ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆರು ವರ್ಷಗಳ ಬಳಿಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಮತ್ತೆ ಮುಂದಕ್ಕೆ ತಂದಿದೆ. ಈ ಯೋಜನೆಗೆ ಅಗತ್ಯವಿರುವ ಜಮೀನು ವನ್ಯಜೀವಿ ವಲಯ ವ್ಯಾಪ್ತಿಯ ಪರಿಸರದ ಸೂಕ್ಷ್ಮ ವಲಯದಲ್ಲಿರುವುದು ಕಾನೂನಿನ ಕಂಟಕ ಎದುರಾಗಿದೆ.ಡಿಸ್ನಿಲ್ಯಾಂಡ್ ಯೋಜನೆ ರೂಪುಗೊಳ್ಳುತ್ತಿರುವ ಪ್ರದೇಶ ದೇವರಾಜ, ಎಡತಿಟ್ಟು, ಪುಟ್ಟಿಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವಲಯ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದೆ. ೧೦ ನವೆಂಬರ್ ೨೦೧೭ರ ಭಾರತ ಸರ್ಕಾರದ ಗೆಜೆಟ್ ಅಧಿಸೂಚನೆ ಪ್ರಕಾರ ರಂಗನತಿಟ್ಟು ಪಕ್ಷಿಧಾಮದ ಜೊತೆಯಲ್ಲೇ ದೇವರಾಜ, ಎಡತಿಟ್ಟು, ಪುಟ್ಟಿಕೊಪ್ಪಲು, ಗೆಂಡೆ ಹೊಸಹಳ್ಳಿ ಪಕ್ಷಿಧಾಮ ಹಾಗೂ ಅರಕೆರೆ ದ್ವೀಪ ಪ್ರದೇಶ ಸೇರಿದಂತೆ ಈ ಪಕ್ಷಿಧಾಮದ ಸುಮಾರು ೨೬ ಗ್ರಾಮಗಳ ೨೮೦೪.೬೧ ಹೆಕ್ಟೇರ್ ಜಮೀನು ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿದೆ.
ಕೆಆರ್‌ಎಸ್‌ಗೆ ಹೊಂದಿಕೊಂಡಿರುವ ಬೃಂದಾವನಕ್ಕೆ ಹೊಂದಿಕೊಂಡಂತಿರುವ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಗ್ರಾಮಗಳಾದ ಪುಟ್ಟಿಕೊಪ್ಪಲು, ಚೆಲುವರಸನಕೊಪ್ಪಲು, ಅಗ್ರಹಾರ, ಅರಳಕುಪ್ಪೆ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ, ಕಾರೇಪುರ, ಕೆಂಪಲಿಂಗಾಪುರ, ಚಿಕ್ಕಯರಹಳ್ಳಿ, ಕಟ್ಟೇರಿ, ಹೊಂಗಳ್ಳಿ, ಎಡತಿಟ್ಟು, ಬಲಮುರಿ, ದುದ್ದ ಘಟ್ಟ ಪ್ರದೇಶವನ್ನು ವನ್ಯಜೀವಿ ವಲಯಕ್ಕೆ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.ಸಂರಕ್ಷಿತ ಪಕ್ಷಿಧಾಮ:
೧೯೩೯ರಲ್ಲಿ ಅಂದಿನ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ ಭಾರತದ ಪಕ್ಷಿ ವಿಜ್ಞಾನಿ ಪಿತಾಮಹ ಡಾ.ಸಲೀಂ ಅಲಿ ಅವರು ರಂಗನತಿಟ್ಟಿನ ಮಹತ್ವವನ್ನು ಕಂಡು ಈ ಪ್ರದೇಶದ ರಕ್ಷಣೆಗೆ ಅಂದಿನ ಮೈಸೂರು ಮಹಾರಾಜರಿಗೆ ಮನವಿ ಮಾಡಿಕೊಂಡಿದ್ದರು. ಮೈಸೂರು ಮಹಾರಾಜರು ಕೂಡ ಸ್ವಾತಂತ್ರ್ಯ ಪೂರ್ವದಲ್ಲೇ ರಂಗನತಿಟ್ಟಿನ ಸಂರಕ್ಷಣೆಗೆ ಕ್ರಮ ಕೈಗೊಂಡು ೧೯೪೦ರ ದಶಕದಲ್ಲೇ ರಂಗನತಿಟ್ಟನ್ನು ಸಂರಕ್ಷಿತ ಪಕ್ಷಿಧಾಮವೆಂದು ಘೋಷಿಸಿದ್ದರು.೧೯೯೮ರಲ್ಲಿ ಕರ್ನಾಟಕ ಸರ್ಕಾರ ೧೯೭೨ರ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಈ ಪಕ್ಷಿ ಕಾಶಿಯನ್ನು ಅಭಯಾರಣ್ಯವೆಂದು ಘೋಷಿಸಿತು. ಅಂದಿನ ಮೈಸೂರು ಮಹಾರಾಜರಾದ ಕಂಠೀರವ ನರಸರಾಜ ಒಡೆಯರ್ ಕಟ್ಟಿಸಿದ ಅಣೆಕಟ್ಟೆಯಿಂದ ಕಾವೇರಿ ನದಿಯಲ್ಲಿ ಅನೇಕ ಕಿರು ದ್ವೀಪಗಳು ಸಹಜವಾಗಿ ಸೃಷ್ಟಿಯಾದವು. ದ್ವೀಪಗಳು ಸ್ಥಳೀಯ ಪಕ್ಷಿಗಳಾದ ಕೊಕ್ಕರೆ, ಬೆಳ್ಳಕ್ಕಿ, ಹೆಜ್ಜಾರ್ಲೆ, ನೀರು ಕಾಗೆ ಹಾಗೂ ಇತರೆ ಜಲಪಕ್ಷಿಗಳಿಗೆ ಗೂಡು ಕಟ್ಟಲು ಮತ್ತು ತಂಗಲು ನೆಲೆಯಾದವು. ಅಲ್ಲದೆ, ದೇವರಾಜ ಎಡತಿಟ್ಟು ಮತ್ತು ಪುಟ್ಟಿಕೊಪ್ಪಲು ದ್ವೀಪಗಳಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ನಿರ್ಮಾಣ ಮಾಡಿರುವುದರಿಂದ ದೇಶ- ವಿದೇಶಗಳಿಂದ ಬರುವ ವಿವಿಧ ಜಾತಿಯ ಪಕ್ಷಿಗಳಿಗೆ ದೇವರಾಜ ಅಣೆಕಟ್ಟೆ ಆಶ್ರಯ ತಾಣವಾಗಿದೆ.
ನಿಯಮಗಳ ಉಲ್ಲಂಘನೆ:೧೯೩೯ನೇ ಇಸವಿಯಿಂದಲೂ ಕಾಲಕ್ಕೆ ಅನುಗುಣವಾಗಿ ರಂಗನತಿಟ್ಟು ಪಕ್ಷಿಧಾಮ ಸಂರಕ್ಷಣೆಗೆ, ಗೆಜೆಟ್ ನೋಟಿಫಿಕೇಷನ್‌ಅನ್ನು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸುತ್ತಿದೆ. ಆದರೆ, ಈಗಿನ ರಾಜ್ಯ ಸರ್ಕಾರ ರಂಗನತಿಟ್ಟು ಪಕ್ಷಿಧಾಮ ವ್ಯಾಪ್ತಿಯ ದೇವರಾಜ, ಯಡತಿಟ್ಟು ಮತ್ತು ಪುಟ್ಟಯ್ಯನಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವಲಯ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಹಮ್ಮಿಕೊಂಡಿರುವುದು ಉಲ್ಲೇಖದ ಗೆಜೆಟ್ ನೋಟಿಫಿಕೇಷನ್‌ನಂತೆ ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಿರುವುದು ಕಂಡುಬಂದಿದೆ.
