ಶ್ರಾವಣ ಮಾಸದ ಕೊನೆಯ ದಿನ ಸೋಮವಾರ ಇತಿಹಾಸ ಪ್ರಸಿದ್ಧ ಶ್ರೀಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಚನ್ನಬಸವೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಧಾರವಾಡ:
ಶ್ರಾವಣ ಮಾಸದ ಕೊನೆಯ ದಿನ ಸೋಮವಾರ ಇತಿಹಾಸ ಪ್ರಸಿದ್ಧ ಶ್ರೀಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಚನ್ನಬಸವೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.ಸಂಜೆ 4ಕ್ಕೆ ನಡೆದ ರಥೋತ್ಸವದಲ್ಲಿ ಸುಳ್ಳದ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಯಾದವಾಡ ಆನಂದಧಾಮ ಸಿದ್ಧಾರೂಢ ಮಠದ ಡಾ. ಆನಂದ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ದೇವಸ್ಥಾನದದಿಂದ ಹೊರಟ ರಥವು ಉಳವಿ ಚನ್ನಬಸವೇಶ್ವರ ವರ್ತುಳ ಹಾಗೂ ಹಿಂದಿ ಪ್ರಚಾರ ಸಭಾ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊಂಡಿತು. ರಥೋತ್ಸವದುದ್ದಕ್ಕೂ ಭಕ್ತರು ಭಾರತ ದೇಶ, ಜೈ ಚನ್ನಬಸವೇಶ ಹರ...ಹರ... ಮಹಾದೇವ ಎಂಬ ಘೋಷಣೆ ಕೂಗಿದರು. ಜಾತ್ರಾ ಮಹೋತ್ಸವದಲ್ಲಿ ಹೆಜ್ಜೆ ಮೇಳ, ಭಜನಾ ತಂಡ, ಜಗ್ಗಲಗಿ, ಕರಡಿ ಮಜಲು, ಕಲಾಮೇಳಗಳು ಭಾಗವಹಿಸಿದ್ದವು. ಅಲ್ಲದೇ ನೆರೆದಿದ್ದ ಅಪಾರ ಜನಸ್ತೋಮವು ರಥಕ್ಕೆ ಹಣ್ಣು, ಉತ್ತತ್ತಿ, ಬಾಳೆ, ಕಿತ್ತಳೆ ಫಲ-ಪುಷ್ಪ ಸಮರ್ಪಿಸಿ ಭಕ್ತಿಯ ಸಾಗರದಲ್ಲಿ ಮಿಂದೆದ್ದರು.ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಚನ್ನಬಸವೇಶ್ವರ ದರ್ಶನ ಪಡೆದು ಮಹಾಪ್ರಸಾದದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಧರ್ಮದರ್ಶಿಗಳಾದ ವಿಜಯೇಂದ್ರ ಪಾಟೀಲ, ಟಿ.ಎಸ್. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಸುರೇಶ ಹೆಗ್ಗೇರಿ, ಶಂಕರ ಪಾಗದ, ಸಂಜಯ ಲಕಮನಹಳ್ಳಿ, ಜಿ.ಟಿ. ಶಿರೋಳ ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು