ ಡೈರಿ ಉದ್ಘಾಟನೆ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಒತ್ತಡ ಹಾಕಿ 5 ರುಪಾಯಿಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.

ಮಾಗಡಿ, ಕನಕಪುರದಲ್ಲಿ ಮಾತ್ರ ದೇಸಿ ಹಾಲು:

ದೇಸಿ ಹಾಲನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಗಡಿ ಮತ್ತು ಕನಕಪುರದಲ್ಲಿ ದೇಸಿ ಹಸುಗಳಿಗೆ ಶೇ. 50ರಷ್ಟು ರಿಯಾಯಿತಿ ಕೊಟ್ಟು ಈ ಹಾಲನ್ನು ಸಂಗ್ರಹಿಸಿ ಮಾರುಕಟ್ಟೆಗೆ ತರುತ್ತಿದ್ದೇವೆ. ಒಂದು ಲೀಟರ್ ದೇಸಿ ಹಾಲಿಗೆ ₹ 120 ರುಪಾಯಿ ನಿಗದಿ ಮಾಡಿದ್ದು ಗುಣಮಟ್ಟದ ದೇಸಿ ಹಾಲು ನಂದಿನಿಯಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಿಲ್ಲ. ದೇಸಿ ಹಾಲಿನ ತುಪ್ಪ ಕೂಡ ಮಾರಾಟ ಮಾಡುತ್ತಿದ್ದೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಯುವಕರು ಹೈನುಗಾರಿಕೆಯಲ್ಲಿ ಉದ್ಯೋಗ ಅವಕಾಶ ಕಂಡುಕೊಳ್ಳಬಹುದು. ಮಿನಿ ಡೈರಿ ಮಾಡುವ ಯುವಕರಿಗೆ 15 ಲಕ್ಷ ರುಗಳವರೆಗೆ ವಾರ್ಷಿಕ ಶೇ.3ರಷ್ಟು ಬಡ್ಡಿ ದರದಲ್ಲಿ ಕೊಡಲಾಗುತ್ತಿದೆ. 8 ಹಸು ಮನೆ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಬಹುದು. ಐಟಿ ಕಂಪನಿಯಲ್ಲಿ ಬರುವಷ್ಟು ಸಂಬಳ ಹೈನುಗಾರಿಕೆಯಲ್ಲಿ ಬರಲಿದೆ. ಬಮೂಲ್‌ ಯುವಜನರನ್ನು ಹೈನುಗಾರಿಕೆಯತ್ತ ಸೆಳೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಡಿ.ಕೆ.ಸುರೇಶ್ ಬಮೂಲ್ ಅಧ್ಯಕ್ಷರಾದರೆ ಸಾಲದು, ಅವರು ಕೆಎಂಎಫ್ ಅಧ್ಯಕ್ಷರಾಗಿ ಕೆಲಸ ಮಾಡಬೇಕು. ಲೋಕಸಭಾ ಸದಸ್ಯರಾಗಿ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆಂಬುದು ಗೊತ್ತಿದೆ. ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಯೋಗ ಬಂದಿದ್ದು, ಆಗ ಡಿ.ಕೆ.ಸುರೇಶ್ ರೈತರಿಗೆ ಪ್ರೋತ್ಸಾಹ ಧನ, ಹಾಲಿನ ದರ ಹೆಚ್ಚಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿದ್ದೇವೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಗೆ ರೈತರ ಕಷ್ಟ ಗೊತ್ತಿಲ್ಲ. ಅವರು ಸಗಣಿ ಎತ್ತಿಲ್ಲ, ಹಾಲಿನ ದರ ಹೆಚ್ಚಳವಾದರೆ ವಿಧಾನಸೌಧದ ಮುಂದೆ ಬಂದು ಧರಣಿ ಮಾಡುತ್ತೇನೆ ಎಂದು ಹೋರಾಟ ಮಾಡುತ್ತಾರೆ. ರೈತರ ಕಷ್ಟ ಆರ್.ಅಶೋಕ್‌ಗೆ ತಿಳಿಯಬೇಕು. ಮಾಗಡಿಯಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು ಕೆಂಪೇಗೌಡರ ಊರಾಗಿದ್ದ ಕೆಂಪಸಾಗರವನ್ನು ಡಿ.ಕೆ. ಸುರೇಶ್ ದತ್ತು ಪಡೆದು ಅಭಿವೃದ್ಧಿ ಮಾಡಬೇಕು. ಈ ಬಜೆಟ್‌ನಲ್ಲಿ ಸೋಮೇಶ್ವರ ದೇವಸ್ಥಾನಕ್ಕೆ ₹ 100 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಮೂಲ್ ನಿರ್ದೇಶಕ ಎಚ್. ಎನ್.ಅಶೋಕ್, ಬಮೂಲ್ ಉಪಾಧ್ಯಕ್ಷ ಕೆಇಬಿ ರಾಜಣ್ಣ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬೆಲಗುಂಬ ಡೈರಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ರಾಜಣ್ಣ, ಮುಖಂಡರಾದ ಜೆ.ಪಿ.ಚಂದ್ರೇಗೌಡ, ಚಿಗಳೂರು ಗಂಗಾಧರ್, ಕೆಂಪಸಾಗರ ರಮೇಶ್, ಕಾಂತರಾಜು, ಲೋಕೇಶ್, ಕೋಟಪ್ಪ, ಶಿವಪ್ರಸಾದ್, ಚಿಕ್ಕರಾಜು, ಚಿಕ್ಕಣ್ಣ, ಬೋರ್ ವೆಲ್ ನರಸಿಂಹಯ್ಯ, ಅಶೋಕ್, ರಾಮಣ್ಣ, ಚಕ್ರಬಾವಿ ಪಂಚಾಕ್ಷರಿ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಉದ್ಘಾಟಿಸಿದರು. ಶಾಸಕ ಬಾಲಕೃಷ್ಣ, ಬಮೂಲ್ ನಿರ್ದೇಶಕ ಎಚ್. ಎನ್.ಅಶೋಕ್, ಬಮೂಲ್ ಉಪಾಧ್ಯಕ್ಷ ಕೆಇಬಿ ರಾಜಣ್ಣ ಇತರರಿದ್ದರು.