ಅಲ್ಲದೆ, ಉದ್ದೇಶಿತ ಡಿಸ್ನಿಲ್ಯಾಂಡ್ ಯೋಜನೆಯಿಂದ ದೇವರಾಜ ಪಕ್ಷಿಧಾಮ ಸಂಪೂರ್ಣ ನಾಶವಾಗಲಿದೆ. ಇದು ಸುಪ್ರೀಂಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು.ಗೆಜೆಟ್ ನೋಟಿಫಿಕೇಷನ್‌ನಂತೆ ಗಣಿಗಾರಿಕೆ, ಕೈಗಾರಿಕೆ, ಕಿರು ಜಲವಿದ್ಯುತ್ ಯೋಜನೆ, ಕೋಳಿ ಫಾರಂ, ಇಟ್ಟಿಗೆ ಕಾರ್ಖಾನೆ, ಸಾಮಿಲ್‌ಗಳನ್ನು ನಡೆಸುವ ಬಗ್ಗೆ ನಿಷೇಧವಿದ್ದರೂ ಕೂಡ ನಿಯಮಬಾಹೀರವಾಗಿ ಪರಿಸರ ಸೂಕ್ಷ್ಮವಲಯ ವಿರೋಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, ಹೋಟೆಲ್ ಮತ್ತು ರೆಸಾರ್ಟ್‌ಗಳು ಒಂದು ಕಿಮೀ ಸೂಕ್ಷ್ಮ ಪರಿಸರ ವ್ಯಾಪ್ತಿಯ ಹೊರಗಿರಬೇಕಿದ್ದರೂ ಇಚ್ಛಾನುಸಾರ ಅನುಮತಿ ನೀಡಲಾಗಿದೆ.
ಈ ಸೂಕ್ಷ್ಮವಲಯದಲ್ಲಿ ಈಜಾಡುವುದು, ಮೀನುಗಳನ್ನು ಹಿಡಿಯುವುದು, ಮದ್ಯ, ಮಾಂಸಹಾರದ ಸೇವನೆ, ಫೈರಿಂಗ್ ಮಾಡುವುದನ್ನು ನಿಷೇಧಿಸಿದ್ದರೂ ಇವೆಲ್ಲವೂ ರಾಜಾರೋಷವಾಗಿ ನಡೆಯುತ್ತಿವೆ. ಇದರಿಂದ ರಂಗನತಿಟ್ಟು, ಯಡತಿಟ್ಟು, ದೇವರಾಜ ಕಟ್ಟೆ, ಪುಟ್ಟಯ್ಯನ ಕೊಪ್ಪಲು, ಗೆಂಡೆಹೊಸಹಳ್ಳಿ, ಅರಕೆರೆ ಪಕ್ಷಿಧಾಮ ಅವನತಿಯ ಅಂಚಿಗೆ ಬಂದಿವೆ. ಇವುಗಳ ಜೊತೆಗೆ ಡಿಸ್ನಿಲ್ಯಾಂಡ್ ಭೂತ ಈಗ ಎದ್ದು ನಿಂತಿದೆ.ಯೋಜನೆ ಕೈ ಬಿಡಲು ಆಗ್ರಹ:
ಗೆಜೆಟ್ ನೋಟಿಫಿಕೇಷನ್‌ನಂತೆ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಬರುವ ರಂಗನತಿಟ್ಟು ಪಕ್ಷಿಧಾಮ, ದೇವರಾಜ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಗೆಂಡೆಹೊಸಹಳ್ಳಿ, ಅರಕೆರೆ ದ್ವೀಪಗಳ ೨೬ ಗ್ರಾಮಗಳ ವ್ಯಾಪ್ತಿಯ ೨೮೦೪ ಹೆಕ್ಟೇರ್ ಪ್ರದೇಶ ಜಮೀನು (೬,೧೪೨ ಎಕರೆ) ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦, ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨, ಪರಿಸರ ಸಂರಕ್ಷಣಾ ಕಾಯ್ದೆ ೧೯೮೬, ಜಲ ಸಂರಕ್ಷಣಾ ಕಾಯ್ದೆ ಮತ್ತು ಇತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆ, ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಒಳಪಡುವುದರಿಂದ ಉದ್ಧೇಶಿತ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಕೈಬಿಡುವಂತೆ ಕೆ.ಆರ್. ರವೀಂದ್ರ ಆಗ್ರಹಿಸಿದ್ದಾರೆ.-----------
