ಕನ್ನಡಪ್ರಭ ವಾರ್ತೆ ಕೆಜಿಎಫ್

ನಗರದ ಪ್ರಸಿದ್ಧ ಲಕ್ಷ್ಮೀ ವೆಂಕಟರಮಣಸ್ವಾಮಿಯ ೯೧ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ಮೊದಲಿಯಾರ್ ಸಮುದಾಯದ ವತಿಯಿಂದ ಏರ್ಪಡಿಸಲಾಗಿದ್ದ ಪುಷ್ಪಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.

ಕಳೆದ ೯೧ ವರ್ಷಗಳಿಂದ ಮೊದಲಿಯಾರ್ ಸಮುದಾಯದವರು ನಡೆಸಿಕೊಂಡು ಬರುತ್ತಿರುವ ಪುಷ್ಪ ಪಲ್ಲಕ್ಕಿ ಉತ್ಸವ ಶನಿವಾರ ರಾತ್ರಿ ೧೧ ಗಂಟೆಗೆ ಪ್ರಾರಂಭವಾಯಿತು. ಪುಷ್ಪ ಪಲ್ಲಕ್ಕಿ ಉತ್ಸವವು ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರೆಯ ೧೧ನೇ ದಿನದಂದು ನಡೆಯುವ ಉತ್ಸವವಾಗಿದ್ದು, ಪುಷ್ಪ ಪಲ್ಲಕ್ಕಿ ಜೊತೆಗೆ ತಾಲೂಕಿನ ವಿವಿಧೆಡೆಗಳಿಂದ ೨೦ಕ್ಕೂ ಹೆಚ್ಚು ದೇವತೆಗಳ ಉತ್ಸವಗಳು ನಗರದ ಗೀತಾ ರಸ್ತೆ, ಸೂರಜ್ ಮಹಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ ರಸ್ತೆ ಮೂಲಕ ಸಾಗಿ ಸತತ ೧೦ ಗಂಟೆಗಳ ಕಾಲ ಮೆರವಣಿಗೆ ನಡೆಸಿ ಅಂತಿಮವಾಗಿ ವೆಂಕಟರಮಣ ದೇವಾಲಯವನ್ನು ಭಾನುವಾರ ಬೆಳಗ್ಗೆ ೯ ಗಂಟೆಗೆ ತಲುಪಿದವು.

ಶ್ರೀ ಪ್ರಸನ್ನಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ೧೧ನೇ ದಿನದ ಪುಷ್ಪ ಪಲ್ಲಕ್ಕಿ ಉತ್ಸವಕ್ಕೆ ಮಲ್ಲಿಗೆ, ಕನಕಾಂಬರ ಸೇರಿ ಸರಿ ಸುಮಾರು ಎರಡು ಟನ್‌ಗೂ ಹೆಚ್ಚಿನ ಹೂವುಗಳಿಂದ ಪುಷ್ಪ ಪಲ್ಲಕ್ಕಿಯನ್ನು ಜೋಡಿಸಿರುವುದು ವಿಶೇಷವಾಗಿತ್ತು. ಸುಮಾರು ೫ ರಿಂದ ೬ ಟನ್ ತೂಕವುಳ್ಳ ನಾನಾ ರೀತಿಯ ಪುಷ್ಪ ಪಲ್ಲಕ್ಕಿಯನ್ನು ಗೋವಿಂದ ಗೋವಿಂದ ಎಂಬ ನಾಮಸ್ಮರಣೆ ಮಾಡುತ್ತಾ ನೂರಾರು ಭಕ್ತಾದಿಗಳು ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಸಾಗುವ ದೃಶ್ಯ ನೆರೆದಿದ್ದ ಸಹಸ್ರಾರು ಭಕ್ತರನ್ನು ರೋಮಾಂಚನಗೊಳಿಸಿ ಮೈನವಿರೇಳಿಸುವಂತೆ ಮಾಡಿತು.

ರಸ್ತೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಕಾಲಿಡಲು ಸಹ ಸಾಧ್ಯವಾಗದಷ್ಟು ಜನದಟ್ಟಣೆ ಕಂಡುಬಂದಿತು. ಜಾತ್ರೆ ಹಿನ್ನೆಲೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ನಗರಕ್ಕೆ ಆಗಮಿಸಿ ಸೂರಜ್‌ಮಹಲ್ ವೃತ್ತದಿಂದ ವೆಂಕಟೇಶ್ವರ ದೇವಾಲಯದವರೆಗೆ ಗೀತಾ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳನ್ನು ತೆರೆದಿದ್ದು, ಇಡೀ ರಾತ್ರಿ ಅಕ್ಷರಶಃ ಕೆಜಿಎಫ್ ಜನತೆ ನಿದ್ದೆ ಮಾಡದೇ ದೈವ ಜಪ ಮಾಡಿದರು.


