ಸಾರಾಂಶ
ಕಾರವಾರ: ಸೆಕೆ ಹಾವಳಿಯಿಂದ ನಿರ್ಮಾಣ ಕಾಮಗಾರಿ, ಬೇಕರಿ, ರಸ್ತೆ ಕಾಮಗಾರಿ, ಕೂಲಿ ಕಾರ್ಮಿಕರು ತತ್ತರಿಸಿದ್ದಾರೆ.
ಮಾರ್ಚ್ ತಿಂಗಳಿನಿಂದ ಆರಂಭವಾದ ಬಿರು ಬಿಸಿಲು, ತೀವ್ರ ಸೆಕೆ ಮುಂದುವರಿದಿದೆ. ಬಿಸಿಲಿನ ಹೊಡೆತ ಜನಜೀವನದ ಮೇಲೂ ಪರಿಣಾಮ ಬೀರಿದೆ.ಕರಾವಳಿಯಲ್ಲಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಈಗ ಮಾಮೂಲಿ ಎಂಬಂತಾಗಿದೆ. ಅದರಲ್ಲೂ ತೇವಾಂಶ 80-85 ಇರುವುದರಿಂದ ತೀವ್ರ ಸೆಕೆಯ ಅನುಭವ ಉಂಟಾಗುತ್ತಿದೆ. ಜನತೆ ಬಿರು ಬಿಸಿಲಿನಲ್ಲಿ ಮನೆಯಿಂದ ಹೊರಬೀಳಲೂ ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಹೀಗಿರುವಾಗ ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ದುಡಿಯುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರು ಬಿಸಿಲಿನ ಝಳಕ್ಕೆ ಬಸವಳಿಯುತ್ತಿದ್ದಾರೆ. ಬಿರು ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಹೊಟ್ಟೆ ತುಂಬಿಕೊಳ್ಳಬೇಕೆಂದರೆ ದುಡಿಯಲೇಬೇಕಾಗಿದೆ. ಬೆವರು ಸುರಿಸುತ್ತ ಕೆಲಸ ಮಾಡುತ್ತಿರುವ ನೋಟ ಈಗ ಎಲ್ಲೆಡೆ ಕಂಡುಬರುತ್ತಿದೆ.ಬೇಕರಿಗಳಲ್ಲಿ ಬಟ್ಟಿಯ ಎದುರು ಕೆಲಸ ಮಾಡಬೇಕು. ಮಿತಿಮೀರಿದ ಉಷ್ಣಾಂಶ, ಜತೆಗೆ ಸುಡುವ ಬೆಂಕಿಯ ಎದುರು ದುಡಿಯಬೇಕು. ಕೆಲಸಗಾರರು ಬೇಕರಿಗಳನ್ನು ತೊರೆಯುತ್ತಿದ್ದಾರೆ. ಆದರೆ ಮಾಲೀಕರಿಗೆ ಜೀವನ ನಿರ್ವಹಣೆ ಆಗಲೇಬೇಕು. ಉತ್ಪಾದನೆ ಕಡಿಮೆಯಾದರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ.
ಕಾರ್ಮಿಕರು, ಬಡವರಿಗೆ ಇಂದು ದುಡಿದರೆ ಮಾತ್ರ ನಾಳೆಯ ಊಟ ಎಂಬ ಪರಿಸ್ಥಿತಿ ಇದೆ. ಹಾಯಾಗಿ ಮನೆಯಲ್ಲಿ ಕುಳಿತರೆ ಬದುಕು ಸಾಗಿಸುವುದು ಹೇಗೆಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ದುಡಿಯುತ್ತಿದ್ದರು. ಆದರೆ ಈ ಬಾರಿ ಸಹಿಸಲು ಅಸಾಧ್ಯವಾದ ಉರಿ ಬಿಸಿಲು, ತೀವ್ರ ಸೆಕೆ, ಬಿಸಿ ಗಾಳಿ ಕೆಲಸ ಮಾಡದೇ ಇದ್ದರೂ ಬಸವಳಿದ ಅನುಭವ. ಹಾಗಿದ್ದರೂ ಬದುಕಿಗಾಗಿ ದುಡಿಯಲೇಬೇಕು. ದುಡಿಯುತ್ತಿದ್ದಾರೆ.ಅಂಗಡಿ ಮಳಿಗೆಗಳು, ಹೊಟೇಲ್ ಗಳು ಹಾಗೂ ವಿವಿಧೆಡೆಯಲ್ಲಿನ ಕೆಲಸಗಾರರು ಕೂಡ ಈಗ ಸೆಕೆಯ ದಳ್ಳುರಿಯಲ್ಲೇ ಕೆಲಸ ಮಾಡುವಂತಾಗಿದೆ. ಅದರಲ್ಲೂ ವಿದ್ಯುತ್ ಕೈಕೊಟ್ಟಲ್ಲಿ ಫ್ಯಾನ್ ಕೂಡ ಬಂದ್ ಆಗಿ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಸೆಕೆಯ ತೀವ್ರತೆ ಕಳೆದು ಮಳೆ ಬಂದರೆ ಸಾಕು ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.
ಈಗ ಕೆಲಸಗಾರರು ಸಿಗುತ್ತಿಲ್ಲ. ನಾನು ಮತ್ತು ನನ್ನ ಪತ್ನಿ ತೀವ್ರ ಸೆಕೆಯಲ್ಲೂ ಜೀವನ ನಿರ್ವಹಣೆಗಾಗಿ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಬಟ್ಟಿಯ ಬೆಂಕಿ, ತೀವ್ರ ಸೆಕೆಯ ನಡುವೆ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ರಾಮನಾಥ ಬೇಕರಿ ಮಾಲಕರು ಪ್ರಕಾಶ್ ನಾಯ್ಕ.