ಸರ್ಕಾರಿ ಶಾಲೆಗೆ ಮುತ್ತಜ್ಜ ದಾನ ನೀಡಿದ ಭೂಮಿ ವಾಪಸ್‌ ಕೇಳುತ್ತಿರುವ ಮೊಮ್ಮಗ

| Published : Feb 20 2024, 01:49 AM IST

ಸರ್ಕಾರಿ ಶಾಲೆಗೆ ಮುತ್ತಜ್ಜ ದಾನ ನೀಡಿದ ಭೂಮಿ ವಾಪಸ್‌ ಕೇಳುತ್ತಿರುವ ಮೊಮ್ಮಗ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ಭೂಮಿಗಾಗಿ ಹೊನ್ನಪ್ಪ ಅವರ ಮೊಮ್ಮಗ ತಕರಾರು ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಶಾಲೆಯ ಎಸ್‌ಡಿಎಂಸಿ ದೂರು ಸಲ್ಲಿಸಿ, ಶಾಲೆಗೆ ಸರ್ಕಾರಿ ಶಾಲೆ ಉಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಕುಕನೂರು: ಸರ್ಕಾರಿ ಶಾಲೆಗೆ ಮುತ್ತಜ್ಜ ದಾನ ನೀಡಿರುವ ಭೂಮಿಯನ್ನು ಈಗ ಮೊಮ್ಮಗ ಅದನ್ನು ತನಗೆ ವಾಪಸ್‌ ನೀಡುವಂತೆ ಕೇಳುತ್ತಿರುವ ಪ್ರಕರಣವೊಂದು ತಾಲೂಕಿನ ಸೋಂಪೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆ ಆರಂಭವಾಗಿದ್ದು, ಸದ್ಯ ಭೂಮಿಗಾಗಿ ಹೊನ್ನಪ್ಪ ಅವರ ಮೊಮ್ಮಗ ತಕರಾರು ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಶಾಲೆಯ ಎಸ್‌ಡಿಎಂಸಿ ದೂರು ಸಲ್ಲಿಸಿ, ಶಾಲೆಗೆ ಸರ್ಕಾರಿ ಶಾಲೆ ಉಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಗ್ರಾಮದ ಹೊನ್ನಪ್ಪ ಕಾಟೆವಾಡಿ ಎಂಬವರು 1935ರಲ್ಲಿ ಅಲ್ಲಿನ ಸರ್ಕಾರಿ ಶಾಲೆಗೆ ಸುಮಾರು 27 ಗುಂಟೆ (ಸರ್ವೆ ನಂ.321/4) ಜಾಗವನ್ನು ಭೂದಾನ ಮಾಡಿದ್ದಾರೆ. ಆಗ ಪಹಣಿ ಕೈ ಬರಹದಲ್ಲಿದೆ. ಸದ್ಯ ಹೊನ್ನಪ್ಪ ಅವರ ಮೊಮ್ಮಗ ಮಾರುತಿ ಕಾಟೆವಾಡೆ ಈ ಸರ್ವ ನಂ. ಪಹಣಿಯನ್ನು ತಮ್ಮ ಹೆಸರಿನಲ್ಲಿ ಮಾಡಿಸಿಕೊಂಡು ಜಾಗ ಬಿಟ್ಟು ಕೊಡಿ ಎಂದು ತಕರಾರು ಮಾಡಿದ್ದಾರೆ.

ಹಿಂದೆ ಶೈಕ್ಷಣಿಕ ಅಭಿವೃದ್ಧಿಗೆ ಭೂ ದಾನ ಮಾಡಲಾಗಿದ್ದು, ಆ ದಾನಪತ್ರ ಸಹ ಸದ್ಯ ಶಾಲೆಯಲ್ಲಿ ಈಗಿಲ್ಲ. ಸುಮಾರು 7 ದಶಕಗಳ ನಂತರ ಮೊಮ್ಮಗ ಈ ಭೂಮಿ ನಮ್ಮದು ಎಂದು ತಕರಾರು ಮಾಡುತ್ತಿರುವುದು ಶಾಲೆಯ ಶಿಕ್ಷಕರಿಗೆ, ಶಿಕ್ಷಣ ಇಲಾಖೆಗೆ, ಎಸ್‌ಡಿಎಂಸಿ ಮಂಡಳಿಗೆ ನುಂಗಲಾರದ ತುಪ್ಪವಾಗಿದೆ. ಕುಕನೂರು ತಾಲೂಕಿನ ಗಡಿ ಗ್ರಾಮ ಸೋಂಪೂರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸ್ವಾತಂತ್ರ್ಯ ಪೂರ್ವದ ಸರ್ಕಾರಿ ಶಾಲೆ ತಡೆಗೋಡೆ, ಶೌಚಾಲಯ, ತರಗತಿ ಕೊಠಡಿ, ಅಡುಗೆ ಕೊಠಡಿಗಳಿಲ್ಲದೆ ವಂಚಿತವಾಗಿದೆ. ಶಾಲೆ ಕೊಠಡಿಗಳ್ಳಿಲ್ಲದೆ ಹಳೆ ಕೊಠಡಿಗಳಲ್ಲಿಯೇ ನಿತ್ಯ ಪಾಠವನ್ನು ಮಾಡಬೇಕಿದೆ. ಸುಮಾರು 210 ಬಡ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.ಗ್ರಾಮದ ಶಾಲೆಗೆ ಈ ಹಿಂದೆ ಭೂದಾನ ಮಾಡಲಾಗಿತ್ತು. ಆದರೆ ಸದ್ಯ ಭೂಮಾಲೀಕರು ತಮ್ಮ ಹೆಸರಿನಲ್ಲಿ ಪಹಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ಶಾಲಾ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ ಎನ್ನುತ್ತಾರೆ ಸೋಂಪೂರು ಗ್ರಾಮಸ್ಥರು.ನಮ್ಮ ಭೂಮಿಯನ್ನು ದಾನ ಮಾಡಿಲ್ಲ. ನಮ್ಮಜ್ಜ ಮಲ್ಲಪ್ಪ ಹಾಗೂ ಮುತ್ತಜ್ಜ ಹೊನ್ನಪ್ಪ ಅವರ ಗಮನಕ್ಕೂ ತರದೇ ಹಿಂದೆ ನಮ್ಮ ಭೂಮಿಯಲ್ಲಿ ಶಾಲೆ ನಿರ್ಮಾಣ ಮಾಡಲಾಗಿದೆ. ನಾನು ವಂಶಾವಳಿ ಪ್ರಕಾರ ನಮ್ಮ ಭೂಮಿಯನ್ನು ನನ್ನ ಹೆಸರಿನಲ್ಲಿ ಮಾಡಿಕೊಂಡಿದ್ದೇನೆ. ಸರ್ಕಾರ ನಮ್ಮ ಭೂಮಿಗೆ ಏನಾದರೂ ಪರಿಹಾರ ನೀಡಿದರೆ ನಾನು ಭೂಮಿ ನೀಡುತ್ತಿದ್ದೆ. ಆದರೆ ಅದರ ಬದಲು ತೊಂದರೆ ಕೊಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿರುವುದು ಮನಸ್ಸಿಗೆ ನೋವಾಗಿದೆ. ಈ ಕುರಿತು ನಾನು ಕೂಡ ನ್ಯಾಯಾಲಯದ ಮೋರೆ ಹೋಗಿದ್ದೇನೆ ಎನ್ನುತ್ತಾರೆ ಸೋಂಪೂರು ಭೂ ಮಾಲೀಕ ಮಾರುತಿ ಕಾಟೆವಾಡೆ.