2018ರಲ್ಲೇ ಯೋಜನೆಗೆ ಸರ್ವೇ ಕಾರ್ಯಕನ್ನಡಪ್ರಭ ವಾರ್ತೆ ಮಂಡ್ಯ
ವಿರೋಧದ ನಡುವೆಯೂ ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಜಾರಿಗೊಳಿಸಲು ೨೦೧೮ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಅಣೆಕಟ್ಟು ಸುತ್ತಮುತ್ತ ಎಷ್ಟು ಎಕರೆ ಸರ್ಕಾರಿ ಜಾಗವಿದೆ, ಇತರೆ ಜಾಗಗಳು ಎಷ್ಟಿದೆ ಎಂಬುದನ್ನು ಸರ್ವೇ ಅಧಿಕಾರಿಗಳು ಗುರುತಿಸುವ ಕೆಲಸಕ್ಕೆ ಮುಂದಾಗಿದ್ದರು. ನಕ್ಷೆ ಮೂಲಕ ಅಳತೆ ಮಾಡಿಸಿ ಗುರುತು ಮಾಡುವ ಕೆಲಸ ಚುರುಕಿನಿಂದ ಸಾಗಿತ್ತು.
ಆ ಸಮಯದಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಸ್ಥಳೀಯರು ಹಾಗೂ ಪ್ರಗತಿಪರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಯೋಜನೆ ಜಾರಿಗೊಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ರಾಜ್ಯಸರ್ಕಾರ ಜಿಲ್ಲಾಡಳಿತದ ಮೂಲಕ ಯೋಜನೆ ರೂಪು-ರೇಷೆಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಲಾಗಿತ್ತು.ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ ಹೊರ ಆವರಣದಲ್ಲಿ ಜಾಗ ಗುರುತಿಸುವ ಕಾರ್ಯದಲ್ಲಿ ಸರ್ವೇ ಅಧಿಕಾರಿಗಳು ನಿರತರಾಗಿದ್ದರು. ವಿರೋಧವನ್ನು ಲೆಕ್ಕಿಸದೆ ಸರ್ವೇ ಕಾರ್ಯ ನಡೆಸುತ್ತಿರುವುದರಿಂದ ಸ್ಥಳೀಯರು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳಾಂತರ ಆತಂಕ:ಮೇಲ್ನೋಟಕ್ಕೆ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಅಗತ್ಯವಿರುವಷ್ಟು ಸರ್ಕಾರಿ ಭೂಮಿ ಕೆಆರ್‌ಎಸ್ ಸುತ್ತಮುತ್ತ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೊಂಗಳ್ಳಿ, ಚಿಕ್ಕಆಯರಳ್ಳಿ, ನಾರ್ಥ್‌ಬ್ಯಾಂಕ್ ಸುತ್ತಲಿನ ಗ್ರಾಮಗಳ ಜನರಿಗೆ ಭೂಮಿ ವಶಪಡಿಸಿಕೊಳ್ಳುವ ಆತಂಕದ ಜೊತೆಗೆ ಸ್ಥಳಾಂತರದ ಭೀತಿಯೂ ಕಾಡುತ್ತಿದೆ. ಆರಂಭದಲ್ಲಿ ಗುಳೆ ಎಬ್ಬಿಸುವ ಪ್ರಯತ್ನಗಳು ನಡೆಯದಿದ್ದರೂ ಆನಂತರದಲ್ಲಿ ತೆರವುಗೊಳಿಸಬಹುದೆಂಬ ಆತಂಕ ಗ್ರಾಮಸ್ಥರಲ್ಲಿದೆ.