ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಅನ್ನುವುದು ವಿದ್ಯುತ್ ಉತ್ಪಾದನೆ ವಿಚಾರ ಅಲ್ಲ, ಇದು ಬೆಂಗಳೂರಿಗೆ ನೀರು ನೀಡುವುದಾಗಿದೆ ಎಂದು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಹೇಳಿದರು.

ತಾಲೂಕಿನ ಗೇರುಸೊಪ್ಪಾದ ಬಂಗಾರಮಕ್ಕಿಯಲ್ಲಿ ನಡೆದ ಪಶ್ಚಿಮ ಘಟ್ಟ ಸಂರಕ್ಷಣೆ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತು ವಿಚಾರ ಸಂಕಿರಣ, ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾಣ ಕುರುಡು, ಜಾಣ ಕಿವುಡು ಅನ್ನುವುದನ್ನು ಇಂಧನ ಸಚಿವರು ಹಾಗೂ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಆಗಿದೆ. ಆದರೂ ನಾವು ಹಿಡಿದ ಕೆಲಸ ಬಿಡುವುದಿಲ್ಲ ಎಂದು ರಾಜಕಾರಣಿಗಳಿಗೆ ತಿವಿದರು.

ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯಿಂದ ಮೂರು ವಿದ್ಯುತ್ ವಿದ್ಯುತ್ ನಿಗಮಗಳಿಗೆ ₹80 ಸಾವಿರ ಕೋಟಿ ಹೊರೆಯಾಗುತ್ತದೆ. ಅಹವಾಲು ಸಭೆಯಲ್ಲಿ ಚರ್ಚೆಯಾದ ಬಳಿಕ ಕೆಲವು ವಿಚಾರ ಬೆಳಕಿಗೆ ಬಂದಿದೆ. ಕೆಲವರು ಎಸಿ ರೂಂನಲ್ಲಿ ಕುಳಿತು ಯೋಜನೆ ತಯಾರಿಸಿದ್ದಾರೆ. ಯೋಜನೆಗಳಿಗೆ ಒಪ್ಪಿಗೆ ನೀಡಿ, ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ವಿರೋಧಿಸುತ್ತೇವೆ. ನಾವು ಯಾವುದೇ ಕಾರಣಕ್ಕೂ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ. ಪಶ್ಚಿಮ ಘಟ್ಟದ 38 ಯೋಜನೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸೆ. ೬ರಂದು ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಆರು ರಾಜ್ಯಗಳ ಪ್ರಮುಖರನ್ನು ಮತ್ತು ಯುನೆಸ್ಕೋ ಅಧಿಕಾರಿಗಳು ಬರಲಿದ್ದಾರೆ. ಜನಾಂದೋಲನ ಆಗಲಿದೆ ಎಂದರು.ಕಾರ್ಯಕ್ರಮದಲ್ಲಿ ವಿಚಾರವನ್ನು ಮಂಡಿಸಿದ ಪರಿಸರ ತಜ್ಞ ಅಖಿಲೇಷ್ ಚಿಪ್ಪಳಿ, ಪರಿಸರ ಸೇವೆಗಳು, ಜೀವ ವೈವಿಧ್ಯ, ಮಾನವ ನಿರ್ಮಿತ ವಿಪತ್ತು, ಅಭಿವೃದ್ಧಿ ಯೋಜನೆ ಮರುಚಿಂತನೆ ಎಂಬ ವಿಚಾರ ಪ್ರಸ್ತುತಪಡಿಸಿದರು. ಪಶ್ಚಿಮ ಘಟ್ಟ ಉಳಿಸಿದರೆ ಭವಿಷ್ಯ. ಇಲ್ಲದಿದ್ದರೆ ಸರ್ವನಾಶ. ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಅಷ್ಟೇ ಅಲ್ಲ. ದಕ್ಷಿಣ ಭಾರತದ ಜೀವನಾಡಿ. ಆದರೆ ಅಭಿವೃದ್ಧಿ ಎಂಬ ಪದದಿಂದ ಅನಾಚಾರ ಆಗುತ್ತಿದೆ. ಪ್ರಕೃತಿಯಲ್ಲಿ ಅಸಹಜ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಹವಾಮಾನ ಬದಲಾವಣೆ ಎನ್ನುವುದು ಹೋಗಿ ತುರ್ತು ಪರಿಸ್ಥಿತಿ ಬಂದಿದೆ ಎಂದರು.

