ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಸ್ವಾಗತಿಸಲು ಕಾಲು ನೋವಿನ ನಡುವೆಯೂ ಸುಮಾರು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಎದುರು ನಿಂತೇ ಇದ್ದರು.ಮತ್ತೊಂದೆಡೆ ವ್ಹೀಲ್‌ಚೇರ್ ಮೂಲಕ ಹರಸಾಹಸ ಪಟ್ಟು ವಿಧಾನಸಭೆ ಸಭಾಂಗಣಕ್ಕೆ ಪ್ರವೇಶಿಸಿದ ಸಿದ್ದರಾಮಯ್ಯ ಅವರಿಗಾಗಿ ರಾಜ್ಯಪಾಲರರು ಸದನದ ಬಾವಿ ಬಳಿಯೇ ನಿಂತು ಕಾದರು. ತನ್ಮೂಲಕ ಇಬ್ಬರೂ ನಾಯಕರು ಪರಸ್ಪರ ಗೌರವ, ಅಭಿಮಾನ ಮೆರೆದರು.ನಿಂತೇ ಭಾಷಣ ಮಾಡಿದ ಸಿಎಂಸಂತಾಪ ಸೂಚನೆ ನಿರ್ಣಯದ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿನ ನೋವಿನ ನಡುವೆಯೇ ಸುಮಾರು 20 ನಿಮಿಷಗಳ ಕಾಲ ನಿಂತೇ ಭಾಷಣ ಮಾಡಿದರು. ವಾಕಿಂಗ್ ಸ್ಟಿಕ್ ಹಿಡಿದು
ಬಂದ ಸುರೇಶ್ ಕುಮಾರ್‌ಮಾಜಿ ಸಚಿವ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಸಹ ವಾಕಿಂಗ್ ಸ್ಟಿಕ್ ಹಿಡಿದು ವಿಧಾನಸಭೆಗೆ ಆಗಮಿಸಿದರು. ರಾಜ್ಯಪಾಲರ ಭಾಷಣ ಮುಗಿದ ತಕ್ಷಣ ಹೊರಟು ಹೋದರು. ಇದೇ ವೇಳೆ ಕಾರು ಅಪಘಾತದಿಂದ ಚೇತರಿಸಿಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಸದನಕ್ಕೆ ಆಗಮಿಸಿದ್ದರು.ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಸ್ವಾಗತಿಸಲು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾದು ನಿಂತಿದ್ದರು.ತೀವ್ರ ಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ಸುಮಾರು 10 ನಿಮಿಷಗಳ ಕಾಲ ನಿಂತೇ ಇದ್ದರು. ಬಳಿಕ ರಾಜ್ಯಪಾಲರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಅವರು ಕೆಲ ನಿಮಿಷ ಉಭಯಕುಶಲೋಪರಿ ವಿಚಾರಿಸಿದರು.
ಇದೇ ವೇಳೆ ತೀವ್ರ ನೋವಿನ ಸಮಸ್ಯೆ ಅನುಭವಿಸಿದ ಮುಖ್ಯಮಂತ್ರಿಗಳು ರಾಜ್ಯಪಾಲರು, ಸ್ಪೀಕರ್ ಅವರೆಲ್ಲರೂ ಮಾತನಾಡುತ್ತಿರುವಾಗಲೇ ತಮ್ಮ ಕಾರಿನ ಬಳಿಗೆ ತೆರಳಿ ಕಾರಿನಲ್ಲಿ ಕುಳಿತುಬಿಟ್ಟರು. ಸಿದ್ದರಾಮಯ್ಯ ಅವರ ಕಾಲಿನ ನೋವು ಅರಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರಿನ ಬಳಿಗೆ ಹೋಗಿ ಕಾಲು ಮುಟ್ಟಿ ಆರೋಗ್ಯ ವಿಚಾರಿಸಿದರು.ಬಳಿಕ ಕಾರಿನಲ್ಲೇ ವಿಧಾನಸೌಧದ ಪ್ರವೇಶ ದ್ವಾರ ತಲುಪಿದ ಅವರು ಬಳಿಕ ವ್ಹೀಲ್‌ಚೇರ್ ಮೂಲಕ ಲಿಫ್ಟ್ ಬಳಿಗೆ ತೆರಳಿ ಮೊದಲ ಮಹಡಿಯಲ್ಲಿದ್ದ ವಿಧಾನಸಭೆ ಬಳಿಗೆ ತೆರಳಿದರು. ವಿಧಾನಸಭೆ ಆವರಣಕ್ಕೆ ಪ್ರವೇಶಿಸಲು ಎರಡು ಕಡೆ ಮೆಟ್ಟಿಲಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ರ್‍ಯಾಂಪ್ ಮೂಲಕ ಪ್ರಯಾಸಪಟ್ಟು ವಿಧಾನಸಭೆ ಪ್ರವೇಶಿಸಿದರು.
ಸಭಾಧ್ಯಕ್ಷರು, ಸಭಾಪತಿ ಹಾಗೂ ಉಪಮುಖ್ಯಮಂತ್ರಿಗಳ ಜತೆ ಮುಖ್ಯದ್ವಾರದ ಮೂಲಕ ವಿಧಾನಸಭೆ ಪ್ರವೇಶಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ ಅವರ ಕೈ ಕುಲುಕಿ ಡಾ.ಜಿ.ಪರಮೇಶ್ವರ್ ಅವರ ಬಳಿ ನಿಂತು ಕೆಲ ಕಾಲ ಮಾತನಾಡಿದರು.ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಸಭಾಂಗಣದ ಹತ್ತಿರದವರೆಗೆ ವ್ಹೀಲ್‌ಚೇರ್‌ನಲ್ಲಿ ಬಂದು ಒಳಗೆ ವಾಕಿಂಗ್ ಸ್ಟಿಕ್ ಹಿಡಿದು ನಡೆದು ಬಂದರು. ಅಲ್ಲಿಯವರೆಗೆ ಮುಖ್ಯಮಂತ್ರಿಗಳ ಕುರ್ಚಿಯ ಬಳಿಯೇ ಕಾಯುತ್ತಿದ್ದ ರಾಜ್ಯಪಾಲರು ಕೈ ಕುಲುಕಿ ಬಳಿಕ ಸಭಾಧ್ಯಕ್ಷರ ಪೀಠದ ಮೇಲೆ ತೆರಳಿದರು. ನಂತರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ಕಾಲಿನ ನೋವಿನ ನಡುವೆಯೂ ನಿಂತೇ ರಾಜ್ಯಪಾಲರನ್ನು ಸ್ವಾಗತಿಸಲು ಕಾದ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರ ಬರುವಿಕೆವರೆಗೂ ಕಾದು ನಿಂತ ರಾಜ್ಯಪಾಲರ ನಡೆಗೆ ಪ್ರಶಂಸೆ ವ್ಯಕ್ತವಾಯಿತು.