ನಗರದ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆ ಅಂಗವಾಗಿ, ಪುಷ್ಪ ಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ನೂರಾರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಅಂದಾಜು 2 ಲಕ್ಷಕ್ಕೂ ಹೆಚ್ಚು ಭಕ್ತರು ಪುಷ್ಪಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು, ಸಂಜೆ ೯ ಗಂಟೆಗೆ ಪ್ರಾರಂಭವಾದ ಪುಷ್ಪ ಪಲ್ಲಕ್ಕಿ ಉತ್ಸವ ಮರು ದಿನ ಬೆಳಗ್ಗೆ ೯ ಗಂಟೆಗೆ ದೇವಾಲಯದ ಆವರಣಕ್ಕೆ ತಲುಪುವರಿಗೂ ಎಸ್ಪಿ ಶಿವಾಂಶು ರಜಪೂತ್ ಅವರು ಕರ್ತವ್ಯ ನಿರ್ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಕಾಲ ಮದ್ಯದ ಅಂಗಡಿ ಬಂದ್:

ನಗರದ ೪ ಕಿಮೀ ವ್ಯಾಪ್ತಿಯಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು, ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲಕರವಾಗಿತ್ತೆಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದರು.

ಕೆಜಿಎಫ್‌ನ ಬ್ರಹ್ಮರಥೋತ್ಸವದ ವಿಶೇಷ ಏನು?:

ರಾಜ್ಯದಲ್ಲಿ ಎಲ್ಲ ಸಮುದಾಯಗಳು ಒಟ್ಟಿಗೆ ಸೇರಿಕೊಂಡು ಜಾತ್ರೆ ಮಾಡುವ ಉದಾಹರಣೆಯಿಲ್ಲ, ಕೆಜಿಎಫ್ ನಗರದಲ್ಲಿ ಎಲ್ಲ ಸಮುದಾಯಗಳು ಒಟ್ಟಿಗೆ ಸೇರಿಕೊಂಡು ಜಾತ್ರೆ ನಡೆಸುವುದು ವಿಶೇಷ. ರೆಡ್ಡಿ ಸಮುದಾಯ, ಒಕ್ಕಲಿಗ ಸಮುದಾಯ, ಬಲಿಜ ಸಮುದಾಯ, ನಾಯ್ಡು ಸಮುದಾಯ, ಆರ‍್ಯ ವೈಶ್ಯ, ಬ್ರಾಹ್ಮಣ, ಬ್ರಹ್ಮರಥೋತ್ಸವ (ಮುಜರಾಯಿ ಇಲಾಖೆಯಿಂದ) ಮರಾಠ ಸಮುದಾಯ, ಮಲಯಾಳಿ ಸಮುದಾಯ, ಎಸ್ಸಿ, ಎಸ್ಟಿ ಸಮುದಾಯ, ಮೊದಲಿಯರ್ ಸಮುದಾಯ, ಸವಿತಾ ಸಮುದಾಯ ಸೇರಿ ಒಟ್ಟು ೧೧ ದಿನಗಳ ಕಾಲ ನಡೆಯುವ ಬ್ರಹ್ಮರಥೋತ್ಸವ ನಡೆಸಿಕೊಡುತ್ತಾರೆ.

೧೧ ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವ ಕಾರ‍್ಯಕ್ರಮಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ರಂಜಿತ್‌ಕುಮಾರ್ ನಡೆಸಿಕೊಟ್ಟಿದ್ದರು, ಮುಜರಾಯಿ ಇಲಾಖೆ ಇಒ ಮಂಜುನಾಥ್ ಹಾಗೂ ಪೇಸ್ಕರ್ ಶ್ರೀನಿವಾಸರೆಡ್ಡಿ ಸಹಕಾರದೊಂದಿಗೆ ಯಶಸ್ವಿಯಾಗಿ ಜಾತ್ರೋತ್ಸವ ಮತ್ತು ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.