ಪಂಚ ಗ್ಯಾರಂಟಿಗಳ ವಿಚಾರದಲ್ಲಿ ಗೊಂದಲದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಜನಸಾಮಾನ್ಯರು ಮತ್ತು ಯುವಜನರ ಹಿತಾಸಕ್ತಿ ಮರೆತಿದೆ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಂಚ ಗ್ಯಾರಂಟಿಗಳ ವಿಚಾರದಲ್ಲಿ ಗೊಂದಲದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಜನಸಾಮಾನ್ಯರು ಮತ್ತು ಯುವಜನರ ಹಿತಾಸಕ್ತಿ ಮರೆತಿದೆ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಚುನಾವಣೆ ವೇಳೆ ಮತಗಳಿಗಾಗಿ ಸಾಧಕ-ಬಾಧಕ ಯೋಚಿಸದೆ ಗ್ಯಾರಂಟಿ ಘೋಷಿಸಿದ ಸರ್ಕಾರಕ್ಕೆ ಈಗ ಅವು ಹೊರೆ ಎನಿಸುತ್ತಿವೆ. ಉಳ್ಳವರು ಗ್ಯಾರಂಟಿ ಬಿಟ್ಟುಕೊಡಿ ಎಂದು ಮುಖ್ಯಮಂತ್ರಿ ಕರೆ ನೀಡುತ್ತಿರುವುದು ಸರಿಯಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ 5,000 ಕೋಟಿ ನಾಪತ್ತೆಯಾಗಿದೆ ಎಂಬ ಆರೋಪವಿದೆ. ಸರ್ಕಾರ ಹೃದಯದಿಂದ ಜನರಿಗೆ ಸೌಲಭ್ಯ ನೀಡುತ್ತಿಲ್ಲ ಎಂದರು.

ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಚಾರದಲ್ಲಿ ಪದೇ ಪದೆ ಗೊಂದಲ ಮೂಡಿಸುವುದನ್ನು ಸರ್ಕಾರ ನಿಲ್ಲಿಸಬೇಕು. ಕೇವಲ ಮತಗಳಿಗಾಗಿ ಈ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್‌ಗೆ ಈಗ ಅವುಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪ್ರತಿದಿನ ಒಂದೊಂದು ರೀತಿ ಮಾತನಾಡಿ ಜನರನ್ನು ದಾರಿ ತಪ್ಪಿಸುವ ಬದಲು, ನಿಮ್ಮ ನಿಜವಾದ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಜನ ಸರ್ಕಾರದ ಮುಂದೆ ಭಿಕ್ಷೆಗೆ ಕೈಯೊಡ್ಡಿ ನಿಂತಿಲ್ಲ. ಹೊರೆಯಾಗಿರುವುದು ಗ್ಯಾರಂಟಿಗಳಲ್ಲ. ಬದಲಾಗಿ ಈ ಕಾಂಗ್ರೆಸ್ ಸರ್ಕಾರವೇ ರಾಜ್ಯಕ್ಕೆ ಹೊರೆ. ಈ ಹೊರೆ ಇಳಿಸಲು ಜನ ಬಯಸಿದ್ದಾರೆ ಎಂದರು.