ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಮುಖ್ಯ ಭಾಗ

| Published : Nov 25 2024, 01:02 AM IST

ಸಾರಾಂಶ

ಪ್ರಾಚೀನ ಭಾರತದಲ್ಲಿ ವೇದಾಧ್ಯಯನ ಸೇರಿದಂತೆ ಎಲ್ಲ ಜ್ಞಾನ ಗುರುಕುಲದಲ್ಲಿಯೇ ನಡೆಯುತ್ತಿತ್ತು. ಅಧ್ಯಯನ ಪೂರ್ಣಗೊಳಿಸಿದ ಆನಂತರ ಗುರುಗಳ ಅನುಮತಿ ಪಡೆದು ಅಲ್ಲಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದರು.

ಧಾರವಾಡ:

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದು, ಗುರು-ಶಿಷ್ಯ ಪರಂಪರೆ ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ ಎಂದು ಹಿರಿಯ ಹಿಂದುಸ್ತಾನಿ ಗಾಯಕ ಪಂ. ವೆಂಕಟೇಶಕುಮಾರ ಹೇಳಿದರು.

ಸೃಜನಾ ರಂಗಮಂದಿರದಲ್ಲಿ ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಆಯೋಜಿಸಿದ್ದ ಸೃಷ್ಟಿ ಸುರೇಶ ಅವರ ಗಂಡ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತದಲ್ಲಿ ವೇದಾಧ್ಯಯನ ಸೇರಿದಂತೆ ಎಲ್ಲ ಜ್ಞಾನ ಗುರುಕುಲದಲ್ಲಿಯೇ ನಡೆಯುತ್ತಿತ್ತು. ಅಧ್ಯಯನ ಪೂರ್ಣಗೊಳಿಸಿದ ಆನಂತರ ಗುರುಗಳ ಅನುಮತಿ ಪಡೆದು ಅಲ್ಲಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದರು. ಆಗ ಗುರು-ಶಿಷ್ಯರ ಸಂಬಂಧ ತಂದೆ, ಮಕ್ಕಳ ಸಂಬಂಧದಂತಿರುತ್ತಿತ್ತು. ಬದಲಾದ ಸಂದರ್ಭದಲ್ಲಿ ಈ ಸಂಬಂಧಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.

ಪ್ರಸ್ತುತ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಸಿತಾರ ಗುರು ಉಸ್ತಾದ ಶಫೀಕಖಾನ ಅವರು ತಮ್ಮ ಶಿಷ್ಯೆ ಸೃಷ್ಟಿ ಅವರಿಗೆ ಗಂಡ ಕಟ್ಟುವ ಮೂಲಕ ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಇಂಥ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದರು.

ನಮ್ಮ ಹಿರಿಯರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಈ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಭವಿಷ್ಯದ ಕಲಾವಿದರ ಮೇಲಿದೆ. ಗುರುಗಳಿಂದ ಪಡೆದ ಜ್ಞಾನವನ್ನು ಸಮಾಜಮುಖಿಯಾಗಿ ಬಳಕೆ ಮಾಡಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಉಸ್ತಾದ ಶಫೀಕಖಾನ ಅವರು ಈ ಕಾರ್ಯಕ್ರಮದ ಮೂಲಕ ಶಿಷ್ಯಳಿಗೆ ವಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಆನಂತರ ನಡೆದ ಸಿತಾರವಾದನದಲ್ಲಿ ಗುರು-ಶಿಷ್ಯೆ ರಾಗ ಪೂರಿಯಾ ನುಡಿಸಿ ಸಂಗೀತ ರಸಿಕರ ಮನಸೂರೆಗೊಂಡರು. ಅವರಿಗೆ ನಾಡಿನ ಪ್ರಖ್ಯಾತ ತಬಲಾವಾದಕರಾದ ಪಂ. ರವೀಂದ್ರ ಯಾವಗಲ್ ವಾದ್ಯ ಸಹಕಾರ ನೀಡಿದರು.

ಆರಂಭದಲ್ಲಿ ಗಾಯಕಿ ಜಿ. ಸುರಭಿ ಶ್ಯಾಮ ಕಲ್ಯಾಣ ರಾಗ, ವಚನ ಪ್ರಸ್ತುಪಡಿಸಿದರು. ಇದಾದ ಆನಂತರ ನಾಡಿನ ಪ್ರಖ್ಯಾತ ಹಿಂದುಸ್ತಾನಿ ಗಾಯಕ, ಪದ್ಮಶ್ರೀ ಪಂ. ವೆಂಕಟೇಶಕುಮಾರ ಅವರ ಕಂಠಸಿರಿಯಿಂದ ಮೂಡಿಬಂದ ರಾಗ ಕೇದಾರ, ವಚನ ಮತ್ತು ದಾಸರ ಪದ ಸಂಗೀತ ರಸಿಕರಲ್ಲಿ ಧನ್ಯತಾಭಾವ ಮೂಡಿಸಿದವು. ಅವರಿಗೆ ಶ್ರೀಧರ ಮಾಂಡ್ರೆ ತಬಲಾ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.

ಸುರೇಖಾ ಸುರೇಶ, ಜಿ. ಸುರೇಶ ಗೋವಿಂದರೆಡ್ಡಿ, ಪಂ. ಬಿ.ಎಸ್. ಮಠ ದಂಪತಿ, ಪಂ. ರಘುನಾಥ ನಾಕೋಡ ದಂಪತಿ, ಪಂ. ಶ್ರೀಕಾಂತ ಕುಲಕರ್ಣಿ ಹಾಗೂ ಅನೇಕ ಸಂಗೀತಗಾರರು, ಸಂಗೀತಾಸಕ್ತರು ಇದ್ದರು.