ಚಿಕ್ಕಮಗಳೂರಿನ ವಕೀಲ ವೀರೇಶ ಜಿ. ಮಾತನಾಡಿ, ವನ್ಯಜೀವಿ, ಅರಣ್ಯ, ಪರಿಸರ ಸಂರಕ್ಷಣಾ ಕಾಯ್ದೆ ಬಗ್ಗೆ ಮಾತನಾಡಿದರು. ಕಾನೂನಿನ ಪ್ರಕಾರ ಸೆಕ್ಷನ್ 29 ರಾಷ್ಟ್ರೀಯ ಅಭಯಾರಣ್ಯ ಮತ್ತು ಸಂರಕ್ಷಿತ ವಲಯದಲ್ಲಿ ಯಾವುದೇ ಯೋಜನೆ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಯೋಜನೆ ಜಾರಿ ಮಾಡಿದರೆ 3ರಿಂದ 7 ವರ್ಷ ಜೈಲು ಶಿಕ್ಷೆ ಆಗಲಿದೆ. ಒಂದು ವೇಳೆ ಯಾವುದೇ ಯೋಜನೆ ಮಾಡುವುದಾದರೆ ಪ್ರಾಣಿ ಮತ್ತು ಕಾಡಿನ ರಕ್ಷಣೆಯ ಅನುಕೂಲಕ್ಕೆ ಮಾತ್ರ ಇರಬೇಕು. ಸೆಕ್ಷನ್ 32 ರ ಪ್ರಕಾರ ಸಂರಕ್ಷಿತ ವಲಯದಲ್ಲಿ ಆಯುಧ, ಕೆಮಿಕಲ್ ಮತ್ತು ಯಾವುದೇ ಸ್ಫೋಟಕ ಬಳಸುವಂತಿಲ್ಲ. ಸ್ಪೋಟಕ ಇಲ್ಲದೆ ಈ ಯೋಜನೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಡಿಪಿಆರ್ ನೀಡುತ್ತಿಲ್ಲ. ಎಲ್ಲವನ್ನೂ ಕದ್ದು ಮುಚ್ಚಿ ಮಾಡುತ್ತಾ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ. ಶರಾವತಿ ಅರಣ್ಯವಲಯದಲ್ಲಿ 36ಕ್ಕೂ ಹೆಚ್ಚು ಸಿಂಗಳಿಕ ಗುಂಪಿದೆ. ಇಲ್ಲಿ ಕಾಂಟ್ರಾಕ್ಟರ್ ಲಾಬಿ ಎದ್ದು ಕಾಣುತ್ತಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿಲ್ಲ ಎಂದರು.ಧಾರವಾಡದ ಐಐಟಿ ಪ್ರೊಫೆಸರ್ ಶ್ರೀಪತಿ ಎಲ್.ಕೆ. ಅಭಿಪ್ರಾಯ ಮಂಡಿಸಿದರು. ಪರಿಸರ ತಜ್ಞ ಗಿರೀಶ್ ಜೆನ್ನೆ ಉಪಸ್ಥಿತರಿದ್ದರು. ಆನಂತರದಲ್ಲಿ ಪರಿಸರ ತಜ್ಞರು ಮತ್ತು ಮಾರುತಿ ಗುರೂಜಿ ಮಾಧ್ಯಮ ಸಂವಾದ ನಡೆಸಿದರು. ಶೈಲೇಶ್ ಕಾರ್ಯಕ್ರಮ ನಿರ್ವಹಿಸಿದರು.