ಸಾರಾಂಶ
ಸಾಗರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವರ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಾಗರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವರ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಸದಸ್ಯರುಗಳು, ಜಾತ್ರೋತ್ಸವ ಸಮಿತಿ ಪ್ರಧಾನ ಸಂಚಾಲಕ ಟಿ.ವಿ.ಪಾಂಡುರಂಗ, ವಿವಿಧ ಸಮಿತಿ ಸಂಚಾಲಕರು, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಮಿಳಾ ಕುಮಾರಿ ಇನ್ನಿತರರು ಹಾಜರಿದ್ದರು.ಈ ವೇಳೆ ಮಾತನಾಡಿದ ಶಾಸಕ ಬೇಳೂರು, ಸುಮಾರು ೨ ಕೋಟಿ ರು. ವೆಚ್ಚದಲ್ಲಿ ಗಣಪತಿ ದೇವಸ್ಥಾನ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಜಾತ್ರೆ ಬಳಿಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ. ಶಿಲಾಮಯವಾದ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹಾಗಣಪತಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ನಡೆಸಿದೆ. ಜಾತ್ರೋತ್ಸವ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ರಥೋತ್ಸವದಲ್ಲಿ ಹಿಂದಿನ ಎಲ್ಲ ವರ್ಷಗಳಿಗಿಂತ ದಾಖಲೆ ಎನ್ನುವಂತೆ ಭಕ್ತರು ಪಾಲ್ಗೊಂಡಿದ್ದಾರೆ. ಇಡೀ ದೇಶ ಸುಭಿಕ್ಷವಾಗಿರಲಿ ಎಂದು ಶ್ರೀ ಮಹಾ ಗಣಪತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.