ಸಾರಾಂಶ
ಹೆಸರು ದರ ಕುಸಿದರೂ ಬೆಂಬಲ ಖರೀದಿ ಇಲ್ಲ
ಕೇಂದ್ರ ಘೋಷಣೆ ಮಾಡಿದ್ದಕ್ಕಿಂತ ಮಾರುಕಟ್ಟೆಯಲ್ಲಿ ಕಡಿಮೆ ದರ₹8600 ಬೆಂಬಲ ಬೆಲೆ ಇದೆ
ಮಾರುಕಟ್ಟೆಯಲ್ಲಿ ₹6-7 ಸಾವಿರಕ್ಕೆ ಕೇಳೋರಿಲ್ಲಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಮಾರುಕಟ್ಟೆಯಲ್ಲಿ ಹೆಸರನ್ನು ಕೇಳುವವರೇ ಇಲ್ಲ, ಹೀಗಾಗಿ, ರೈತರು ಕೇಳಿದಷ್ಟು ಬೆಲೆಗೆ ಕೊಟ್ಟು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿಸುವಂತೆ ಆದೇಶ ಮಾಡಿದ್ದರೂ ಸಹ ಜಿಲ್ಲಾಡಳಿತ ಮುತುವರ್ಜಿ ವಹಿಸಿ, ಖರೀದಿ ಕೇಂದ್ರ ಪ್ರಾರಂಭಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯೊಂದರಲ್ಲಿಯೇ ಈ ವರ್ಷ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆದಿದ್ದು, ಹೆಸರು ಬೆಳೆ ಬಂಪರ್ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿತವಾಗಿದೆ. ಹೆಸರು ಬೆಳೆ ಬಂಪರ್ ಬರುತ್ತಿದ್ದಂತೆ ಖುಷಿಯಾಗಿದ್ದ ರೈತರು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.ಹೆಸರು ಬೆಲೆ ಪಾತಾಳಕ್ಕೆ:
ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹10 ಸಾವಿರ ಇದ್ದ ದರ ರೈತರ ಬೆಳೆ ಬರುತ್ತಿದ್ದಂತೆ ₹ 6-7 ಸಾವಿರಕ್ಕೆ ಕುಸಿದಿದೆ. ಮದ್ಯವರ್ತಿಗಳು ಅಗ್ಗದ ದರದಲ್ಲಿ ಖರೀದಿಸಿ, ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಾಲ್ಕಾರು ಸಾವಿರ ರುಪಾಯಿಗೂ ಕೆಲವು ಕಡೆ ಮಾರಾಟ ಮಾಡಲಾಗುತ್ತದೆ. ಇದರಿಂದ ರೈತರು ಗೋಳಿಡುತ್ತಿದ್ದಾರೆ.ಬೆಂಬಲ ಬೆಲೆ ಘೋಷಣೆ:
ಕೇಂದ್ರ ಸರ್ಕಾರ ಹೆಸರಿಗೆ ₹8680 ದರ ಘೋಷಣೆ ಮಾಡಿದೆ. ಈ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಕ್ಕೆ ಆದೇಶ ನೀಡಿದೆ. ಆದರೆ, ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಖರೀದಿ ಮಾಡುತ್ತಿಲ್ಲ ಎನ್ನುವ ಆರೋಪ ರೈತ ವಲಯದಿಂದ ಕೇಳಿ ಬರುತ್ತಿದೆ.ಕೇಂದ್ರ ಸರ್ಕಾರ ಆದೇಶ ಮಾಡಿದ್ದರೂ ಖರೀದಿ ಮಾಡಲು ಯಾಕೆ ಮೀನಮೇಷ ಮಾಡಲಾಗುತ್ತದೆ ಎನ್ನುವುದು ರೈತರ ಪ್ರಶ್ನೆ. ಆದರೆ, ಇದಕ್ಕೆ ಅಧಿಕಾರಿಗಳು ಹೇಳುವುದೇ ಬೇರೆ, ಖರೀದಿ ಮಾಡುವುದಕ್ಕೆ ಆದೇಶ ಬಂದಿದೆ. ಆದರೆ, ಲಾಗಿನ್ ಆಗುತ್ತಿಲ್ಲ. ಹೀಗಾಗಿ, ಸಮಸ್ಯೆಯಾಗಿದೆ ಎಂದು ಸಬೂಬು ಹೇಳುತ್ತಾರೆ ಎನ್ನುತ್ತಾರೆ ರೈತರು.
ರಾಯರಡ್ಡಿ ಪತ್ರ:ಹೆಸರು ಬೆಳೆದ ರೈತರು ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಕೂಡಲೇ ಘೋಷಿತ ಬೆಂಬಲ ಬೆಲೆಯಂತೆ ಹೆಸರು ಖರೀದಿ ಮಾಡುವಂತೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಿ ಎಂದು ತಿಳಿಸಿದ್ದಾರೆ.
ಮಧ್ಯವರ್ತಿಗಳ ಪಾಲು:ಕಳೆದ ವರ್ಷ ಹೀಗೆ ವಿಳಂಬವಾಗಿ ಖರೀದಿ ಕೇಂದ್ರ ಪ್ರಾರಂಭಿಸಿದ್ದರಿಂದ ರೈತರಿಗೆ ಆಗುವ ಲಾಭ ಮಧ್ಯವರ್ತಿಗಳಿಗೆ ಆಯಿತು. ಬಹುತೇಕ ಬೆಂಬಲ ಬೆಲೆ ಕೇಂದ್ರಗಳನ್ನು ತಡವಾಗಿ ತೆರೆಯಲಾಗುತ್ತದೆ. ಆ ವೇಳೆಗಾಗಲೇ ರೈತರು ಮಾರಿಕೊಂಡಿರುತ್ತಾರೆ. ಮಾರಿಕೊಂಡ ಬೆಳೆಗಳನ್ನು ಬೇರೆ ರೈತರ ಹೆಸರಿನಲ್ಲಿ ಮಾರಿಕೊಂಡು ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು ಎನ್ನುವುದು ರೈತರ ಆಗ್ರಹ.
ರೈತರು ಸಂಗ್ರಹಿಸಿಟ್ಟುಕೊಳ್ಳುವಷ್ಟು ಶಕ್ತಿ ಹೊಂದಿರುವುದಿಲ್ಲ. ಅಲ್ಲದೆ ಸಾಲ-ಸೋಲ ಮಾಡಿ ಬೆಳೆದಿರುವುದರಿಂದ ಬೆಳೆ ಬಂದ ತಕ್ಷಣ ಮಾರಿ, ಸಾಲ ತೀರಿಸುವ ಚಿಂತೆಯಲ್ಲಿರುತ್ತಾರೆ. ಆದ್ದರಿಂದ ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ರೈತರು ಆಗ್ರಹಿಸಿದ್ದಾರೆ.