ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರದ ಮೂಗುದಾರ ಸಲ್ಲ

| Published : Mar 27 2024, 01:05 AM IST

ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರದ ಮೂಗುದಾರ ಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರ ಮಾ.16ರಂದು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮದ 1997ರ ಕಲಂ 70ರ ಅಡಿಯಲ್ಲಿ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿ ಕೆಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನ ಸಹಕಾರಿಗಳಿಗೆ ಮರಣ ಶಾಸನ ಇದ್ದಂತೆ ಎಂದು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತಿಕರ ತಿಳಿಸಿದರು.

ಬೀದರ್: ಕರ್ನಾಟಕ ಸರ್ಕಾರ ಮಾ.16ರಂದು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮದ 1997ರ ಕಲಂ 70ರ ಅಡಿಯಲ್ಲಿ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿ ಕೆಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನ ಸಹಕಾರಿಗಳಿಗೆ ಮರಣ ಶಾಸನ ಇದ್ದಂತೆ ಎಂದು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತಿಕರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರ ಸಹಕಾರ ಚಳವಳಿಯ ಬೆಳವಣಿಗೆಗೆ ಮುಗುದಾರ ಹಾಕಲು ಹೊರಟಿದೆ ಎಂದರು.

ಠೇವಣಿಯ ಮೇಲೆ ಬಡ್ಡಿದರ ಭಾರತೀಯ ಸ್ಟೇಟ್‌ ಬ್ಯಾಂಕ್ ನೀಡುವ ಬಡ್ಡಿ ದರಕ್ಕಿಂತ ಶೇ.2ನ್ನು ಮಿರತಕ್ಕದ್ದಲ್ಲ. ಅದೆ ರೀತಿ ಸಾಲದ ಮೇಲೆ ನಿಬಂಧನೆಗಳನ್ನು ಹಾಕಿದ್ದಾರೆ. ಸಹಕಾರಿಗಳ ಹೆಚ್ಚುವರಿ ದ್ರವ್ಯ ಸಂಪನ್ಮೂಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡತಕ್ಕದ್ದು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಂಘದ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಪರಿಷ್ಕರಿಸಿ ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಡ್ಡಾಯವಾಗಿ ವರದಿ ಸಲ್ಲಿಸತ್ಕದ್ದು. ಉಪವಿಭಾಗೀಯ ಮಟ್ಟದಲ್ಲಿ ಸಹಕಾರ ಸಂಘಗಳ ನಿಬಂಧಕರು, ಜಿಲ್ಲಾ ಮಟ್ಟದಲ್ಲಿ ಉಪನಿಬಂಧಕರು, ಪ್ರಾಂತೀಯ ಮಟ್ಟದಲ್ಲಿ ಜಂಟಿ ನಿಬಂಧಕರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕವಾಗಿ ಸಹಕಾರ ಸಂಘಗಳ ಸಭೆ ಜರುಗಿಸಿ ಈ ಆದೇಶದಲ್ಲಿ ನೀಡಿರುವ ನಿರ್ದೇಶನದಂತೆ ಬಡ್ಡಿದರಗಳನ್ನು ಪರಿಷ್ಕರಿಸಿ ನಿಗದಿ ಪಡಿಸುತ್ತಿರುವ ಕುರಿತು ಪರಾಮರ್ಶಿಸುವುದು ಹಾಗೂ ಉಲ್ಲಂಘನೆ ಮಾಡುವ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿರುದ್ಧ ಕ್ರಮ ಜರುಗಿಸುವುದು. ಹೀಗೆ ಆದೇಶದಲ್ಲಿ ಸಹಕಾರ ಚಳವಳಿ ಬೆಳವಣಿಗೆಗೆ ಮಾರಕ ಅಂಶಗಳನ್ನು ಸೇರಿಸಲಾಗಿದೆ. ಇವುಗಳನ್ನು ಈ ಕೂಡಲೆ ಕೈ ಬಿಡಬೇಕು. ಅದೆ ರೀತಿ ಆದೇಶದಲ್ಲಿನ ಉಳಿದ ಅಂಶಗಳನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಸೌಹಾರ್ದ ಸಹಕಾರಿ ಕಾಯ್ದೆ ದೇಶದಲ್ಲಿಯೇ ಮಾದರಿ ಕಾಯ್ದೆಯಾಗಿದೆ. ಇದರ ನಂತರ 2008ರಲ್ಲಿ ವೈದ್ಯನಾಥನ್ ಅವರ ವರದಿಯಂತೆ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ವಾಯತ್ತ ಸ್ವಯಂ ಆಡಳಿತ ಸ್ವಯಂ ನಿಯಂತ್ರಣದ ಆಧಾರದ ಮೇಲೆ ಬೆಳೆಯಬೇಕು ಎಂದು ಹೇಳಿರುತ್ತದೆ. 2013ರಲ್ಲಿ 97ರ ಸಂವಿಧಾನ ತಿದ್ದುಪಡಿ ಮಾಡಿ ಇಲ್ಲಿಯ ಸಹಕಾರ ಸಂಘಗಳು ಉತ್ತಮವಾಗಿ ಬೆಳೆಯಬೇಕಾದರೆ ಸ್ವಯಂ ಆಡಳಿತ ಸ್ವಯಂ ನಿಯಂತ್ರಣ ಹಾಗೂ ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕು ಎಂದು ತಿಳಿಸಿದ್ದಾರೆ.

ಸಹಕಾರ ಸಂಘಗಳ ಕಾಯ್ದೆ 1959ರ ಅಡಿ ಕಾರ್ಯನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಕುರಿತು ಮತ್ತು ಸೌಹಾರ್ದ ಪತ್ತಿನ ಸಂಘಗಳ ಕುರಿತು ಮಾ.16ರಂದು ಸರ್ಕಾರವು ಹೂರಡಿಸಿರುವ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಜಯಾಂತಿಕರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಒಂದು ವೇಳೆ ಇದನ್ನು ಹಿಂಪಡೆಯದಿದ್ದಲ್ಲಿ ಸಹಕಾರಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷ ಸಂಜೀವಕುಮಾರ, ಜಗನ್ನಾಥ ಕರಂಜೆ, ಶಿವಬಸಪ್ಪ ಚನ್ನಮಲೆ, ಸಂಜಯ ಕ್ಯಾಸಾ, ಬಸವರಾಜ ಹುಡಗೆ, ಶ್ರೀಕಾಂತ ಸ್ವಾಮಿ ಸೋಲಪುರೆ, ರಾಜಶೇಖರ ನಾಗಮೂರ್ತಿ, ನಾಗಶೇಟ್ಟಿ ಪಾಟೀಲ್‌ ಇತರರು ಉಪಸ್ಥಿತರಿದ್ದರು.